60.18 ಲಕ್ಷ ರೂ ಲಾಭ: ಶೇ.15 ಡಿವಿಡೆಂಡ್
ಉಪ್ಪಿನಂಗಡಿ: 2023-24ನೇ ಸಾಲಿನಲ್ಲಿ ಉಪ್ಪಿನಂಗಡಿಯ ಮೂರ್ತೆದಾರರ ಸೇವಾ ಸಹಕಾರ ಸಂಘವು 60,18,742.59 ರೂ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15 ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಅಜಿತ್‌ಕುಮಾರ್ ಪಾಲೇರಿ ತಿಳಿಸಿದರು.
ಇಲ್ಲಿನ ಎಚ್.ಎಂ. ಅಡಿಟೋರಿಯಂನಲ್ಲಿ ನಡೆದ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ಪುತ್ತೂರು ತಾಲೂಕಿನ ಉಪ್ಪಿನಂಗಡಿ, ಹಿರೇಬಂಡಾಡಿ, ಬಜತ್ತೂರು, ಕಡಬ ತಾಲೂಕಿನ ಗೋಳಿತ್ತೊಟ್ಟು, ಆಲಂತಾಯ, ನೆಲ್ಯಾಡಿ, ಕೌಕ್ರಾಡಿ, ಇಚ್ಲಂಪಾಡಿ, ಶಿರಾಡಿ, ಸಿರಿಬಾಗಿಲು, ಕೊಣಾಜೆ, ಕೊಂಬಾರು ಸೇರಿದಂತೆ 12 ಕಂದಾಯ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದ್ದು, ನೆಲ್ಯಾಡಿ, ಹಿರೇಬಂಡಾಡಿ ಮತ್ತು ಉದನೆಯಲ್ಲಿ ಶಾಖೆಗಳನ್ನು ಹೊಂದಿದೆ. ಅವುಗಳು ಲಾಭದಲ್ಲಿ ಮುನ್ನಡೆಯುತ್ತಿವೆ. ವರ್ಷದ ಕೊನೆಯಲ್ಲಿ 1027 ಎ ತರಗತಿ ಸದಸ್ಯರಿದ್ದು, ಒಟ್ಟು 15,25, 324.20 ರೂ. ಪಾಲು ಬಂಡವಾಳ ಸಂಗ್ರಹಿಸಲಾಗಿದೆ. 1775 ಸಿ ತರಗತಿ ಸದಸ್ಯರಿದ್ದು, ಒಟ್ಟು 13,50,223 ರೂ. ಪಾಲು ಬಂಡವಾಳವನ್ನು ಹೊಂದಿದೆ. ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಮಹಾಮಂಡಲ ಬೆಂಗಳೂರು ಇದರ ಸದಸ್ಯತ್ವದೊಂದಿಗೆ ರಸ್ಸೆ ಪೇಪರ್ ವ್ಯವಸ್ಥೆಯನ್ನು ಉಪ್ಪಿನಂಗಡಿ ಮತ್ತು ನೆಲ್ಯಾಡಿ ಶಾಖೆಯಲ್ಲಿ ಪ್ರಥಮವಾಗಿ ಅಳವಡಿಸಿ ಸಾರ್ವಜನಿಕರಿಗೆ ಪ್ರಯೋಜನವಾಗುವ ಹಾಗೆ ಮಾಡಲಾಗಿದೆ. ಸಂಘವು ಮುಂದಕ್ಕೆ ಎ ತರಗತಿ ಸದಸ್ಯರನ್ನು ಹೆಚ್ಚಿಸುವುದು, ಠೇವಣಿ ಹಾಗೂ ಸಾಲದ ಗುರಿ ಮೀರಿ ಸಾಧನೆ ಮಾಡುವುದು, ಸಂಘದ ವತಿಯಿಂದ ರಚನೆಯಾದ ಗುರುಶ್ರೀ ಸ್ವ ಸಹಾಯ ಗುಂಪುಗಳ ಸದಸ್ಯರಿಗೆ ಮಾಹಿತಿ ಶಿಬಿರ, ಸಾಲ ಸೌಲಭ್ಯ ನೀಡಿ ವ್ಯವಹಾರ ವೃದ್ಧಿಸುವುದು, ಹೊಸ ಶಾಖೆ ತೆರೆಯುವುದು, ಸಂಘದ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ವ್ಯವಹಾರ, ವೃತ್ತಿ ಕೌಶಲ್ಯ, ಸುಲಲಿತ ಆಡಳಿತ ತರಬೇತಿ ಆಯೋಜಿಸುವುದು ಮುಂತಾದ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.
ವಿದ್ಯಾರ್ಥಿ ವೇತನ ವಿತರಣೆ ಸೇರಿದಂತೆ ಸಂಘವು ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸಿದೆ. ಸಂಘವು ಅಭಿವೃದ್ಧಿಯಲ್ಲಿ ಸಾಗುತ್ತಿದ್ದು, ಇದಕ್ಕೆ ಕಾರಣರಾದ ಠೇವಣಿಣಾತಿದಾರರಿಗೆ, ಸದಸ್ಯರಿಗೆ, ಸಿಬ್ಬಂದಿಗಳಿಗೆ, ಪಿಗ್ಮಿ ಸಂಗ್ರಹಗಾರರು ಸೇರಿದಂತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಅಜಿತ್‌ಕುಮಾರ್ ಪಾಲೇರಿ ತಿಳಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಶೀನಪ್ಪ ಪೂಜಾರಿ, ನಿರ್ದೇಶಕರಾದ ಡಾ. ರಾಜಾರಾಮ್ ಕೆ.ಬಿ., ಮಾಧವ ಪೂಜಾರಿ ಅರಿಜಾಲು, ಶಶಿಧರ ಪಠೇರಿ, ಚೆನ್ನಪ್ಪ ಪೂಜಾರಿ ಕೊಚ್ಚಿಲ, ಚಂದ್ರಶೇಖರ ಬಾಣಜಾಲು, ಶ್ರೀಮತಿ ಚಂದ್ರಕಲಾ ಸದಾನಂದ ಡಿ.ಎಸ್., ಶ್ರೀಮತಿ ಸುನೀತಾ ಸೋಮಸುಂದರ ಕೊಡಿಪಾನ ಉಪಸ್ಥಿತರಿದ್ದರು.
ಚೈತ್ರಾ, ಮೋಕ್ಷ ಪ್ರಾರ್ಥಿಸಿದರು. ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೀಕಯ್ಯ ಜಿ. ಸ್ವಾಗತಿಸಿದರು. ಶಾಖಾಧಿಕಾರಿ ಯಶೋಧ ಕೆ. ವಂದಿಸಿದರು. ಶಾಖಾಧಿಕಾರಿ ಎಲ್ಯಣ್ಣ ಎಸ್., ಪ್ರಭಾರ ಲೆಕ್ಕಾಧಿಕಾರಿ ಅನಿತಾ ಸತೀಶ್, ಪ್ರಭಾರ ಶಾಖಾಧಿಕಾರಿಗಳಾದ ಸುಮಿತ್ರಾ ಕೆ., ನವೀನ್ ಪಿ. ಉಪಸ್ಥಿತರಿದ್ದು, ವಿವಿಧ ಕಾರ್ಯಕ್ರಮ ನಿರ್ವಹಿಸಿದರು.