ಉಪ್ಪಿನಂಗಡಿ: ಒಬ್ಬಾತ ವ್ಯಕ್ತಿ ದ್ವೇಷ, ಅನ್ಯರ ದೂಷಣೆಯಿಂದ ಏನನ್ನೂ ಸಾಧಿಸಲಾರ. ಆದರೆ ಅದೇ ವ್ಯಕ್ತಿ ಸ್ನೇಹ, ಐಕ್ಯತೆ, ಸೌಹಾರ್ದಗೆಯನ್ನು ಮೆರೆದಾಗ ಮನೆ, ಊರು, ಸಮೂಹ, ಸಮಾಜವನ್ನೇ ಗೆಲುವುದಕ್ಕೆ ಸಾಧ್ಯ. ಅದು ನಮ್ಮ ಧ್ಯೇಯವಾಗಿರಬೇಕು ಎಂದು ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿಯ ಮುದರ್ರಿಸ್ ಅಬ್ದುಲ್ ಸಲಾಂ ಫೈಝಿ ಎಡಪ್ಪಾಲ ಹೇಳಿದರು.
ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮ ದಿನಾಚರಣೆ-ಈದ್ ಮೀಲಾದ್ ಅಂಗವಾಗಿ ಸೆ.16ರಂದು ಉಪ್ಪಿನಂಗಡಿಯ ಮಾಲಿಕ್ ದೀನಾರ್ ಜುಮಾ ಮಸೀದಿಯಲ್ಲಿ ಹಮ್ಮಿಕೊಳ್ಳಲಾದ ಸ್ವೀಟ್ ಆಫ್ ಮದೀನಾ ಸಮಾರಂಭದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಮಾತು, ನಡವಳಿಕೆ ಅನ್ಯ ಸಮುದಾಯವನ್ನು ನೋಯಿಸುವ ರೀತಿಯಲ್ಲಿ ಇರಬಾರದು, ಹಾಗೇ ಐಕ್ಯತೆ ಕೇವಲ ನಮ್ಮಲ್ಲಿ ಮಾತ್ರ ಇದ್ದರೆ ಸಾಲದು ಜಾತ್ಯಾತೀತ ದೇಶದಲ್ಲಿ ಬದುಕು ಕಟ್ಟಿಕೊಂಡಿರುವ ನಾವುಗಳು ಎಲ್ಲರೊಂದಿಗೆ ಬೆರೆತು ಸ್ನೇಹದಿಂದ ಅನ್ಯರ ಮನಸ್ಸು ಗೆಲ್ಲಬೇಕು ಎಂದರಲ್ಲದೆ, ಉಪ್ಪಿನಂಗಡಿ ಜನರ ಸೌಹಾರ್ದತೆಯ ಬಗ್ಗೆ ಎಲ್ಲೆಡೆಯಲ್ಲಿ ಪ್ರಶಂಸೆಗಳಿವೆ. ಅದರಲ್ಲೂ ಇಲ್ಲಿನ ಮಸೀದಿ ಅಧೀನದಲ್ಲಿ ಇಂಡಿಯನ್ ಸ್ಕೂಲ್, ಮಹಿಳಾ ಶರೀಅತ್ ಕಾಲೇಜು, ಮದ್ರಸ, ದರ್ಸ್ ನಡೆಯುತ್ತಿದ್ದು, ಇದು ಹೆಮ್ಮೆಯ ವಿಚಾರವಾಗಿದೆ. ಇಲ್ಲಿನ ಸೇವಾ ಯೋಜನೆಗಳು ಇತರ ಕಡೆಗಳಿಗೆ ಮಾದರಿ ಆಗಬೇಕು. ಈ ನಿಟ್ಟಿನಲ್ಲಿ ಸರ್ವರೂ ಸಹಭಾಗಿಗಳಾಗಬೇಕು ಎಂದರು.
ಸಾಧಕರಿಗೆ ಸನ್ಮಾನ:
ಸಮಾರಂಭದಲ್ಲಿ ಕೆಲ ವರ್ಷಗಳ ಹಿಂದೆ ಜೋಡುಪಾಲದಲ್ಲಿ ನಡೆದ ಪ್ರಾಕೃತಿಕ ವಿಕೋಪ ಘಟನೆ, ಈಚೆಗೆ ವಯನಾಡಿನಲ್ಲಿ ನಡೆದ ದುರಂತ ಮೊದಲಾದ ಅವಘಢ ಸಂದರ್ಭದಲ್ಲಿ ಅಲ್ಲಿಗೆ ತೆರಳಿ ತನ್ನ ಪ್ರಾಣವನ್ನು ಲೆಕ್ಕಿಸದೆ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಜನಮನ್ನಣೆಯ ಸಮಾಜ ಸೇವಾಕರ್ತನಾಗಿ ಗುರುತಿಸಿಕೊಂಡಿರುವ ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡದ ಇಸ್ಮಾಯಿಲ್ ತಂಙಳ್, ಉಪ್ಪಿನಂಗಡಿ ಉಬಾರ್ ಡೋನರ‍್ಸ್ ತಂಡದ ಶಬ್ಬೀರ್ ಕೆಂಪಿ, ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅಶ್ರಫ್ ಹನೀಫಿ ಇವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಮಾಲಿಕ್ ದೀನಾರ್ ಜುಮಾ ಮಸೀದಿ ಅಧ್ಯಕ್ಷ ಎಚ್. ಯೂಸುಫ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಮಿತಿ ಪದಾಧಿಕಾರಿಗಳಾದ ಶುಕೂರ್ ಹಾಜಿ, ಅಶ್ರಫ್ ಹಾಜಿ ಕರಾಯ, ಮಹಮ್ಮದ್ ಮುಸ್ತಫಾ, ಅಗ್ನಾಡಿ ಹಾರೂನ್ ರಶೀದ್, ಅಬ್ದುಲ್ ಹಮೀದ್ ಕರಾವಳಿ, ಯೂಸುಫ್ ಪೆದಮಲೆ, ಮುನೀರ್ ಎನ್ಮಾಡಿ, ಮುಹಮ್ಮದ್ ಕೂಟೇಲು, ಸಿದ್ದಿಕ್ ಕೆಂಪಿ, ರವೂಫ್ ಯು.ಟಿ., ಹಳೇಗೇಟು ಮದ್ರಸದ ಅಧ್ಯಕ್ಷ ರಶೀದ್, ಕುದುಲೂರು ಮದ್ರಸದ ಯೂಸುಫ್ ಹಾಜಿ, ಅಂಡೆತ್ತಡ್ಕ ಮದ್ರಸದ ಬಶೀರ್, ನಿನ್ನಿಕಲ್ ಮದ್ರಸದ ಫಾರೂಕ್, ಕಡವಿನಬಾಗಿಲು ಮದ್ರಸದ ಹನೀಫ್, ರಾಜತ್ರಗುರಿ ಮದ್ರಸದ ಸುಲೈಮಾನ್, ಪವಿತ್ರನಗರದ ಯು.ಟಿ. ರಹೀಂ, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳಾದ ಯು.ಟಿ. ತೌಸೀಫ್, ಇಬ್ರಾಹಿಂ ಆಚಿ, ಯು.ಟಿ. ಇರ್ಷಾದ್, ಶಬೀರ್ ನಂದಾವರ, ಇಬ್ರಾಹಿಂ ಸಿಟಿ, ಉಮ್ಮರ್ ಹಾಜಿ, ಝಕರಿಯಾ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು. ಅದ್ನಾನ್ ಅನ್ಸಾರ್ ಕುದುಲೂರು ಕಾರ್ಯಕ್ರಮ ನಿರೂಪಿಸಿದರು.