ಭಕ್ತಕೋಡಿ: ನಡೆಯಲು ಸಾಧ್ಯವಾಗದೇ ಹೊರಳಾಡುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ

0

ಪುತ್ತೂರು: ಅನಾರೋಗ್ಯಕ್ಕೀಡಾಗಿ ಎರಡು ದಿನಗಳಿಂದ ಮಲಗಿದ್ದಲ್ಲೇ ಇದ್ದ ವ್ಯಕ್ತಿಯೋರ್ವರನ್ನು ಉಪಚರಿಸಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಸರ್ವೆ ಗ್ರಾಮ ಭಕ್ತಕೋಡಿಯಲ್ಲಿ ಸೆ.11ರಂದು ನಡೆದಿದೆ.

ಸರ್ವೆ ಗ್ರಾಮ ಪರಿಸರದಲ್ಲಿ ಬುಟ್ಟಿ ಹೆಣೆಯುವ ಕಾಯಕ ಮಾಡುತ್ತಿದ್ದ ಅಣ್ಣು ಎಂಬವರು ಭಕ್ತಕೋಡಿಯಲ್ಲಿ ಕಟ್ಟಡವೊಂದರ ಹೊರಗಡೆ ರಾತ್ರಿ ವೇಳೆ ಮಲಗಿದ್ದು ಅವರು ಅಲ್ಲಿಂದ ಆಯ ತಪ್ಪಿ ಕೆಳಗೆ ಬಿದ್ದಿದ್ದರು ಎನ್ನಲಾಗಿದೆ. ಸೊಂಟಕ್ಕೆ ತೀವ್ರ ಗಾಯಗೊಂಡಿದ್ದ ಅವರು ನಡೆದಾಡಲೂ ಸಾಧ್ಯವಾಗದೇ ಹೊರಳಾಡುತ್ತಿದ್ದರು. ಇದನ್ನು ಗಮನಿಸಿದ ಸರ್ವೆ ಸೌಹಾರ್ದ ವೇದಿಕೆಯ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿಯವರು ಅಣ್ಣು ಅವರನ್ನು ಪ್ರಾಥಮಿಕವಾಗಿ ಉಪಚರಿಸಿ ಬಳಿಕ 108 ಸಂಖ್ಯೆಯ ಆಂಬ್ಯಲೆನ್ಸ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದು ಬಳಿಕ ಆಂಬ್ಯಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸುವಲ್ಲಿಯೂ ನೆರವಾದರು. ಸ್ಥಳೀಯ ಆಟೋ ರಿಕ್ಷಾ ಚಾಲಕರು ಸಹಕಾರ ನೀಡಿದರು. ಅಣ್ಣು ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ ಬಳಿಕ ಅಣ್ಣು ಅವರಿಗೆ ಸರ್ಜರಿ ನಡೆಸಬೇಕಾದರೆ ನೀವು ಯಾರಾದರೂ ಜೊತೆಗೆ ನಿಲ್ಲಬೇಕು, ಸಹಿ ಮಾಡಿ ಕೊಡಬೇಕು ಎಂದು ಎಂದು ಆಸ್ಪತ್ರೆಯವರು ಹೇಳಿದ್ದು ಈ ವೇಳೆ ‘ನಾವು ಮಾನವೀಯ ನೆಲೆಯಲ್ಲಿ ಅವರನ್ನು ಉಪಚರಿಸಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದ್ದೇವೆ, ನಮ್ಮನ್ನು ಜೊತೆಗೆ ನಿಲ್ಲಬೇಕು, ಸಹಿ ಮಾಡಿಕೊಡಬೇಕು ಎಂದೆಲ್ಲಾ ಕೇಳುವುದು ನ್ಯಾಯವಲ್ಲ ಎಂದು ಅಣ್ಣು ಅವರನ್ನು ಆಸ್ಪತ್ರೆಗೆ ದಾಖಲಿಸಿದವರು ಹೇಳಿದ್ದಾರೆ.

ಅನಾರೋಗ್ಯಕ್ಕೆ ತುತ್ತಾಗಿ ರಸ್ತೆ ಬದಿಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಮಾನವೀಯ ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದರೆ ಅವರನ್ನೇ ರೋಗಿಯ ಜೊತೆ ನಿಲ್ಲಬೇಕು ಎಂದು ಹೇಳುವುದು ಯಾವ ನ್ಯಾಯ? ಈ ರೀತಿ ಮಾಡಿದರೆ ಆಪತ್ಕಾಲದಲ್ಲಿ ನೆರವಾಗುವುದಾದರೂ ಹೇಗೆ? ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here