ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳೇ ಕಾರ್ಯಕ್ರಮವನ್ನು ಸಂಘಟಿಸಿ ಶಿಕ್ಷಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಮತ್ತು ವಿನೋದಾವಳಿಗಳನ್ನು ಏರ್ಪಡಿಸಿದ್ದರು . ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪೋಷಕರ ವತಿಯಿಂದ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕವೃಂದಕ್ಕೆ ಶಾಲು ಹೊದಿಸಿ ,ಸ್ಮರಣಿಕೆ ನೀಡಿ ಗೌರವಾರ್ಪಣೆಯನ್ನು ಸಲ್ಲಿಸಿದರು.ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಲಾಯಿತು.
ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದ ಶಾಲಾ ಸಂಚಾಲಕ ಜಯಸೂರ್ಯ ರೈ ಮಾದೋಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಒಬ್ಬ ಗುರುವಿಗೆ ಜಗತ್ತನ್ನೇ ಬದಲಾಯಿಸುವ ಶಕ್ತಿ ಇದೆ. ಉತ್ತಮ ಶಿಕ್ಷಕರನ್ನು ಸಮಾಜ ಎಂದೆಂದೂ ನೆನಪಿಸುತ್ತದೆ. ಅಂತಹ ಗುರುವೃಂದಕ್ಕೆ ಪ್ರಥಮತ: ಗೌರವ ಸಲ್ಲಿಸಬೇಕು ಎಂದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಿವೀಶ್ ಮುರುಳ್ಯ ಮಾತನಾಡಿ, ನನ್ನ ಬಾಲ್ಯದ ಗುರುಗಳನ್ನು ನೆನಪಿಸಿಕೊಂಡಾಗ ಗೌರವದಿಂದ ಈಗಲೂ ಮೈ ರೋಮಾಂಚನಗೊಳ್ಳುತ್ತದೆ ಎಂದರು.
ಈ ಹಿಂದೆ ವಿದ್ಯಾಸಂಸ್ಥೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಗಿರಿಶಂಕರ್ ಸುಲಾಯರವರು ಮಾತನಾಡಿ,ಪ್ರಗತಿ ಕುಟುಂಬದಲ್ಲಿ ದುಡಿಯುತ್ತಿರುವ ಪ್ರತಿಯೊಬ್ಬ ಶಿಕ್ಷಕ-ಶಿಕ್ಷಕೇತರ ವೃಂದದವರ ಅವಿರತ ಶ್ರಮದಿಂದ ಸಂಸ್ಥೆ ಇಂದು ಉನ್ನತ ಮಟ್ಟದಲ್ಲಿ ಬೆಳೆದು ಸರ್ವಸ್ವವನ್ನು ನಮ್ಮ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟಿದೆ. ಇಂತಹ ಶಿಕ್ಷಕ ವೃಂದವನ್ನು ಅಭಿನಂದಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು. ಪೋಷಕರಾದ ಪ್ರಭಾ ಎಸ್ ರೈ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ಕನ್ನಡ ಮಾಧ್ಯಮದ ಮುಖ್ಯಗುರು ವಿನಯ ವಿ ಶೆಟ್ಟಿ ಅವರು ಮಕ್ಕಳ ಸಂಘಟನಾ ಶೈಲಿ ಮತ್ತು ಪೋಷಕರ ಪಾಲ್ಗೊಳ್ಳುವಿಕೆಯನ್ನು ಕಂಡು ಅಭಿನಂದಿಸಿದರು. ಸಂಸ್ಥೆಯಲ್ಲಿ ಮುಖ್ಯಗುರುಗಳಾಗಿ ಕರ್ತವ್ಯನಿರ್ವಹಿಸಿರುವ ಗಿರಿಶಂಕರ್ ಸುಲಾಯರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಜ್ಞಾನೇಶ್ವರಿ, ನಿವೃತ್ತ ಮುಖ್ಯ ಶಿಕ್ಷಕಿ ಸರಸ್ವತಿ ಎಂ, ಆಂಗ್ಲ ಮಾಧ್ಯಮದ ಮುಖ್ಯಗುರು ನಾರಾಯಣ ಭಟ್, ಸಹ ಆಡಳಿತಾಧಿಕಾರಿ ಹೇಮಾನಾಗೇಶ್ ರೈ, ಆಂಗ್ಲ ಮಾಧ್ಯಮದ ಸಹಮುಖ್ಯಸ್ಥೆ ಅನಿತಾ ಜೆ ರೈ, ಹಿರಿಯ ಶಿಕ್ಷಕಿ ಸವಿತಾ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಮಾಧ್ಯಮದ ವಿದ್ಯಾರ್ಥಿನಿಯರಾದ ಸಾನ್ವಿ, ಅಂಕಿತ, ನಿಶ್ಚಿತ ಪ್ರಾರ್ಥಿಸಿದರು. ಕು.ರಾಶಿ ಕೆ ಸಿ ಸ್ವಾಗತಿಸಿ, ಅನುಶ್ರೀ ಎ ಎಂ ವಂದಿಸಿದರು. ವಿದ್ಯಾರ್ಥಿನಿಯರಾದ ಮಾನ್ವಿ ಜಿ ಎಸ್ , ಹನ್ಸಿಕಾ , ಜ್ಯೋತ್ಸ್ನಶ್ರೀ ಕಾರ್ಯಕ್ರಮ ನಿರೂಪಿಸಿದರು. ಪೋಷಕರ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿಯನ್ನು ವಿತರಿಸಲಾಗಿತ್ತು. ವಿದ್ಯಾರ್ಥಿಗಳು ಅತ್ಯುತ್ತಮ ವಿಶೇಷ ಭೋಜನ ವ್ಯವಸ್ಥೆಯನ್ನು ಶಿಕ್ಷಕರಿಗಾಗಿ ಏರ್ಪಡಿಸಿದ್ದರು.