ಸದೃಢವಾದ ಸಂಸ್ಥೆಗೆ ಗ್ರಾಹಕರೇ ಬೆನ್ನೆಲುಬು-ಕೆ. ಜೈರಾಜ್ ಬಿ. ರೈ
ಉತ್ತಮ ಸೇವೆ ಕೊಡಲು ಶಾಖೆಯಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಬೇಕು-ಮಧು ಎಸ್. ಮನೋಹರ್
ರ್ಶೇ.25 ಡಿವಿಡೆಂಡ್ ಕೊಡುವ ಸಂಸ್ಥೆ ರಾಮಕೃಷ್ಣ ಸೊಸೈಟಿ-ಸವಣೂರು ಸೀತಾರಾಮ ರೈ
ಪುತ್ತೂರು: ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಸಮೀಪದ ಅಮರ್ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ ಶ್ರೀರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನವೀಕೃತ ಹವಾನಿಯಂತ್ರಿತ ಪುತ್ತೂರು ಶಾಖಾ ಕಛೇರಿ ಉದ್ಘಾಟನೆ ಸೆ.11ರಂದು ನಡೆಯಿತು.
ಪುತ್ತೂರು ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್ ಹವಾನಿಯಂತ್ರಿತ ಶಾಖಾ ಕಛೇರಿ ಉದ್ಘಾಟಿಸಿ ಮಾತನಾಡಿ ಜನರಿಗೆ ಉತ್ತಮ ಸೇವೆ ಕೊಡಬೇಕಾದರೆ ಶಾಖೆಯಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಬೇಕು. ಪುತ್ತೂರು ಪುರಸಭೆಯಿಂದ ನಗರಸಭೆ ಆದ ಮೇಲೆ ಬದಲಾವಣೆ ಆಗಿದೆ. ಚಿಕ್ಕ ಪಟ್ಟಣವನ್ನು ನಗರ ಮಾಡಬೇಕಾದರೆ ಎಲ್ಲರ ಸಹಕಾರ ಬೇಕು. ರಾಜ್ಯ ಹಾಗೂ ಕೇಂದ್ರ ಸರಕಾರದ ಸಹಕಾರದಿಂದ ಪುತ್ತೂರನ್ನು ಅಭಿವೃದ್ಧಿ ಮಾಡುವ ಚಿಂತನೆ ಇದೆ ಎಂದರು. ಈ ಸಂಸ್ಥೆ ಕೂಡ ಅಭಿವೃದ್ಧಿ ಹೊಂದಬೇಕಾದರೆ ನಿಮ್ಮೆಲ್ಲರ ಸಹಕಾರ ಬೇಕು. ಇಲ್ಲಿರುವ ನಗರಸಭಾ ಕಟ್ಟಡವನ್ನು ನವೀಕರಿಸಲು ಕ್ರಮ ಕೈಗೊಂಡಿದ್ದೇವೆ ಎಂದರು.
ಪುತ್ತೂರು ಶಾಖಾ ಉಸ್ತುವಾರಿ ನಿರ್ದೇಶಕ ಸವಣೂರು ಸೀತಾರಾಮ ರೈ ಸವಣೂರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸುಮಾರು 30 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಸ್ಥಾಪನೆಗೊಂಡ ರಾಮಕೃಷ್ಣ ಸೊಸೈಟಿಯ ಪುತ್ತೂರಿನ ಶಾಖೆ 1996ರಲ್ಲಿ ಆರಂಭಗೊಂಡಿತು. ಈ ಶಾಖೆಯಲ್ಲಿ 17 ಕೋ.ರೂ.ಗಿಂತಲೂ ಮಿಕ್ಕಿ ಠೇವಣಾತಿ ಇದೆ. ರೂ.85 ಲಕ್ಷ ರೂ ಲಾಭ ಹೊಂದಿದೆ. ರಾಮಕೃಷ್ಣ ಸೊಸೈಟಿ ಸುಮಾರು 25 ಶಾಖೆಗಳನ್ನು ಹೊಂದಿದೆ. ದೊಡ್ಡ ವ್ಯವಹಾರ ಮಾಡುವ ಪುತ್ತೂರು ಶಾಖೆಯಲ್ಲಿ ಗ್ರಾಹಕರಿಗೋಸ್ಕರ ಹವಾನಿಯಂತ್ರಿತ ವ್ಯವಸ್ಥೆಯನ್ನು ಮಾಡಿ ಪುತ್ತೂರಿನ ಜನತೆಗೆ ಅರ್ಪಿಸುತ್ತಿದ್ದೇವೆ. ಅವಿಭಜಿತ ದ.ಕ.ಜಿಲ್ಲೆಯಲ್ಲಿ ಕಳೆದ 6 ವರ್ಷಗಳಿಂದ ಶೇ.25 ಡಿವಿಡೆಂಡ್ ಕೊಡುವ ಸಂಸ್ಥೆ ರಾಮಕೃಷ್ಣ ಸೊಸೈಟಿ ಆಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ. ಜೈರಾಜ್ ಬಿ. ರೈ ಮಾತನಾಡಿ 1996ರಲ್ಲಿ ಪುತ್ತೂರಲ್ಲಿ ಆರಂಭಗೊಂಡ ಶಾಖೆ 30 ಕೋ.ರೂ.ಗೂ ಅಧಿಕ ವ್ಯವಹಾರ ಹೊಂದಿದೆ. ಹಿರಿಯರು ಕೊಟ್ಟ ಆಶೀರ್ವಾದದಿಂದ ಮುಂದುವರಿಯುತ್ತಿದ್ದೇವೆ. ಈ ಶಾಖೆಯನ್ನು ನವೀಕೃತಗೊಳಿಸಿ ಹವಾನಿಯಂತ್ರಿತವಾಗಿ ಮಾಡಲಾಗಿದೆ. ಕಟ್ಟಡದ ಮಾಲಕರು ತುಂಬು ಹೃದಯದ ಸಹಕಾರ ನೀಡಿದ್ದಾರೆ ಎಂದರು. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಶೇ.25 ಡೆವಿಡೆಂಡ್ ನೀಡುತ್ತಿದೆ. ಸುದೃಢವಾದ ಸಂಸ್ಥೆಗೆ ನೀವೇ ಬೆನ್ನೆಲುಬು ನಿಮ್ಮ ಸಹಕಾರ ನಿರಂತರ ಇರಲಿ ಎಂದರು.
ಪುತ್ತೂರು ಶಾಖಾ ಸಲಹಾ ಸಮಿತಿ ಅಧ್ಯಕ್ಷ ಅರಿಯಡ್ಕ ಚಿಕ್ಕಪ್ಪ ನಾಕ್, ಮಹಾಪ್ರಬಂಧಕ ಗಣೇಶ್ ಜಿ.ಕೆ., ಸಂಘದ ನಿರ್ದೆಶಕರುಗಳಾದ ಕುಂಬ್ರ ದಯಾಕರ ಆಳ್ವ, ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ಶಾಖಾ ಕಛೇರಿಯ ಸಿಬಂದಿಗಳಾದ ಬಾಲಕೃಷ್ಣ, ಅಕ್ಷತಾ ಹಾಗೂ ಸಪ್ತಮಿರವರನ್ನು ಗೌರವಿಸಲಾಯಿತು. ಪುತ್ತೂರು ಶಾಖೆಯ ಸಿಬಂದಿ ಅಕ್ಷತಾ ಪ್ರಾರ್ಥಿಸಿದರು. ಶಾಖಾ ವ್ಯವಸ್ಥಾಪಕ ಚಂದ್ರಹಾಸ ಶೆಟ್ಟಿ ವಂದಿಸಿದರು. ವಕೀಲ ದುರ್ಗಾಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.
ಸಲಹಾ ಸಮಿತಿ ಸದಸ್ಯರಿಗೆ ಗೌರವಾರ್ಪಣೆ
ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ. ಜೈರಾಜ್ ಬಿ. ರೈ, ಪುತ್ತೂರು ಶಾಖಾ ಸಲಹಾ ಸಮಿತಿ ಸದಸ್ಯರುಗಳಾದ ಸುಂದರ ರೈ ಸವಣೂರು, ಜಯರಾಮ ರೈ ನುಳಿಯಾಲು, ಉದಯಶಂಕರ ಶೆಟ್ಟಿ, ಗಂಗಾಧರ ರೈ, ರೂಪಲೇಖಾ ಆಳ್ವ, ದುರ್ಗಾಪ್ರಸಾದ್ ರೈ ಕುಂಬ್ರರವರನ್ನು ಶಾಲು ಹಾಕಿ ಗೌರವಿಸಲಾಯಿತು.
ಕಟ್ಟಡ ಮಾಲಕಿ ಹಾಗೂ ಶಾಖಾ ವ್ಯವಸ್ಥಾಪಕರಿಗೆ ಸನ್ಮಾನ
ಶಾಖಾ ಕಟ್ಟಡ ಅಮರ್ ಕಾಂಪ್ಲೆಕ್ಸ್ ಮಾಲಕಿ ಅಮಿತಾ ಪಿ. ರೈ ಹಾಗೂ ಶಾಖಾ ವ್ಯವಸ್ಥಾಪಕ ಚಂದ್ರಹಾಸ ಶೆಟ್ಟಿರವರನ್ನು ಸನ್ಮಾನಿಸಲಾಯಿತು. ಶಾಲು, ಸ್ಮರಣಿಕೆ, ಫಲಪುಷ್ಪ ನೀಡಿ ಗಣ್ಯರು ಸನ್ಮಾನಿಸಿದರು.