ಪುತ್ತೂರು:ದ.ಕ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಕರ ಕಚೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆ ಪಾಂಗಳಾಯಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ, ಬಾಲಕಿಯರ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟವು ಸೆ.18ರಂದು ದರ್ಬೆ ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.
ಪಂದ್ಯಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಮಾತನಾಡಿ, ಜೀವನದಲ್ಲಿ ಸಾಮೂಹಿಕ ನಾಯಕತ್ವ ಹಾಗೂ ತಂಡದ ಮೂಲಕ ಸಾಧಿಸುವ ಮನೋಭಾವನೆಗಳು ಮೂಡುವಲ್ಲಿ ಕ್ರೀಡೆ ಸಹಕಾರಿಯಾಗುತ್ತದೆ. ಸ್ಪರ್ಧಾತ್ಮಕ ಮನೋಭಾವದಿಂದಾಗಿಯೇ ಸ್ವತಂತ್ರ್ಯಾ ನಂತರ ಭಾರತದಲ್ಲಿಯೂ ಇಸ್ರೋ ಸಂಸ್ಥೆ ಪ್ರಾರಂಭಿಸಿ ಚಂದ್ರಯಾನ ನಡೆಸುವ ಮೂಲಕ ಇಂದು ಭಾರದ ಸೂಪರ್ ಪವರ್ ದೇಶವಾಗಿರುವುದು ಮಾತ್ರವಲ್ಲದೇ ಅತೀ ಕಡಿಮೆ ವೆಚ್ಚದಲ್ಲಿ ಚಂದ್ರಯಾನ ಮಾಡುವ ಮೂಲಕ ಇತಿಹಾಸ ಸೃಷ್ಠಿಸಿದೆ ಎಂದರು. ಒಂದೇ ಕ್ರೀಡೆಗೆ ಆದ್ಯತೆ ನೀಡಿದರೆ ಉಳಿದ ಕ್ರೀಡೆಗಳಲ್ಲಿ ಸಾಧನೆ ಮಾಡುವುದು ಅಸಾದ್ಯ. ವಾಲಿಬಾಲ್, ತ್ರೋಬಾಲ್‌ನಂತೆ ಸಾಂಪ್ರದಾಯಿಕ ಕ್ರೀಡೆಗಳಾದ ಕಬಡ್ಡಿ, ಕೋಕೋಗಳ ಜೊತೆಗೆ ಜಿಲ್ಲೆಯ ಕಂಬಳಕ್ಕೂ ಅಡಿಪಾಯ ದೊರೆಯಬೇಕು. ಅವುಗಳ ಬೆಳವಣಿಗೆಯಾಗಬೇಕು. ಕ್ರೀಡೆಗಳಲ್ಲಿ ಭಾಗವಹಿಸುವ ಮುಖಾಂತರ ಜೀವನದಲ್ಲಿ ಕ್ರೀಡೆಯ ಜೊತೆಗೆ ಉತ್ತಮ ವಿಚಾರಗಳ ಅಭಿವೃದ್ಧಿ, ಜೀವನದಲ್ಲಿ ಸ್ಪರ್ಧಾತ್ಮಕ ಮನೋಭಾವನೆಯ ಜೊತೆಗೆ ನಮ್ಮ ಶಾರೀರಿಕ, ಮಾನಸಿಕ ಆರೋಗ್ಯದ ಬೆಳವಣಿಗೆಗೂ ಕ್ರೀಡೆ ಸಹಕಾರಿಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, ಜಾತಿ, ಧಮದ ಹೆಸರಿನಲ್ಲಿ ಬಡಿದಾಡಿಕೊಳ್ಳುತ್ತಿರುವ ಸಮಾಜದಲ್ಲಿ ಕ್ರೀಡೆಯು ಈ ಎಲ್ಲಾ ಭಾವನೆಗಳನ್ನು ಬಿಟ್ಟು ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸುತ್ತದೆ. ಭಾರತವು ಜನಸಂಖ್ಯೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು ಕ್ರೀಡೆಯಲ್ಲಿಯೂ ಮುಂದೆ ಬರಬೇಕು. ಇದಕ್ಕೆ ಪೂರಕವಾದ ಎಲ್ಲಾ ರೀತಿಯ ಪ್ರೋತ್ಸಾಹಗಳನ್ನು ನೀಡಬೇಕಾದ ಆವಶ್ಯಕತೆಯಿದೆ. ಇಲ್ಲಿನ ಜಿಲ್ಲಾ ಮಟ್ಟದ ಪಂದ್ಯಾಟವು ರಾಜ್ಯ ಮಟ್ಟದ ಮಾದರಿಯಲ್ಲಿ ಸಂಯೋಜನೆಗೊಂಡಿದೆ ಎಂದರು.
ನಗರ ಸಭಾ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಮಾತನಾಡಿ, ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಎಲ್ಲರನ್ನೂ ಸೇರಿಕೊಳ್ಳುವ ಮೂಲಕ ಬಹಳಷ್ಟು ಸುಂದರವಾಗಿ ಮೂಡಿಬಂದಿದೆ. ಕ್ರೀಡೆಯಲ್ಲಿ ಸೋಲು, ಗೆಲುವು ಸಾಮಾನ್ಯವಾಗಿದೆ. ಕ್ರೀಡಾಪಟುಗಳಲ್ಲಿ ಕ್ರೀಡಾ ಸ್ಪೂರ್ತಿ ಬೆಳೆದು ದೇಶದ ತಾರೆಗಳಾಗಿ ಬೆಳೆಯಬೇಕು ಎಂದರು.
ಬೆಥನಿ ಸಂಸ್ಥೆಯ ಮಂಗಳೂರು ಪ್ರಾಂತ್ಯದ ಶಿಕ್ಷಣ ಸಂಯೋಜಕಿ ಡಾ|ಮಾರಿಯೋಲ ಮಾತನಾಡಿ, ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ 28 ತಂಡಗಳು ಬೆಥನಿ ಶಾಲಾ ಆವರಣದಲ್ಲಿ ಸಂಗಮವಾಗಿದೆ. ಇಲ್ಲಿ ಕ್ರೀಡಾ ಪ್ರತಿಭೆಗಳಿಗೆ ಉತ್ತಮ ವಾತಾವರಣವಿದೆ. ಪಂದ್ಯಾಟದಲ್ಲಿ ಉತ್ತಮ ಸ್ಪರ್ದೆಯೊಂದಿಗೆ ಕಠಿಣ ಪರಿಶ್ರಮದಿಂದ ಗೆದ್ದುಬರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ನಗರ ಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಮಾತನಾಡಿ, ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಇನ್ನಷ್ಟು ಸಾಧನೆ ಮಾಡಲಿ. ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸುವಂತಾಗಲಿ ಎಂದರು.
ನಗರ ಸಭಾ ಸದಸ್ಯೆ ವಿದ್ಯಾ ಆರ್ ಗೌರಿ, ಪೌರಾಯುಕ್ತ ಮಧು ಎಸ್ ಮನೋಹರ್, ಉದ್ಯಮಿ ಶಿವರಾಮ ಆಳ್ವ, ರೋಡ್ರಿಗಸ್ ಚಿಕನ್ ಮ್ಹಾಲಕಿ ಗ್ಲಾಡಿಯಸ್ ರೋಡ್ರಿಗಸ್, ಅಮೆಚೂರು ಕಬಡ್ಡಿ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ದಯಾನಂದ ಕೋರ್ಮಂಡ, ವರ್ತಕ ಸಂಘದ ಮಾಜಿ ಅಧ್ಯಕ್ಷ ಜಾನ್ ಕುಟಿನ್ಹಾ, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಉಮೇಶ್ ನಾಯಕ್, ಅಮರ್ ಅಕ್ಬರ್ ಆಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿಯ ರಝಾಕ್ ಬಪ್ಪಳಿಗೆ, ಸಿಟಿ ಆರ್ಟ್ಸ್& ಸ್ಪೋರ್ಟ್ಸ್ ಕ್ಲಬ್‌ನ ಗೌರವಾಧ್ಯಕ್ಷ ಮೋಹನದಾಸ ರೈ, ಅಧ್ಯಕ್ಷ ಬಿ.ಜಿ ಜುನೈದ್, ಉದ್ಯಮಿ ಮಹಮ್ಮದ್ ಅಯ್ಯೂಬ್, ಇರ್ದೆ ಉಪ್ಪಳಿಗೆ ಸರಕಾರಿ ಪ್ರೌಢಶಾಲಾ ನಿವೃತ್ತ ಮುಖ್ಯಗುರು ನಾರಾಯಣ, ಪದ್ಮಶ್ರೀ ಮೆಡಿಕಲ್‌ನ ಮ್ಹಾಲಕ ತಾರಾನಾಥ ರೈ ಬಿ., ಶಿಕ್ಷಣ ಸಂಯೋಜಕರಾದ ಹರಿಪ್ರಸಾದ್ ಹಾಗೂ ಅಮೃತಕಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಜಿಲ್ಲಾ ಮಟ್ಟದ ಪಂದ್ಯಾಟವನ್ನು ಯಶಸ್ವಿಯಾಗಿ ಸಂಘಟಿಸಿದ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯಗುರು ಶಾಂತಿ ಬಿ.ಎಸ್., ದೈಹಿಕ ಶಿಕ್ಷಣ ಶಿಕ್ಷಕರಾದ ಹರೀಶ್, ನಿರಂಜನ್, ಅಕ್ಷಯ್, ಮೂವತ್ತು ಸಾವಿರ ವೆಚ್ಚದ ನಾಲ್ಕು ಟ್ರೋಫಿ ಕೊಡುಗೆ ನೀಡಿದ ದಾನಿಗಳಾದ ಸ್ಪೋರ್ಟ್ಸ್ ವಲ್ಡ್‌ನ ರಝಾಕ್ ಬಪ್ಪಳಿಗೆ, ಸಿಟಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ, ಉದ್ಯಮಿ ಮೋಹನದಾಸ್ ರೈ, ಹಾಗೂ ಗುತ್ತಿಗೆದಾರ ಬಿ.ಜಿ ಜುನೈದ್, ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಿದ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್, ತ್ರೋಬಾಲ್‌ನಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಶಾಲಾ ವಿದ್ಯಾರ್ಥಿಗಳಾದ ರಿಯಾ ಜೆ.ರೈ, ಫಾತಿಮತ್ ಅಫೀದಾ, ಮಹಮ್ಮದ್ ಷಾನ್, ಪೃಥ್ವಿ, ಫೈದಾ, ತನಿಷಾ ರೈ, ವೈಶಾಲಿ ಕೆ., ವೈಷ್ಣವೀ, ಮಯೂರ, ಅನೀಶ್ ರೆಬೆಲ್ಲೋ, ಸಹಾನಿ ಕುಟಿನ್ಹಾ, ಆಯಿಷತ್ ಶಿಫಾ, ನಿರೀಕ್ಷಾ, ಚೈತನ್ಯಾ ಹಾಗೂ ನಿಶಾರವರನ್ನು ಸನ್ಮಾನಿಸಲಾಯಿತು. ಪಂದ್ಯಾಟದ ಪ್ರಾಯೋಜಕರನ್ನು ಗೌರವಿಸಲಾಯಿತು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಬೆಥನಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕಿ ಭಗಿನಿ ಪ್ರಶಾಂತಿ ಬಿ.ಎಸ್ ಸ್ವಾಗತಿಸಿದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಭುವನೇಶ್ವರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಥನಿ ಆಂಗ್ಲ ಮಾಧ್ಯಮ ಶಾಲಾ ಮುಖ್ಯಗುರು ಸೆಲಿನ್ ಪೇತ್ರ ಬಿ.ಎಸ್., ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ರಘುನಾಥ ರೈ, ಇಸ್ಮಾಯಿಲ್ ಶಾಫಿ, ಮಕ್ಕಳ ಸುರಕ್ಷಾ ಸಮಿತಿ ಉಪಾಧ್ಯಕ್ಷರಾದ ಸುನೀತಾ ಪಿರೇರಾ, ಪ್ರತೀಕ್ಷಾ ಪೈ, ರಾಮಚಂದ್ರ ಭಟ್ ಅತಿಥಿಗಳನ್ನು ಶಾಲು ಹಾಕಿ, ಹೂ ನೀಡಿ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿ, ಬೆಥನಿ ಪ್ರೌಢಶಾಲಾ ಮುಖ್ಯಗುರು ಶಾಂತಿ ಬಿ.ಎಸ್ ವಂದಿಸಿದರು.
ಪಂದ್ಯಾಟದ ಪ್ರಾರಂಭದಲ್ಲಿ ಅತಿಥಿ, ಅಭ್ಯಾಗತರು ಹಾಗೂ ಟ್ರೋಫಿಯನ್ನು ಮೆರವಣಿಗೆಯ ಮೂಲಕ ಕ್ರೀಡಾಂಗಣಕ್ಕೆ ಕರೆತರಲಾಯಿತು. ನಗರ ಸಭಾ ಅಧ್ಯಕ್ಷೆ ಪರಿವಾಳ ಹಾರಿ ಬಿಡುವ ಮೂಲಕ ಚಾಲನೆ ನೀಡಿದರು. ಪಂದ್ಯಾಟ ಚೆಂಡನ್ನು ಡ್ರೋನ್ ಮುಖಾಂತರ ಹಾರಿಸಿಕೊಂಡು ಬಂದು ಕ್ರೀಡಾಂಗಣಕ್ಕೆ ಸುತ್ತ ತರುವ ಮೂಲಕ ಪಂದ್ಯಾಟಕ್ಕೆ ವಿನೂತನ ಶೈಲಿಯಲ್ಲಿ ಚಾಲನೆ ನೀಡಲಾಯಿತು.