ಆಲಂಕಾರು: ಸೀಮಾ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪದಾರ್ಥಿಯಾಗಿ ಸೇವೆ ಸಲ್ಲಿಸಿದ್ದ ಕೃಷ್ಣಪ್ಪ ದೇವಾಡಿಗ ಮತ್ತು ಅವರ ಮಗ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪದಾರ್ಥಿಯಾಗಿ ಸೇವೆ ಸಲ್ಲಿಸುತ್ತಿದ್ದ ಆನಂದ ದೇವಾಡಿಗರು ಇತ್ತೀಚೆಗೆ ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಸಭೆ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಶ್ರದ್ಧಾಂಜಲಿ ಸಭೆಯ ಕಾರ್ಯಕ್ರಮವನ್ನು ಹರೀಶ ಆಚಾರ್ಯ ನಗ್ರಿ ಯವರು ದೀಪ ಬೆಳಗಿಸಿದರು. ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಪಡ್ಡಿಲ್ಲಾಯ ಪ್ರಸ್ತಾಪನೆ ಗೈದು ಮೃತರ ಗುಣಗಾನ ಮಾಡಿದರು.
ಪ್ರಮುಖರಾದ ಈಶ್ವರ ಗೌಡ ಪಜ್ಜಡ್ಕ,ದಯಾನಂದ ರೈ ಮನವಳಿಕೆಗುತ್ತು,ಅರ್ಚಕರಾದ ರಾಘವೇಂದ್ರ ಪ್ರಸಾದ್.ಟಿ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ದಾಮೋದರ ಗೌಡ ಕಕ್ವೆ,ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ರಾಮಚಂದ್ರ ದೇವಾಡಿಗ ,ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹೇಮಂತ್ ರೈ ಮನವಳಿಕೆಯವರು ಕೃಷ್ಣಪ್ಪ ದೇವಾಡಿಗ ಮತ್ತು ಆನಂದ ದೇವಾಡಿಗ ರವರಿಗೆ ನುಡಿ ನಮನ ಸಲ್ಲಿಸಿ ದೇವರ ಸೇವೆಯನ್ನು ನಿಷ್ಕಲ್ಮಶವಾಗಿ ಮಾಡಬೇಕು,ಸ್ವಾರ್ಥ ಇಟ್ಟುಕೊಂಡು ದೇವರ ಕೆಲಸ ಮಾಡಿದರೆ ಅದು ಭಗವಂತನಿಗೆ ಸಮರ್ಪಣೆಯಾಗುವುದಿಲ್ಲ, ಕೃಷ್ಣಪ್ಪ ದೇವಾಡಿಗರು ಮತ್ತು ಅವರ ಮಗ ಆನಂದ ದೇವಾಡಿಗರು ನಿಷ್ಕಲ್ಮಶವಾಗಿ ಹಾಗು ಪ್ರಾಮಾಣಿಕವಾಗಿ ದೇವರ ಸೇವೆಯನ್ನು ಮಾಡಿದವರು ,ಅಳಿಯುವುದು. ಕಾಯ ಉಳಿಯುವುದು ಕೀರ್ತಿ ಎಂಬಂತೆ ಹುಟ್ಟು ಸಾವಿನ ನಡುವೆ ಸಮಾಜ ನೆನಪಿಸಿಕೊಳ್ಳುವ ರೀತಿಯಲ್ಲಿ ದೇವರ ಕೆಲಸ ಕಾರ್ಯವನ್ನು ನಿರ್ವಹಿಸಿದವರು ಎಂದು ತಿಳಿಸಿ ಅಗಲಿದ ಅತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು .
ಸಭಾದ್ಯಕ್ಷತೆ ವಹಿಸಿದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿ ಮಾತನಾಡಿ ಕೃಷ್ಣಪ್ಪ ದೇವಾಡಿಗರು ಮತ್ತು ಆನಂದ ದೇವಾಡಿಗರು ದೇವಸ್ಥಾನದ ಪದಾರ್ತಿ ಯಾಗಿ ಉತ್ತಮ ಸೇವೆ ನಿರ್ವಹಿಸಿದವರು ಅಪರೂಪದ ವ್ಯಕ್ತಿತ್ವ,ಎಲ್ಲರೊಂದಿಗೂ ಉತ್ತಮ ಬಾಂಧವ್ಯವನ್ನು ಹೊಂದಿದ್ದರು ಎಂದು ತಿಳಿಸಿ ಅವರ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು ತಾಯಿ ಶರವೂರು ದುರ್ಗಾಪರಮೇಶ್ವರಿ ದೇವಿ ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು.
ಕೃಷ್ಣಪ್ಪ ದೇವಾಡಿಗರ ಮಗ ಚಂದ್ರಶೇಖರ ದೇವಾಡಿಗರವರು ಮಾತನಾಡಿ ದೇವಸ್ಥಾನದ ವತಿಯಿಂದ ಅಗಲಿದ ಕೃಷ್ಣಪ್ಪ ದೇವಾಡಿಗರಿಗೆ ಮತ್ತು ಆನಂದ ದೇವಾಡಿಗರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜನೆ ಮಾಡಿದ ಸಂಘಟಕರಿಗೆ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ದೇವಸ್ಥಾನದ ಅರ್ಚಕ ಹರಿ ಪ್ರಸಾದ್ ಉಪಾಧ್ಯಾಯ, ಶತ ಚಂಡಿಕಾಯಾಗ ಸಮಿತಿಯ ಅಧ್ಯಕ್ಷ ರಾಮ್ ಪ್ರಕಾಶ್ ಉಪಸ್ಥಿತರಿದ್ದರು. ಗುರು ಪ್ರಸಾದ್ ಅಲೆಕ್ಕಿ ಕಾರ್ಯಕ್ರಮ ನಿರೂಪಿಸಿದರು.ಸಭೆಯಲ್ಲಿ ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲೆಂದು ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ,ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಕೃಷ್ಣಪ್ಪ ದೇವಾಡಿಗರ ಮಕ್ಕಳಾದ ಚಂದ್ರಶೇಖರ ದೇವಾಡಿಗ ಮತ್ತು ಚಂದ್ರ ದೇವಾಡಿಗ ಮತ್ತು ಮನೆಯವರು ಶ್ರದ್ಧಾಂಜಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಮುಖರಿಗೆ ಹಾಗು ಆಗಮಿಸಿದ ಶ್ರೀ ದೇವಿಯ ಭಕ್ತರಿಗೆ ಶಾಲು ಹಾಕಿ ಗೌರವಿಸಿದರು.ನಂತರ ಕೃಷ್ಣಪ್ಪ ದೇವಾಡಿಗ ಮತ್ತು ಆನಂದ ದೇವಾಡಿಗರ ಸವಿ ನೆನಪಿಗೋಸ್ಕರ ಮಧ್ಯಾಹ್ನ ಪ್ರಸಾದ ಭೋಜನ
ನೇರವೆರಿಸಿದರು.