ಹಳೆನೇರೆಂಕಿ: ತಾ| ಮಟ್ಟದ ಖೋ ಖೋ ಪಂದ್ಯಾಟ – ಮಾನಸಿಕ, ದೈಹಿಕ ಆರೋಗ್ಯಕ್ಕೆ ಕ್ರೀಡೆ ಅವಶ್ಯಕ: ಸುಚೇತಾ ಬಿ

0

ರಾಮಕುಂಜ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆ ಹಳೆನೇರೆಂಕಿ ಇವರ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಬಾಲಕ-ಬಾಲಕಿಯರ ಖೋ ಖೋ ಪಂದ್ಯಾಟ ಸೆ.13ರಂದು ಹಳೆನೇರೆಂಕಿ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.

  • ಕ್ರೀಡಾಕೂಟ ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಬಿ.,ಅವರು ಮಾತನಾಡಿ, ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಕ್ರೀಡೆ ಅವಶ್ಯಕವಾಗಿದೆ. ಆದ್ದರಿಂದ ಮಕ್ಕಳು ಕ್ರೀಡೆಯಲ್ಲಿ ಹೆಚ್ಚು ತೊಡಗಿಕೊಳ್ಳಬೇಕು. ಎಲ್ಲರೂ ಗೆಲ್ಲುವ ಹುಮ್ಮಸ್ಸಿನೊಂದಿಗೆ ಆಟವಾಡಿ, ಸೋತಾಗ ಕುಗ್ಗದೇ ಮುಂದಿನ ಗೆಲುವಿಗೆ ಪ್ರಯತ್ನಿಸಿ ಎಂದರು.
  • ಹಳೆನೇರೆಂಕಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಹೊನ್ನಪ್ಪ ಗೌಡ ಮರಂಕಾಡಿ ಅವರು ಮಾತನಾಡಿ, ಶತಮಾನೋತ್ಸವದ ಸಂಭ್ರಮದಲ್ಲಿರುವ ಶಾಲೆಗೆ ರಾಮಕುಂಜ ಗ್ರಾ.ಪಂ. ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಉತ್ತಮ ಕ್ರೀಡಾಂಗಣ ನಿರ್ಮಾಣಗೊಂಡಿದೆ. ವಿದ್ಯಾರ್ಥಿಗಳು ಉತ್ತಮವಾಗಿ ಆಟವಾಡಿ ಹಳೆನೇರೆಂಕಿ ಶಾಲೆಗೂ ಕೀರ್ತಿ ತರಬೇಕೆಂದು ಹೇಳಿದರು.

  • ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಭಾರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ಬಾಕಿಲ ಅವರು, ಹಳೆನೇರೆಂಕಿ ಶಾಲೆಯಲ್ಲಿ ತಾಲೂಕು ಮಟ್ಟದ ಖೋ ಖೋ ಪಂದ್ಯಾಟಕ್ಕೆ ಜಿಲ್ಲಾಮಟ್ಟದ ಪಂದ್ಯಾಟದಂತೆ ಸಿದ್ಧತೆ ನಡೆದಿದೆ. ಇದರ ಹಿಂದೆ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ರಾಮಣ್ಣ ಗೌಡರ ಶ್ರಮವಿದೆ. ಹಳೆನೇರೆಂಕಿ ಶಾಲೆಗೆ ಇತಿಹಾಸವಿದೆ. ಇಲ್ಲಿ ಈ ಹಿಂದೆ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ದಿ| ವಿಶ್ವನಾಥ ಗೌಡ ಅವರು ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಿ ರಾಜ್ಯ, ರಾಷ್ಟ್ರಮಟ್ಟದಲ್ಲೂ ಪ್ರತಿನಿಧಿಸುವಂತೆ ಮಾಡಿದ್ದಾರೆ ಎಂದು ಹೇಳಿದ ಅವರು, ಶತಮಾನೋತ್ಸವ ಸಂಭ್ರಮದಲ್ಲಿರುವ ಹಳೆನೇರೆಂಕಿ ಶಾಲೆಯಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಗೊಂಡಿದೆ. ಕಬಡ್ಡಿ ಹಾಗೂ ಖೋ ಖೋ ಜಿದ್ದಾ ಜಿದ್ದಿನ ಸ್ಪರ್ಧೆಗಳಾಗಿವೆ. ವಿದ್ಯಾರ್ಥಿಗಳು ಕ್ರೀಡಾಸ್ಪೂರ್ತಿಯಿಂದ ನಿರ್ಣಾಯಕರ ನಿರ್ಣಯಕ್ಕೆ ಬದ್ಧರಾಗಿರಬೇಕು. ಈ ಮೂಲಕ ಕ್ರೀಡೆಯ ಉನ್ನತಿಗಾಗಿ ಶ್ರಮಿಸುವ ಎಂದರು.
  • ದೈಹಿಕ ಶಿಕ್ಷಣ ಶಿಕ್ಷಕ ರಾಮಣ್ಣ ಗೌಡರವರು ಕ್ರೀಡಾಕೂಟದ ಕುರಿತು ಮಾಹಿತಿ ನೀಡಿ, ಮೂರು ಅಂಕಣದಲ್ಲಿ ಕ್ರೀಡಾಕೂಟ ನಡೆಯಲಿದ್ದು ಯಾವುದೇ ಗೊಂದಲಕ್ಕೆ ಆಸ್ಪದ ಕೊಡದೇ ಆಟವಾಡಬೇಕು. ಕ್ರೀಡಾಕೂಟದ ಯಶಸ್ವಿಗೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಶಾಲಾ ಪೋಷಕರು ಕಳೆದ ಹಲವು ಸಮಯಗಳಿಂದ ತೊಡಗಿಕೊಂಡಿದ್ದಾರೆ ಎಂದರು. ರಾಮಕುಂಜ ಗ್ರಾ.ಪಂ.ಸದಸ್ಯರಾದ ಮಾಲತಿ ಕದ್ರ, ಕುಶಾಲಪ್ಪ ಗೌಡ ಮುಳಿಮಜಲು, ಗ್ರೇಡ್-೨ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಸೀತಾರಾಮ ಗೌಡ, ಗ್ರೇಡ್-೨ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸುಧಾಕರ ರೈ, ಕಡಬ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಬಾಲಕೃಷ್ಣ, ಹಳೆನೇರೆಂಕಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜನಾರ್ದನ ಕದ್ರ, ಆಲಂಕಾರು ಕ್ಲಸ್ಟರ್ ಸಿಆರ್‌ಪಿ ಪ್ರಕಾಶ್ ಬಾಕಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಮಕುಂಜ ಗ್ರಾ.ಪಂ.ಸದಸ್ಯೆ ಮಾಲತಿ ಎನ್.ಕೆ.ಕದ್ರ, ಕುಶಾಲಪ್ಪ ಗೌಡ ಎಂ.,ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಹೊನ್ನಪ್ಪ ಗೌಡ ಮರಂಕಾಡಿ ಅವರು ಮೂರು ಅಂಕಣಗಳ ಉದ್ಘಾಟಿಸಿ ತೆಂಗಿನಕಾಯಿ ಒಡೆದರು.
  • ಸನ್ಮಾನ:
  • ಶಾಲೆಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಸಿವಿಲ್ ಇಂಜಿನಿಯರ್ ಪ್ರವೀಣ್ ಹಾಗೂ ಇಂಜಿನಿಯರ್ ಮನೋಜ್‌ಕುಮಾರ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
  • ಟೀ ಶರ್ಟ್ ಕೊಡುಗೆ:
  • ಹಳೆನೇರೆಂಕಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ದಿ| ವಿಶ್ವನಾಥ ಗೌಡರ ಸ್ಮರಣಾರ್ಥ ಅವರ ಪತ್ನಿ ಚೇತನಾ ಮತ್ತು ಮಕ್ಕಳು ಹಳೆನೇರೆಂಕಿ ಶಾಲೆಯ ಖೋ ಖೋ ತಂಡದ ಬಾಲಕರಿಗೆ ಈ ವೇಳೆ ಟೀ ಶರ್ಟ್ ಕೊಡುಗೆಯಾಗಿ ನೀಡಿದರು. ಹಳೆನೇರೆಂಕಿ ಶಾಲಾ ಮುಖ್ಯಶಿಕ್ಷಕ ವೈ.ಸಾಂತಪ್ಪ ಗೌಡ ಸ್ವಾಗತಿಸಿ, ಹಿರಿಯ ಶಿಕ್ಷಕ ದಯಾನಂದ ಗೌಡ ವಂದಿಸಿದರು. ಶಿಕ್ಷಕ ನವೀನ್‌ಕುಮಾರ್ ನಿರೂಪಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here