ಪಾವತಿಯಾಗದ ವೇತನ-ಕರ್ತವ್ಯಕ್ಕೆ ಹಾಜರಾಗದೇ KSRTC ಗುತ್ತಿಗೆ ಆಧಾರದ ಚಾಲಕರ ಮುಷ್ಕರ

0

ಚಾಲಕರಿಗೆ ಪೂರ್ಣ ಮೊತ್ತವನ್ನು 24 ಗಂಟೆಯೊಳಗೆ ಪಾವತಿಸುವಂತೆ ಶಾಸಕ ಅಶೋಕ್ ರೈ ಸೂಚನೆ

ಪುತ್ತೂರು: ಕಳೆದ ಒಂದೂವರೆ ತಿಂಗಳಿಂದ ವೇತನ ಬಾರದಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿಯಲ್ಲಿ (KSRTC) ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಚಾಲಕರು ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರ ನಡೆಸಿದ್ದಾರೆ.

ಕೆಎಸ್‌ಆರ್‌ಟಿಸಿಯ ಪುತ್ತೂರು ವಿಭಾಗದಲ್ಲಿ ಒಟ್ಟು 70 ಮಂದಿ ಗುತ್ತಿಗೆ ಆಧಾರದಲ್ಲಿ ಚಾಲಕರು ನೇಮಕಗೊಂಡಿದ್ದು ಈ ಪೈಕಿ 11 ಮಂದಿ ಚಾಲಕರು ಪುತ್ತೂರು ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಪನ್ನಗ ಎಂಟರ್‌ಪ್ರೈಸಸ್ ಎಂಬ ಖಾಸಗಿ ಏಜೆನ್ಸಿಯ ಮುಖಾಂತರ ನಿಗಮದಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಪೂಜ್ಯಾಯ ಸೆಕ್ಯೂರಿಟಿ ಸರ್ವೀಸಸ್‌ನವರಿಗೆ ಗುತ್ತಿಗೆ ಬದಲಾಗಿದ್ದು, ಅವರು ಒಂದೂವರೆ ತಿಂಗಳಿಂದ ವೇತನ ನೀಡುತ್ತಿಲ್ಲ ಎಂದು ಆರೋಪಿಸಿ ಚಾಲಕರು ಕರ್ತವ್ಯ ನಿರ್ವಹಿಸದೇ ಮುಷ್ಕರ ನಡೆಸುತ್ತಿದ್ದಾರೆ.

ನಾವು, ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ಮೂಲಕ ಕೆಎಸ್‌ಆರ್‌ಟಿಸಿಗೆ ಗುತ್ತಿಗೆ ಆಧಾರದಲ್ಲಿ ಪನ್ನಗ ಎಂಟರ್‌ಪ್ರೈಸಸ್ ಮುಖಾಂತರ ರೂ.30,000 ಪಾವತಿಸಿ ನೇಮಕಗೊಂಡಿದ್ದೇವೆ. 11 ತಿಂಗಳ ಬಳಿಕ ಅವರ ಅಗ್ರಿಮೆಂಟ್ ಅವಧಿ ಮುಗಿದಿದ್ದು, ಇದೀಗ ಗುತ್ತಿಗೆಯು ಪೂಜ್ಯಾಯ ಸೆಕ್ಯೂರಿಟಿ ಸರ್ವೀಸಸ್‌ರವರು ಮುನ್ನಡೆಸುತ್ತಿದ್ದಾರೆ. ಪುತ್ತೂರು ಘಟಕದಲ್ಲಿ 11 ಮಂದಿ ಚಾಲಕರು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಓರ್ವ ಚಾಲಕನಿಗೆ ನಿಗಮವು ರೂ.30,000ದಂತೆ ಸೆಕ್ಯೂರಿಟಿ ಏಜೆನ್ಸಿಯವರಿಗೆ ನೀಡುತ್ತಿದ್ದು, ಅದರಲ್ಲಿ ನಮಗೆ ರೂ.25,000 ನೀಡುತ್ತಿದ್ದಾರೆ. ಅದರಲ್ಲಿರೂ ಎಲ್ಲಾ ಕಡಿತಗೊಳಿಸಿ ರೂ.22,000 ನಮ್ಮ ಖಾತೆಗೆ ಜಮೆ ಮಾಡುತ್ತಿದ್ದಾರೆ. ಹಾಗಿದ್ದರೂ ಕಳೆದ ಒಂದೂವರೆ ತಿಂಗಳಿನಿಂದ ವೇತನ ನೀಡದೇ ಸತಾಯಿಸುತ್ತಿದ್ದಾರೆ. ಕರೆ ಮಾಡಿ ವಿಚಾರಿಸಿದರೆ ನೀವು ಕೆಲಸ ಮಾಡಿ ವೇತನ ನೀಡುವುದಾಗಿ ತಿಳಿಸುತ್ತಾರೆ. ಆದರೆ ನಮಗೆ ವೇತನ ನೀಡುತ್ತಿಲ್ಲ. ಇದರಿಂದಾಗಿ ನಮಗೆ ಸಿಗುವ ಅತ್ಯಲ್ಪ ವೇತನ ಬಾರದೇ ಕಂಗಾಲಾಗಿದ್ದೇವೆ.

ವಿಭಾಗೀಯ ನಿಯಂತ್ರಣಾಧಿಕಾರಿ, ಸಂಚಲನಾಧಿಕಾರಿಯವರ ಗಮನಕ್ಕೆ ತರಲಾಗಿದೆ. ಯಾವುದೇ ರೀತಿಯಲ್ಲಿ ವೇತನ ಕಡಿತ ಮಾಡದಂತೆ ಅವರೂ ಗುತ್ತಿಗೆದಾರರಲ್ಲಿ ತಿಳಿಸಿದ್ದರು. ಆದರೂ ವೇತನ ಬಂದಿಲ್ಲ. ವೇತನ ಬಾರದಿದ್ದರೆ ನಾವು ಕೆಲಸ ಮಾಡುವುದಾದರೂ ಹೇಗೆ? ಕೆಲವೊಬ್ಬರಿಗೂ ಮಾತ್ರ ವೇತನ ಪಾವತಿಸಿದ್ದರೂ ನಮಗೆ ಪಾವತಿಯಾಗಬೇಕಾದ ರೂ.22,000ದಲ್ಲಿಯೂ ರೂ.5000 ಕಡಿತ ಮಾಡಿದ್ದಾರೆ. ಕರೆ ಮಾಡಿ ಗುತ್ತಿಗೆದಾರರಲ್ಲಿ ವಿಚಾರಿಸಿದರೆ ಬೇಕಾದರೆ ಕೆಲಸ ಮಾಡಿ ಇಲ್ಲದಿದ್ದರೆ ಹೋಗಿ ಎಂದು ದರ್ಪದಿಂದ ಮಾತನಾಡುತ್ತಾರೆ. ನಮಗೆ ಸಮವಸ್ತ್ರವೂ ನೀಡಿಲ್ಲ. ಪನ್ನಗ ಎಂಟರ್‌ಪ್ರೈಸಸ್ ಮುಖಾಂತರ ನೇಮಕ ಮಾಡುವಾಗ ನಾವು ರೂ.30,000 ಪಾವತಿಸಿದ್ದು ಗುತ್ತಿಗೆ ಬದಲಾಗುವಾಗ ರೂ.10,000 ಹಿಂತಿರುಗಿಸುವುದಾಗಿ ಅವರು ಹೇಳಿದ್ದರು. ಆದರೆ ಈಗ ಆ ಮೊತ್ತವೂ ಇಲ್ಲ. ಇತ್ತ ವೇತನವೂ ಇಲ್ಲ. ನಮ್ಮ ಸಮಸ್ಯೆಯನ್ನು ಯಾರಲ್ಲಿ ಹೇಳಿಕೊಳ್ಳಲಿ ಎಂದು ಚಾಲಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಗುತ್ತಿಗೆ ಆಧಾರದ ಚಾಲಕರಾದ ಅಝೀಝ್, ವಿಘ್ನೇಶ್, ಇಬ್ಬಾತ್ತುಲ್ಲಾ, ಅವಿನಾಶ್ ಕೆ., ಹರೀಶ್ ಕೆ., ಬಾಲಕೃಷ್ಣ, ರಫೀಕ್, ಹರ್ಷಿತ್, ರಮೇಶ್, ಸೋಮಶೇಖರ ಹಾಗೂ ಜನಾರ್ದನ ಪಾಟಾಳಿ ಉಪಸ್ಥಿತರಿದ್ದರು.

24 ಗಂಟೆಯೊಳಗೆ ಪಾವತಿಸಲು ಶಾಸಕರ ಸೂಚನೆ:
ತಮಗಾಗಿರುವ ಅನ್ಯಾಯದ ಬಗ್ಗೆ ಗುತ್ತಿಗೆ ಚಾಲಕರು ಶಾಸಕ ಅಶೋಕ್ ಕುಮಾರ್ ರೈ(Ashok Kumar Rai)ಯವರಲ್ಲಿ ನಿವೇದಿಸಿಕೊಂಡಿದ್ದರು. ಅವರು ಕೂಡಲೇ ಗುತ್ತಿಗೆದಾರರಿಗೆ ಕರೆ ಮಾಡಿ ಅವರನ್ನು ತರಾಟೆಗೆತ್ತಿಕೊಂಡಿದ್ದರು. ಚಾಲಕರಿಗೆ ಪಾವತಿಯಾಗಬೇಕಾದ ವೇತನದಲ್ಲಿ ಯಾವುದೇ ಮೊತ್ತವನ್ನು ಕಡಿತಗೊಳಿಸದೇ ಪೂರ್ಣ ಮೊತ್ತವನ್ನು 24 ಗಂಟೆಯೊಳಗೆ ಪಾವತಿಸುವಂತೆ ಸೂಚನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here