ಉಪ್ಪಿನಂಗಡಿ: ಇಲ್ಲಿನ ಪೆರಿಯಡ್ಕದ ರಿಕ್ಷಾ ನಿಲ್ದಾಣದ ಬಳಿ ಮಲೀನ ನೀರಿನ ಪೈಪ್ ಒಡೆದು ಹೋಗಿದ್ದರಿಂದ ಪರಿಸರವಿಡೀ ಮಲೀನ ನೀರು ತುಂಬಿಕೊಂಡು ದುರ್ನಾತ ಬೀರುತ್ತಿದ್ದ ಬಗ್ಗೆ ‘ಸುದ್ದಿ ಬಿಡುಗಡೆ ಪುತ್ತೂರು ವೆಬ್ನ್ಯೂಸ್’ನಲ್ಲಿ ವರದಿ ಪ್ರಕಟಗೊಂಡ ಬೆನ್ನಲ್ಲೇ ಸಮಸ್ಯೆಗೆ ಪರಿಹಾರ ಸಿಕ್ಕಿದೆ.
ಇಲ್ಲಿನ ಖಾಸಗಿ ವ್ಯಕ್ತಿಯೋರ್ವರ ಮನೆಯಿಂದ ಮಲೀನ ನೀರು ಚರಂಡಿಗೆ ಹರಿದು ಹೋಗಲು ಕಲ್ಪಿಸಿದ್ದ ಪೈಪ್ ರಿಕ್ಷಾ ನಿಲ್ದಾಣದ ಬಳಿ ಒಡೆದು ಹೋಗಿದ್ದರಿಂದ ಅಲ್ಲಿ ಮಲೀನ ನೀರು ಲೀಕೇಜ್ ಆಗಿ ಪರಿಸರವಿಡೀ ಹರಿದು ದುರ್ನಾತ ಬೀರುತ್ತಿತ್ತು. ಇದರಿಂದ ರಿಕ್ಷಾ ಚಾಲಕರು, ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿತ್ತು. ಪೈಪ್ ಒಡೆದು ಹೋಗಿ ವಾರ ಕಳೆದರೂ ಅದನ್ನು ಸರಿಪಡಿಸುವ ಗೋಜಿಗೆ ಆ ಖಾಸಗಿ ವ್ಯಕ್ತಿ ಹೋಗಿರಲಿಲ್ಲ. ಈ ಬಗ್ಗೆ ಅಲ್ಲಿನ ರಿಕ್ಷಾ ಚಾಲಕರು ಪತ್ರಿಕೆಯ ಗಮನಕ್ಕೆ ತಂದಿದ್ದರು. ಈ ಬಗ್ಗೆ ‘ಸುದ್ದಿ ಬಿಡುಗಡೆ ವೆಬ್ನ್ಯೂಸ್’ನಲ್ಲಿ ಸೆ.17ರಂದು ಮಧ್ಯಾಹ್ನ ವರದಿ ಪ್ರಕಟವಾಗಿದ್ದು, ಅಂದು ಸಂಜೆಯೇ ಪೈಪ್ ಅನ್ನು ಸರಿಪಡಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಈ ಬಗ್ಗೆ ಅಲ್ಲಿನ ರಿಕ್ಷಾ ಚಾಲಕರು ಪತ್ರಿಕೆಯ ಗಮನಕ್ಕೆ ತಂದಿದ್ದು, ಪತ್ರಿಕೆಗೆ ಧನ್ಯವಾದ ತಿಳಿಸಿದ್ದಾರೆ.