ಪುತ್ತೂರು: ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಮತ್ತು ಈದ್ ಮಿಲಾದ್ ಸಮಿತಿ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ 32ನೇ ವರ್ಷದ ಬೃಹತ್ ಮಿಲಾದ್ ಸಮಾವೇಶದ ಪ್ರಯುಕ್ತ ದರ್ಬೆ ಬೈಪಾಸ್ ಬಳಿಯಿಂದ ಕಿಲ್ಲೆ ಮೈದಾನದ ವರೆಗೆ ಆಕರ್ಷಕ ಕಾಲ್ನಡಿಗೆ ಜಾಥಾ ಸೆ.16ರಂದು ನಡೆಯಿತು. ಅಬ್ದುಲ್ ಹಮೀದ್ ಹನೀಫಿ ದುವಾ ನೆರವೇರಿಸಿದರು.
ಪುತ್ತೂರು ತಾಲೂಕು ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಎಲ್.ಟಿ ಅಬ್ದುಲ್ ರಝಾಕ್ ಹಾಜಿಯವರು ಮಾಡಾವು ಸಂತೋಷ್ ಗ್ರೂಪ್ಸ್‌ನ ಹುಸೈನಾರ್ ಹಾಜಿಯವರಿಗೆ ಧ್ವಜ ಹಸ್ತಾಂತರ ಮಾಡುವ ಮೂಲಕ ಕಾಲ್ನಡಿಗೆ ಜಾಥಾಗೆ ಚಾಲನೆ ನೀಡಿದರು.
ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್‌ನ ಅಧ್ಯಕ್ಷ ಅಶ್ರಫ್ ಕಲ್ಲೇಗ, ಈದ್ ಮಿಲಾದ್ ಸಮಿತಿ ಪುತ್ತೂರು ಇದರ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್, ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್‌ನ ಪ್ರ.ಕಾರ್ಯದರ್ಶಿ ನೌಶಾದ್ ಹಾಜಿ ಬೊಳ್ವಾರು, ಸಂಚಾಲಕರಾದ ಅಡ್ವಕೇಟ್ ನೂರುದ್ದೀನ್ ಸಾಲ್ಮರ, ಕೋಶಾಧಿಕಾರಿ ಅಶ್ರಫ್ ಬಾವು, ಈದ್ ಮಿಲಾದ್ ಸಮಿತಿ ಪುತ್ತೂರು ಇದರ ಪ್ರ.ಕಾರ್ಯದರ್ಶಿ ಖಾದರ್ ಖನ್ಝ್ ಕಬಕ, ಕೋಶಾಧಿಕಾರಿ ಇಕ್ಬಾಲ್ ಬಪ್ಪಳಿಗೆ ಹಾಗೂ ದ.ಕ ಮುಸ್ಲಿಂ ಯುವಜನ ಪರಿಷತ್ ಸದಸ್ಯರು ಹಾಗೂ ಮಿಲಾದ್ ಸಮಿತಿಯವರು, ಸಾರ್ವಜನಿಕರು ಉಪಸ್ಥಿತರಿದ್ದರು. ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.
ವಿವಿಧ ತಂಡಗಳ ದಫ್ ಪ್ರದರ್ಶನದೊಂದಿಗೆ ಪುತ್ತೂರು ಮುಖ್ಯ ರಸ್ತೆಯಾಗಿ ಕಿಲ್ಲೆ ಮೈದಾನದವರೆಗೆ ನಡೆದ ಜಾಥಾದಲ್ಲಿ ವಿವಿಧ ಕಡೆಗಳಿಂದ ಬಂದಿದ್ದ ಸಾವಿರಾರು ಮಂದಿ ಭಾಗಿಯಾಗಿದ್ದರು. ಪ್ರವಾದಿ ಮುಹಮ್ಮದ್(ಸ.ಅ) ಅವರ ಮದ್‌ಹ್ ಗಾನ, ಸ್ವಲಾತ್, ಸಂಕೀರ್ತನೆಗಳು ಜಾಥಾದುದ್ದಕ್ಕೂ ಮೊಳಗಿತು. ಮಹಿಳೆಯರು ಮಕ್ಕಳು ಸೇರಿದಂತೆ ನೂರಾರು ಮಂದಿ ಜಾಥಾ ವೀಕ್ಷಿಸಿದರು.
ಅಲ್ಲಲ್ಲಿ ಸಿಹಿ ವಿತರಣೆ:
ಜಾಥಾದಲ್ಲಿ ಸಾಗಿ ಬಂದವರಿಗೆ ದರ್ಬೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಿಹಿ ವಿತರಿಸಲಾಯಿತು. ಸಚಿನ್ ಟ್ರೇಡಿಂಗ್ ವತಿಯಿಂದ ಚಹಾ ವಿತರಿಸಲಾಯಿತು. ಪುತ್ತೂರು ಬಸ್ ನಿಲ್ದಾಣದ ಬಳಿ ಯುವಕರ ತಂಡಗಳಿಂದ ಸಿಹಿ ಹಾಗೂ ಐಸ್‌ಕ್ರೀಂ ವಿತರಣೆ ನಡೆಯಿತು.
ಬಂದೋಬಸ್ತ್:
ಪುತ್ತೂರು ನಗರಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಜಾನ್ಸನ್ ಡಿಸೋಜಾ, ಉಪನಿರೀಕ್ಷಕರಾದ ಆಂಜನೇಯ ರೆಡ್ಡಿ ಹಾಗೂ ಸಂಚಾರಿ ಠಾಣೆಯ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಉದಯರವಿ ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ಏರ್ಪಡಿಸಿದ್ದರು.
ಕಣ್ಮನ ಸೆಳೆದ ದಫ್ ಪ್ರದರ್ಶನ:
ದರ್ಬೆಯಿಂದ ಪುತ್ತೂರು ಮುಖ್ಯ ರಸ್ತೆಯಾಗಿ ಸಾಗಿದ ಜಾಥಾದಲ್ಲಿ ವಿವಿಧ ದಫ್ ತಂಡಗಳ ದಫ್ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ವಿವಿಧ ದಫ್ ತಂಡಗಳು ಹಾಗೂ ಸ್ಕೌಟ್, ಪ್ಲವರ್ ಶೋ ತಂಡ ವಿವಿಧ ಬಣ್ಣಗಳ ಸಮವಸಗಳ ಮೂಲಕ ಕಂಗೊಳಿಸುತ್ತಿತ್ತು. ದಫ್ ತಂಡ ಜಾಥಾದುದ್ದಕ್ಕೂ ನಿರಂತರವಾಗಿ ದಫ್ ಪ್ರದರ್ಶನ ನೀಡುತ್ತಲೇ ಸಾಗಿ ಬಂದದ್ದು ವಿಶೇಷವಾಗಿತ್ತು. ಪೊಲೀಸರ ಜೊತೆ ಮುಸ್ಲಿಂ ಯುವಜನ ಪರಿಷತ್ ಪದಾಧಿಕಾರಿಗಳು ಹಾಗೂ ಮಿಲಾದ್ ಸಮಿತಿ ಪದಾಽಕಾರಿಗಳು ಮುಂಚೂಣಿಯಲ್ಲಿದ್ದುಕೊಂಡು ಜಾಥಾ ಸುಸೂತ್ರವಾಗಿ ಸಾಗುವಂತೆ ಮಾಡುವಲ್ಲಿ ಯಶಸ್ವಿಯಾದರು.
ಸಿಹಿ ಹಂಚಿದ ಶಾಸಕರು…
ಜಾಥಾ ನಡೆಯುತ್ತಿದ್ದ ವೇಳೆ ಆಗಮಿಸಿ ಶಾಸಕ ಅಶೋಕ್ ಕುಮಾರ್ ರೈ ಅವರು ಜಾಥಾದಲ್ಲಿ ತುಸುದೂರ ಹೆಜ್ಜೆ ಹಾಕಿದರು. ಬಳಿಕ ದರ್ಬೆ ಚಾರಿಟೇಬಲ್ ಟ್ರಸ್ಟ್‌ನವರ ಜೊತೆ ಹಾಗೂ ಪುತ್ತೂರು ಗಾಂಧಿಕಟ್ಟೆ ಬಳಿ ಯುವಕರ ತಂಡದೊಂದಿಗೆ ಸೇರಿಕೊಂಡು ಸೇರಿದ್ದವರಿಗೆ ಸಿಹಿ ವಿತರಿಸಿ ಗಮನ ಸೆಳೆದರು.
ನಿರೀಕ್ಷೆಗೂ ಮೀರಿದ ಯಶಸ್ಸು:
32ನೇ ವರ್ಷದ ಬೃಹತ್ ಮಿಲಾದ್ ಸಮಾವೇಶದ ಅಂಗವಾಗಿ ದರ್ಬೆ ಬೈಪಾಸ್ ಬಳಿಯಿಂದ ಕಿಲ್ಲೆ ಮೈದಾನದವರೆಗೆ ನಡೆದ ಕಾಲ್ನಡಿಗೆ ಜಾಥಾ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ವಿವಿಧ ಕಡೆಗಳಿಂದ ಸಾವಿರಾರು ಮಂದಿ ಭಾಗವಹಿಸಿದ್ದು ಜಾಥಾ ಸುಸೂತ್ರವಾಗಿ ನಡೆದಿರುವುದು ಖುಷಿ ನೀಡಿದೆ. ಮುಸ್ಲಿಂ ಯುವಜನ ಪರಿಷತ್, ಈದ್ ಮಿಲಾದ್ ಸಮಿತಿ ಮತ್ತು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.
-ಹಾಜಿ ಇಬ್ರಾಹಿಂ ಸಾಗರ್, ಅಧ್ಯಕ್ಷರು ಈದ್ ಮಿಲಾದ್ ಸಮಿತಿ ಪುತ್ತೂರು