ನೆಲ್ಯಾಡಿ: ಜೇಸಿಐ ನೆಲ್ಯಾಡಿ, ಮಹಿಳಾ ಜೇಸಿ ಹಾಗೂ ಜೂನಿಯರ್ ಜೇಸಿವಿಂಗ್ ನೆಲ್ಯಾಡಿ ಇದರ ಆಶ್ರಯದಲ್ಲಿ ನಡೆದ 41ನೇ ವರ್ಷದ ಜೇಸಿ ಸಪ್ತಾಹ ’ ಡೈಮಂಡ್-2024’ ಸಪ್ತ ಸಂಭ್ರಮದ 7ನೇ ದಿನವಾದ ಸೆ.15ರಂದು ಜೇಸಿ ಕುಟುಂಬ ಸಂಭ್ರಮ, ಸಮಾರೋಪ ಸಮಾರಂಭ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯಲ್ಲಿ ನಡೆಯಿತು. ಈ ವೇಳೆ ಕಮಲ ಪತ್ರ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ ನಡೆಯಿತು.
ನೆಲ್ಯಾಡಿ ಜೇಸಿಐ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೆ.9ರಿಂದ 15ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆದ ಜೇಸಿ ಸಪ್ತಾಹ ಯಶಸ್ವಿಯಾಗಿದೆ. ಇದಕ್ಕೆ ಸಹಕರಿಸಿದ ಜೇಸಿ ಹಾಗೂ ಜೇಸಿಯೇತರ ಬಂಧುಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಅತಿಥಿಯಾಗಿದ್ದ ಕಡಬ ತಾಲೂಕು ಉಪತಹಶೀಲ್ದಾರ್ ಗೋಪಾಲ ಕೆ., ನೆಲ್ಯಾಡಿ ಜೇಸಿಐ ಪೂರ್ವಾಧ್ಯಕ್ಷರಾದ ಅಬ್ರಹಾಂ ವರ್ಗೀಸ್, ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಕೆ.ಎಸ್.ಅವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.
ಕಮಲಪತ್ರ ಪ್ರಶಸ್ತಿ ಪ್ರದಾನ:
ನೆಲ್ಯಾಡಿ ಜೇಸಿಐನ ಪೂರ್ವಾಧ್ಯಕ್ಷರಾದ ರವಿಚಂದ್ರ ಹೊಸವಕ್ಲು ಅವರಿಗೆ ಈ ಸಂದರ್ಭದಲ್ಲಿ ಕಮಲಪತ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ನೆಲ್ಯಾಡಿ ಜೇಸಿಐನ ಪೂರ್ವಾಧ್ಯಕ್ಷರಾದ ಗಣೇಶ್ ಕೆ.ರಶ್ಮಿ ಅವರು ರವಿಚಂದ್ರ ಅವರನ್ನು ಪರಿಚಯಿಸಿದರು. ಕಮಲಪತ್ರ ಪ್ರಶಸ್ತಿ ಸ್ವೀಕರಿಸಿದ ರವಿಚಂದ್ರ ಹೊಸವಕ್ಲು ಅವರು ಮಾತನಾಡಿ, ನೆಲ್ಯಾಡಿ ಜೇಸಿಐಯಲ್ಲಿದ್ದುಕೊಂಡು ಮಾಡಿರುವ ಸೇವೆಗಳನ್ನು ನೆನಪಿಸಿಕೊಂಡರು.
ಸಾಧಕರಿಗೆ ಸನ್ಮಾನ:
ನೆಲ್ಯಾಡಿ ಗ್ರಾ.ಪಂ.ನಲ್ಲಿ ಹಲವು ವರ್ಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಬಳಿಕ ಕಾಣಿಯೂರು ಗ್ರಾಮ ಪಂಚಾಯತ್ಗೆ ವರ್ಗಾವಣೆಗೊಂಡ ಪಿಡಿಒ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ದೇವರಾಜ ಎಂ., ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಶಾಂತರಾಮ ಎ.ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನೆಲ್ಯಾಡಿ ಪಿಎಂಶ್ರೀ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿದ್ದು ಕಡಬಕ್ಕೆ ವರ್ಗಾವಣೆಗೊಂಡಿರುವ, ನೆಲ್ಯಾಡಿ ಜೇಸಿಐನ ಕಾರ್ಯದರ್ಶಿಯೂ ಆಗಿರುವ ಆನಂದ ಅಜಿಲ ಅವರನ್ನು ಅಭಿನಂದಿಸಲಾಯಿತು. ನೆಲ್ಯಾಡಿ ಜೇಸಿಐ ಪೂರ್ವಾಧ್ಯಕ್ಷರಾದ ಮೋಹನ್ ವಿ., ಜಯಂತಿ ಬಿ.ಎಂ., ಹಾಗೂ ಸದಸ್ಯೆ ಪುಷ್ಪಾನಾರಾಯಣ ಬಲ್ಯ ಸನ್ಮಾನಿತರನ್ನು ಪರಿಚಯಿಸಿದರು. ಸನ್ಮಾನಿತರಾದ ದೇವರಾಜ ಎಂ., ಶಾಂತರಾಮ ಎ.,ಹಾಗೂ ಆನಂದ ಅಜಿಲ ಅವರು ಸನ್ಮಾನಕ್ಕೆ ಕೃತಜ್ಞತೆ ಸೂಚಿಸಿ ಮಾತನಾಡಿದರು.
ರಾಷ್ಟ್ರೀಯ ಮನ್ನಣೆ-ಅಧ್ಯಕ್ಷರಿಗೆ ಸನ್ಮಾನ
ನೆಲ್ಯಾಡಿ ಜೇಸಿಐ ವತಿಯಿಂದ ಈ ಭಾರಿ ನಡೆದ ಜೇಸಿ ಸಪ್ತಾಹ ’ ಡೈಮಂಡ್-2024’ ಸಪ್ತ ಸಂಭ್ರಮದ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭದ ಕಾರ್ಯಕ್ರಮಗಳಿಗೆ ರಾಷ್ಟ್ರೀಯ ಮನ್ನಣೆ ದೊರೆತ ಹಿನ್ನೆಲೆಯಲ್ಲಿ ಪೂರ್ವಾಧ್ಯಕ್ಷರು 2024ನೇ ಸಾಲಿನ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್ ಹಾಗೂ ಸಪ್ತಾಹ ಯೋಜನಾ ನಿರ್ದೇಶಕರಾದ ಜಯಾನಂದ ಬಂಟ್ರಿಯಾಲ್ ದಂಪತಿಯನ್ನು ಸನ್ಮಾನಿಸಿ ಗೌರವಿಸಿದರು. ಸೆ.9ರಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ನೆಲ್ಯಾಡಿ ಜೇಸಿಐನ ಸ್ಥಾಪಕ ಜೇಸಿಗಳಿಗೆ ಗೌರವಾರ್ಪಣೆ ಮಾಡಲಾಗಿತ್ತು. ಬಳಿಕ ಕೊಪ್ಪ ಪ್ರಶಾಂತ ನಿವಾಸಕ್ಕೆ ಭೇಟಿ ನೀಡಿ ಆಶ್ರಮವಾಸಿಗಳಿಗೆ ಹಣ್ಣುಹಂಪಲು ವಿತರಿಸಿ, ಯೋಗ ಪ್ರಾತ್ಯಕ್ಷಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಾಗಿತ್ತು. ಸೆ.15ರಂದು ನಡೆದ ಸಮಾರೋಪದಲ್ಲಿ ಕಮಲಪತ್ರ ಪ್ರಶಸ್ತಿ ಪ್ರದಾನ, ಸಾಧಕರನ್ನು ಸನ್ಮಾನಿಸಲಾಯಿತು. ಈ ಎರಡು ಕಾರ್ಯಕ್ರಮಗಳಿಗೆ ರಾಷ್ಟ್ರೀಯ ಮನ್ನಣೆ ದೊರೆತಿದೆ.
ಜೇಸಿ ಸಪ್ತಾಹಕ್ಕೆ ಸಹಕಾರ ನೀಡಿದ ಯೋಜನಾ ನಿರ್ದೇಶಕರಾದ ಪುರಂದರ ಗೌಡ ಡೆಂಜ-ಜಾಹ್ನವಿ ಐ.ದಂಪತಿಯನ್ನು ಗೌರವಿಸಲಾಯಿತು. ಜೇಸಿಐ ವಲಯಾಧಿಕಾರಿ ಕೆ.ಯಂ.ದಯಾಕರ ರೈ, ಮಹಿಳಾ ಜೇಸಿ ಅಧ್ಯಕ್ಷೆ ಲೀಲಾ ಮೋಹನ್, ಜೆಜೆಸಿ ಅಧ್ಯಕ್ಷರಾದ ಶಮಂತ್, ವೈಷ್ಣವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್ ಸ್ವಾಗತಿಸಿ, ನಿರೂಪಿಸಿದರು. ಯೋಜನಾ ನಿರ್ದೇಶಕರಾದ ಜಯಾನಂದ ಬಂಟ್ರಿಯಾಲ್, ಪುರಂದರ ಗೌಡ ಡೆಂಜ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಸುಪ್ರಿತಾ ರವಿಚಂದ್ರ ಜೇಸಿವಾಣಿ ವಾಚಿಸಿದರು. ಪೂರ್ವಾಧ್ಯಕ್ಷ ರವೀಂದ್ರ ಟಿ.ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಕಮಲಪತ್ರ ಪ್ರಶಸ್ತಿ ಪುರಸ್ಕೃತ ರವಿಚಂದ್ರ ಹೊಸವಕ್ಲು ಅವರು ಆತಿಥ್ಯ ನೀಡಿದರು.
ಜೇಸಿ ಕುಟುಂಬ ಸಂಭ್ರಮ:
ಸಮಾರೋಪಕ್ಕೂ ಮೊದಲು ಜೇಸಿ ಕುಟುಂಬ ಸಂಭ್ರಮ ನಡೆಯಿತು. ಜೇಸಿ ಕುಟುಂಬ ಸದಸ್ಯರಿಗೆ ವಿವಿಧ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು.