ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

ವ್ಯವಹಾರ ರೂ.287 ಕೋಟಿ, ರೂ.90,24,191, ಶೇ.11 ಡಿವಿಡೆಂಡ್ ಘೋಷಣೆ

ಪುತ್ತೂರು: ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರರವರ ಅಧ್ಯಕ್ಷತೆಯಲ್ಲಿ ಕುಂಬ್ರ ನವೋದಯ ರೈತ ಸಭಾ ಭವನದಲ್ಲಿ ನಡೆಯಿತು. ಸಂಘದ 2023-24 ನೇ ಸಾಲಿನ ಆಡಳಿತ ಮಂಡಳಿ ವರದಿಯಲ್ಲಿ ಸಂಘದ ಲೆಕ್ಕಿಗರಾದ ವೀಣಾ ರೈಯವರು ಸಭೆಗೆ ಮಂಡಿಸಿದರು. ಸಂಘವು ವರದಿ ವರ್ಷದಲ್ಲಿ 4058 ಮಂದಿ ಸದಸ್ಯರಿದ್ದು ರೂ.4,75,33,000 ಪಾಲು ಬಂಡವಾಳವಿರುತ್ತದೆ. ಸರಕಾರದ ಯಾವುದೇ ಪಾಲು ಬಂಡವಾಳ ಇರುವುದಿಲ್ಲ ಎಂದರು. ವರ್ಷಾಂತ್ಯಕ್ಕೆ ವಿವಿಧ ಠೇವಣಿಗಳಾಗಿ ರೂ.28,63,84,854 ಇರುತ್ತದೆ. ಪಡೆದ ಸಾಲಗಳಲ್ಲಿ ವರ್ಷಾಂತ್ಯಕ್ಕೆ ಕೇಂದ್ರ ಬ್ಯಾಂಕ್‌ನಿಂದ ಪಡೆದ ಸಾಲವಾಗಿ ರೂ.36,03,81,765 ಇರುತ್ತದೆ. ಸದಸ್ಯರ ಸಾಲಗಳಲ್ಲಿ ವರ್ಷಾಂತ್ಯಕ್ಕೆ ರೂ.42,39,37,146 ಹೊರಬಾಕಿ ಇರುತ್ತದೆ.ಈ ವೈಕಿ ವಾಯಿದೆ ಮೀರಿದ ಸಾಲ ರೂ.55,06,823 ಇದ್ದ ಸಾಲ ವಸೂಲಾತಿಯಲ್ಲಿ ಶೇ.99 ಒಪ್ರಗತಿ ಸಾಧಿಸಿದೆ ಎಂದು ತಿಳಿಸಿದರು.ನಗದು ಶಿಲ್ಕುಗಳಲ್ಲಿ ವರ್ಷಾಂತ್ಯಕ್ಕೆ ರೂ.25,43,432 ಇರುತ್ತದೆ. ಕೇಂದ್ರ ಬ್ಯಾಂಕ್‌ನಲ್ಲಿ ವರ್ಷಾಂತ್ಯಕ್ಕೆ ರೂ.6,21,09,808 ಬ್ಯಾಂಕ್‌ನ ವಿವಿಧ ಖಾತೆಗಳಲ್ಲಿ ನಗದು ಶಿಲ್ಕು ಇರುತ್ತದೆ. ಧನವಿವಿಯೋಗದಲ್ಲಿ ವರ್ಷಾಂತ್ಯಕ್ಕೆ ರೂ.21,75,95,329 ಇರುತ್ತದೆ. ಇತರ ಸಂಸ್ಥೆಗಳಲ್ಲಿ ವರ್ಷಾಂತ್ಯಕ್ಕೆ ರೂ.1,80,85,100 ಪಾಲು ಬಂಡವಾಳ ಇರುತ್ತದೆ. ವ್ಯಾಪಾರ ವಹಿವಾಟಿನಲ್ಲಿ ವರ್ಷಾಂತ್ಯಕ್ಕೆ ರೂ.8,39,167 ಲಾಭ ಗಳಿಸಿದೆ. ವರದಿ ಸಾಲಿನಲ್ಲಿ ಸಂಘವು ರೂ.90,24,191.15 ನಿವ್ವಳ ಲಾಭ ಗಳಿಸಿದೆ ಎಂದು ಅವರು ವರದಿ ವಾಚನದಲ್ಲಿ ತಿಳಿಸಿದರು.


ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರರವರು ಮಾತನಾಡಿ, ಸಂಘವು ಒಟ್ಟು 286.56 ಕೋಟಿ ರೂಪಾಯಿಗಳ ವ್ಯವಹಾರ ನಡೆಸಿದ್ದು ಒಟ್ಟು ರೂ.90,24,191 ನಿವ್ವಳ ಲಾಭ ಗಳಿಸಿದೆ. ಇದರಲ್ಲಿ ಶೇ. 2 ಅನ್ನು ಕಟ್ಟಡ ನಿಧಿಗೆ ಮೀಸಲು ಇಟ್ಟು ಶೇ.11 ಡಿವಿಡೆಂಡ್ ಅನ್ನು ಸದಸ್ಯರುಗಳಿಗೆ ನೀಡುವುದಾಗಿ ಘೋಷಣೆ ಮಾಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್.ರವರು 2023-24 ನೇ ಸಾಲಿನ ಲೆಕ್ಕಪರಿಶೋಧನೆಯ ವರದಿಯ ಪರಿಶೀಲನೆ ಮತ್ತು ಮಂಜೂರಾತಿ ಹಾಗೂ 2024-25 ನೇ ಸಾಲಿಗೆ ತಯಾರಿಸಿದ ಅಂದಾಜು ಬಜೆಟ್‌ಗೆ ಸಭೆಯ ಮಂಜೂರಾತಿ ಪಡೆದುಕೊಂಡರು.


ಹಿರಿಯ ಸದಸ್ಯರಗಳಿಗೆ/ ಕ್ರೀಡಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಮಹಾಸಭೆಯ ವಿಶೇಷವಾಗಿ ಸನ್ಮಾನ ಕಾರ್ಯಕ್ರಮ ನಡೆಯಿತು. ಸಂಘದ ವ್ಯಾಪ್ತಿಗೆ ಬರುವ ಒಳಮೊಗ್ರು, ಅರಿಯಡ್ಕ, ಬಡಗನ್ನೂರು ಮತ್ತು ಪಡುವನ್ನೂರು ಗ್ರಾಮದ ಹಿರಿಯ ಸದಸ್ಯರುಗಳಿಗೆ ಹಾಗೇ ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಒಳಮೊಗ್ರು ಗ್ರಾಮದ ಹಿರಿಯ ಸದಸ್ಯರುಗಳಾದ ಬಟ್ಯಪ್ಪ ರೈ ಕಲ್ಲಡ್ಕ, ಲೀಲಾವತಿ ರೈ ನೀರ್ಪಾಡಿ, ಸುಮಿತ್ರ ರೈ ಬಿಜಳ, ಕೊರಗಪ್ಪ ದರ್ಬೆತ್ತಡ್ಕ, ನಾರಾಯಣ ರೈ ಕೈಕಾರ, ಅರಿಯಡ್ಕ ಗ್ರಾಮದ ಚಿಕ್ಕಪ್ಪ ನಾಯ್ಕ್ ಅರಿಯಡ್ಕ, ಪದ್ಮಾವತಿ ರೈ, ವಾಸು ಪೂಜಾರಿ ಗುಂಡ್ಯಡ್ಕ,ಶಿವರಾಮ ಭಟ್ ಬಳ್ಳಿಕಾನ, ಶಂಕರಿ ಸಿ.ರೈ ಅರಿಯಡ್ಕ, ಬಡಗನ್ನೂರು ಗ್ರಾಮದ ಚಿಕ್ಕಪ್ಪ ಗೌಡ ಉಳಯ, ದಿವಾಕರ ಪ್ರಭು ಮುಂಡಕೊಚ್ಚಿ, ವಿಷ್ಣು ಭಟ್ ಪಾದೆಕರಿಯ, ಬಾಲಕೃಷ್ಣ ಬೋರ್ಕರ್ ಪೆರಿಗೇರಿ, ಕಿಶೋರ್ ಬೋರ್ಕರ್, ಪಡುವನ್ನೂರು ಗ್ರಾಮದ ಮ್ಯೊದು ಕುಂಞ್ ಸಸಿಹಿತ್ಲು,ಮಹಮ್ಮದ್ ಎಸ್.ಸಸಿಹಿತ್ಲು, ನಾರಾಯಣ ಗೌಡ ಕನ್ನಡ್ಕ, ಮ್ಯೊದು ಕುಂಞ್ ಕಾವುಂಜ, ಹೊನ್ನಪ್ಪ ಗೌಡ ಸಾರೆಕೂಟೇಲುರವರುಗಳನ್ನು ಈ ಸಂದರ್ಭದಲ್ಲಿ ಸಂಘದ ವತಿಯಿಂದ ಪೇಟಾ, ಶಾಲು, ಹಾರ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.


ಕ್ರೀಡಾ ಕ್ಷೇತ್ರದ ಸಾಧಕರಾದ ಇಂಡೋ ನೇಪಾಳ ಇಂಟರ್‌ನ್ಯಾಷನಲ್ ಸ್ಲೋರ್ಟ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ವಾಲಿಬಾಲ್ ಆಟಗಾರ ಶಶಾಂಕ್ ರೈ ಪಟ್ಟೆ, ರಾಷ್ಟ್ರಮಟ್ಟದ ವೈಟ್‌ಲಿಪ್ಟಿಂಗ್ ಸ್ಪರ್ಧೆಗೆ ಆಯ್ಕೆಯಾದ ದೃಶ್ಯ ಕೆ.ವಿ ಕನ್ನಡ್ಕ, ಈಜು ಸ್ಪರ್ಧೆಯಲ್ಲಿ ರಾಷ್ಟçಮಟ್ಟಕ್ಕೆ ಆಯ್ಕೆಯಾದ ಅನ್ವಿತ್ ರೈ ಬಾರಿಕೆ, ರಾಷ್ಟ್ರಮಟ್ಟದ ಗಂಡೆಸೆತ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ತನುಶ್ರೀ ರೈ ಬಡಕ್ಕಾಯೂರು, ತ್ರಿವಿಧ ಜಿಗಿತ ಮತ್ತು ರಿಲೇ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಸ್ಪರ್ಧಿಸಿದ್ದ ಸಂಜತ್ ಎಂ ಮಡ್ಯಂಗಳ, ರಾಜ್ಯಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅರ್ಪಿತಾ ಬಳ್ಳಿಕಾನ ಮತ್ತು ರಾಜ್ಯಮಟ್ಟದ ಪ್ರಾಂತೀಯ ಕ್ರೀಡಾಕೂಟದಲ್ಲಿ ತೃತೀಯ ಸ್ಥಾನ ಪಡೆದ ದೃತಿ ಸಿ.ಶೆಟ್ಟಿ ಕೈಕಾರರವರುಗಳಿಗೆ ಈ ಸಂದರ್ಭದಲ್ಲಿ ಶಾಲು,ಹಾರ,ಸ್ಮರಣಿಕೆ ಹಾಗೂ ನಗದು ಪುರಸ್ಕಾರ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.


ಸಂಘದ ಬೆಳವಣಿಗೆಗೆ ಬಂದ ಸಲಹೆ ಸೂಚನೆಗಳು
ಸಂಘದ ಬೆಳವಣಿಗೆಗೆ ಸದಸ್ಯರುಗಳು ವಿವಿಧ ಸಲಹೆ ಸೂಚನೆಗಳನ್ನು ಹಾಗೇ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸದಸ್ಯ ಸುನೀಲ್ ಬೋರ್ಕರ್‌ರವರು ಮಾತನಾಡಿ, ಸಂಘದ ವ್ಯಾಪ್ತಿಗೆ ಬರುವ ನಾಲ್ಕು ಗ್ರಾಮಗಳಲ್ಲೂ ಅರ್ಧ ಎಕರೆಯಷ್ಟು ಜಾಗ ಖರೀದಿಸಿ ಮುಂದಕ್ಕೆ ಪ್ರತಿಯೊಂದು ಗ್ರಾಮದಲ್ಲೂ ಒಂದೊಂದು ಸಹಕಾರಿ ಸಂಘ ನಿರ್ಮಾಣ ಮಾಡುವ ಬಗ್ಗೆ ಯೋಜನೆ ಹಾಕಿಕೊಳ್ಳಬೇಕು ಇದಕ್ಕೆ ಮುಂದಿನ ಅಂದಾಜು ಬಜೆಟ್‌ನಲ್ಲಿ ಆಯವ್ಯಯವನ್ನು ಜೋಡಿಸಬೇಕು ಎಂದು ಸಲಹೆ ನೀಡಿದರು ಹಾಗೇ ಸದಸ್ಯರಿಗೆ ಡಿವಿಡೆಂಡ್ ಗರಿಷ್ಠ ಶೇ.15 ರಷ್ಟು ಕೊಡಬೇಕು ಎಂದು ಮನವಿ ಮಾಡಿಕೊಂಡರು. ನವೀನ್‌ರವರು ಮಾತನಾಡಿ, ಕೃಷಿಗೆ ಪೂರಕವಾದ ಅನ್ವೇಷಣೆಗಳನ್ನು ಮಾಡುವವರಿಗೆ ಸಂಘದ ವತಿಯಿಂದ ಆರ್ಥಿಕ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿಕೊಂಡರು. ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು. ಶಿವರಾಮ ಮಣಿಯಾಣಿಯವರು ಮಾತನಾಡಿ, ಪ್ರತಿ ವರ್ಷ ಬೆಳೆ ಸಮೀಕ್ಷೆ ಮಾಡುವ ಬದಲು 3 ಅಥವಾ 5 ವರ್ಷಕ್ಕೊಮ್ಮೆ ಬೆಳೆ ಸಮೀಕ್ಷೆ ಮಾಡುವಂತೆ ಸರಕಾರಕ್ಕೆ ಬರೆದುಕೊಳ್ಳಿ ಕೇಳಿಕೊಂಡರು. ಇದಕ್ಕೆ ಅಧ್ಯಕ್ಷರು ಪ್ರತಿಕ್ರಿಯೆ ನೀಡಿ ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳುವ ಎಂದು ತಿಳಿಸಿದರು. ತಿಲಕ್ ರೈ ಕುತ್ಯಾಡಿ ಮಾತನಾಡಿ, ಅರಿಯಡ್ಕ ಗ್ರಾಮದಲ್ಲೂ ಒಂದು ಸಹಕಾರಿ ಸಂಘ ಆಗಬೇಕು ಎಂದು ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ಇಕ್ಬಾಲ್ ಹುಸೈನ್ ಕೌಡಿಚ್ಚಾರುರವರು, ಈಗಾಗಲೇ ಸಂಘದ ಕಟ್ಟಡವಿದ್ದು ಇದನ್ನು ದುರಸ್ತಿ ಮಾಡುವುದು ಅಸಾಧ್ಯ ಆದ್ದರಿಂದ ಹೊಸ ಕಟ್ಟಡ ನಿರ್ಮಾಣದೊಂದಿಗೆ ಕೇವಲ ರೇಷನ್ ಮಾತ್ರ ನೀಡದೆ ಬ್ಯಾಂಕಿಗ್ ವ್ಯವಹಾರವನ್ನು ಕೂಡ ಆರಂಭಿಸಬೇಕು ಎಂದು ಸಲಹೆ ನೀಡಿದರು. ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಶಾಂತಿವನ,ರಾಮಕೃಷ್ಣ ಭಟ್, ರಾಜೇಶ್ ರೈ ಪರ್ಪುಂಜರವರುಗಳು ವಿವಿಧ ಸಲಹೆಗಳನ್ನು ನೀಡಿದರು.


ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಉಮೇಶ್ ಗೌಡ ಕನ್ನಯ, ನಿರ್ದೇಶಕರುಗಳಾದ ವಿನೋದ್ ಶೆಟ್ಟಿ ಅರಿಯಡ್ಕ, ನಿತೀಶ್ ಕುಮಾರ್ ಶಾಂತಿವನ, ವಾರಿಜಾಕ್ಷಿ ಪಿ.ಶೆಟ್ಟಿ, ಸಂತೋಷ್ ರೈ ಕೈಕಾರ, ರಘುರಾಮ ಪಾಟಾಳಿ, ಸೂರ್ಯನಾರಾಯಣ, ಉಷಾ ನಾರಾಯಣ್ ಎಚ್, ಸೂರಪ್ಪ, ರಾಮಕೃಷ್ಣ ನಾಯ್ಕ ಮುಡಾಲ, ಸುಕುಮಾರ ಬಿ ಹಾಗೂ ವಲಯ ಮೇಲ್ವಿಚಾರಕ ಶರತ್ ಡಿ ಉಪಸ್ಥಿತರಿದ್ದರು. ಪದ್ಮನಾಭ ಆಚಾರ್ಯ ಪ್ರಾರ್ಥಿಸಿದರು. ಸಂಘದ ಶಾಖಾ ವ್ಯವಸ್ಥಾಪಕ ರಾಜ್‌ಪ್ರಕಾಶ್ ರೈ ಕುಂಬ್ರ ವಂದಿಸಿದರು. ಒಳಮೊಗ್ರು ಗ್ರಾಪಂ ಸದಸ್ಯ ಮಹೇಶ್ ರೈ ಕೇರಿ ಮತ್ತು ಸುಭಾಶ್ಚಂದ್ರ ರೈ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಬ್ಬಂದಿಗಳಾದ ಉದಯಶಂಕರ್ ಕೆ.ಪಿ, ರಾಜ್‌ಕಿರಣ್ ರೈ, ಭರತ್ ಎಸ್.ಎನ್, ಶಾಂತಕುಮಾರ್, ವೆಂಕಪ್ಪ ಹಾಗೇ ಹರೀಶ್ ಕೆ, ಹರ್ಷಿತಾ, ಪ್ರೀತಿ, ಕರುಣಾಕರ, ನಿತ್ಯನಿಧಿ ಸಂಗ್ರಹಕರಾದ ಪ್ರದ್ವಿನ್ ಪ್ರಸಾದ್, ಶರತ್‌ರಾಜ್ ಸಹಕರಿಸಿದ್ದರು.


ಸಂಘದ ಅಭಿವೃದ್ಧಿಗೆ ಸರ್ವರ ಸಹಕಾರ ಅಗತ್ಯ: ಪ್ರಕಾಶ್ಚಂದ್ರ ರೈ ಕೈಕಾರ
ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರರವರು ಸ್ವಾಗತದೊಂದಿಗೆ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ಸಂಘ ಸ್ಥಾಪನೆಗೊಂಡು 48 ವರ್ಷ ತುಂಬಿದ್ದು ಈ ಸಂದರ್ಭದಲ್ಲಿ ನಮ್ಮ ಕಾರ್ಯಚಟುವಟಿಯ 4 ಗ್ರಾಮಗಳ ರೈತ ಸದಸ್ಯರ ದಿನನಿತ್ಯದ ಬದುಕಿನಲ್ಲಿ ಆರ್ಥಿಕ ಸಬಲತೆಯನ್ನು ಸಾಧಿಸುವಲ್ಲಿ ಹೊಸ ಮೈಲಿಗಲ್ಲನ್ನು ದಾಟಿದೆ ಎಂದರು. ಮುಂದಿನ ದಿನಗಳಲ್ಲಿ ಏಕರೂಪ ತಂತ್ರಾಂಶ ಅಳವಡಿಕೆಯೊಂದಿಗೆ ಹಾಗೂ ಎಲ್ಲಾ ಅಂಕಿ ಅಂಶಗಳು ಡಿಜಿಟಲೀಕರಣ ಮಾಡುವ ಯೋಜನೆ ಇದೆ ಎಂದರು.ಕೇವಲ ಲಾಭಗಳಿಸುವುದೇ ಮೂಲ ಗುರಿಯನ್ನಾಗಿಸದೆ ಸಾಮಾಜಿಕ ಬದ್ಧತೆ, ಪರಸ್ಪರ ಸಹಕಾರ ಮನೋಭಾವನೆಯೊಂದಿಗೆ ಹತ್ತು ಹಲವು ಸಾಮಾಜಿಕ ಚಟುವಟಿಕೆಯೊಂದಿಗೆ ಇನ್ನಷ್ಟು ಸೇವೆಯೊಂದಿಗೆ ಸಮಾಜದ ಪ್ರಗತಿಗೆ ಕೈಜೋಡಿಸಲು ಸದಸ್ಯರ ಸಹಕಾರ ಯಾಚಿಸಿದರು.


ವರದಿ ಸಾಲಿನಲ್ಲಿ ಕೈಗೊಂಡ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸುತ್ತಾ, ಪಡುವನ್ನೂರು ಗ್ರಾಮದ ಸುಳ್ಯಪದವಿನಲ್ಲಿ ಸುಬ್ರಹ್ಮಣ್ಯ ಭಟ್ ಇವರು ದಾನವಾಗಿ ಸಂಘಕ್ಕೆ ನೀಡಿದ ಜಾಗದಲ್ಲಿ ಸಂಘದ ಶಾಖಾ ಕಛೇರಿ ಇತ್ತು ಇದನ್ನು ಕೆಡವಿ ನೂತನ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲು ಈಗಾಗಲೇ ಶಿಲಾನ್ಯಾಸ ಮಾಡಲಾಗಿದ್ದು ಆಡಳಿತ ಮಂಡಳಿ ಅವಧಿ ಮುಗಿಯುವುದರೊಳಗೆ ಕಟ್ಟಡದ ಉದ್ಘಾಟನೆ ಮಾಡಲಿದ್ದೇವೆ ಎಂದು ತಿಳಿಸಿದರು. ನಗದು ಪಾವತಿ ಮತ್ತು ಸ್ವೀಕೃತಿಯ ಸಮಯದಲ್ಲಿ ಸಂದೇಶಗಳು ರೈತ ಸದಸ್ಯರ ಮೊಬೈಲ್‌ಗಳಲ್ಲಿ ಬರುವಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಬೆಳೆಸಾಲ ಮತ್ತು ಕೃಷಿ ಅಭಿವೃದ್ಧಿ ಸಾಲಗಳಿಗೆ ವೈಯುಕ್ತಿಕ ವಿಮೆಯನ್ನು ಮಾಡಿಸುವ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದರು. ಮರಣ ಸಾಂತ್ವನ ನಿಧಿ ಅಡಿಯಲ್ಲಿ 2023-24ನೇ ಸಾಲಿನಲ್ಲಿ ರೂ.3,10,000 ವ್ಯಯ ಮಾಡಿಸಲಾಗಿದೆ. ಪಡಿತರ ವ್ಯವಸ್ಥೆಯಲ್ಲಿ ಎಲೆಕ್ಟ್ರಾನಿಕ್ಸ್ ಸ್ಕೇಲ್ ಅನ್ನು ಅಳವಡಿಸಲಾಗಿದೆ ಎಂದು ತಿಳಿಸಿದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರರವರು ಮುಂದಿನ ದಿನಗಳಲ್ಲಿ ಸಂಘದ ಬೆಳವಣಿಗೆಗೆ ಸದಸ್ಯರ ಸಂಪೂರ್ಣ ಸಹಕಾರ ಕೋರಿ, ಪ್ರತ್ಯಕ್ಷ ಪರೋಕ್ಷವಾಗಿ ಸಹಕಾರ ನೀಡುತ್ತಿರುವ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸಿದರು.

LEAVE A REPLY

Please enter your comment!
Please enter your name here