ಕಾಣಿಯೂರು : ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ರಾಧಾಕೃಷ್ಣ ವೇಷಧಾರಿಗಳಾದ ಪುಟಾಣಿಗಳಿಂದ ಇಡೀ ಸಭಾಂಗಣವೇ ನಂದ ಗೋಕುಲವಾಗಿ ಕಂಗೊಳಿಸಿತು. ವರ್ಣರಂಜಿತ ವೇಷಭೂಷಣ, ಕೊಳಲನಾದ , ದುಷ್ಟಸಂಹಾರ ಶಿಷ್ಟಸಂರಕ್ಷಕ ಮುಂತಾದ ನೃತ್ಯ ರೂಪಕಗಳು ಶ್ರೀ ಕೃಷ್ಣನ ಆದರ್ಶ ಸಂದೇಶವನ್ನು ಸಾರುವಂತಿತ್ತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿವರು ದೀಪ ಬೆಳಗಿಸಿ ,ಜಗದೋದ್ಧಾರಕನಾದ ಶ್ರೀಕೃಷ್ಣನಿಗೆ ಪುಷ್ಪಾರ್ಚನೆಯನ್ನು ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ವಿದ್ಯಾರ್ಥಿಗಳಿಂದ ಶ್ರೀಕೃಷ್ಣನ ಸಂದೇಶ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕುಣಿತ ಭಜನೆ ನಡೆದವು.
ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮೊಸರು ಕುಡಿಕೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಿವೀಶ್ ಮುರುಳ್ಯ ಮಾತನಾಡಿ, ವಿದ್ಯಾರ್ಥಿಗಳು ಹೆಳವೆಯಲ್ಲಿ ಶ್ರೀಕೃಷ್ಣನ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಸತ್ಪ್ರಜೆಯಾಗಿ ಬಾಳಬೇಕು ಎಂದರು. ಪೋಷಕಬಂಧು ಧನಂಜಯ ಕೇನಾಜೆ, ಆಂಗ್ಲ ಮಾಧ್ಯಮದ ಮುಖ್ಯಗುರು ನಾರಾಯಣ ಭಟ್ , ಆಂಗ್ಲ ಮಾಧ್ಯಮದ ಸಹ ಮುಖ್ಯಸ್ಥೆ ಅನಿತಾ ಜೆ ರೈ, ಸಹ ಆಡಳಿತಾಧಿಕಾರಿ ಹೇಮಾನಾಗೇಶ್ ರೈ, ಹಿರಿಯ ಶಿಕ್ಷಕಿ ಸವಿತಾ ಕೆ ಉಪಸ್ಥಿತರಿದ್ದರು. ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸಾನ್ವಿ ಮತ್ತು ನಿಶ್ಚಿತ ಪ್ರಾರ್ಥಿಸಿದರು. ಕನ್ನಡ ಮಾಧ್ಯಮದ ಮುಖ್ಯಗುರು ವಿನಯ ವಿ ಶೆಟ್ಟಿ ವಂದಿಸಿದರು. ಶಾಲಾ ಶಿಕ್ಷಕಿಯರಾದ ಭುವನೇಶ್ವರಿ, ಪುಷ್ಪಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವಿಮಲಾ ಸಿ ಎಚ್ ಸಹಕರಿಸಿದರು.