ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟದ ಸಮಾರೋಪ – ರಾಜ್ಯ ಮಟ್ಟದ ಮಾದರಿಯಲ್ಲಿ ಪಂದ್ಯಾಟದ ಆಯೋಜನೆ-ಗಣ್ಯರ ಮೆಚ್ಚುಗೆ

0

ಪುತ್ತೂರು: ದ.ಕ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಕರ ಕಚೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆ ಪಾಂಗಳಾಯಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೆ.18ರಂದು ದರ್ಬೆ ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ, ಬಾಲಕಿಯರ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟವು ಸಂಜೆ ಸಮಾರೋಪ ಸಮಾರಂಭ, ಬಹುಮಾನ ವಿತರಣೆಯೊಂದಿಗೆ ಸಂಪನ್ನಗೊಂಡಿತು.

ಪಂದ್ಯಾಟದಲ್ಲಿ ಜಿಲ್ಲೆಯ ಪ್ರಾಥಮಿಕ ಶಾಲಾ ಬಾಲಕರ 7 ತಂಡ, ಬಾಲಕಿಯರ 7 ತಂಡಗಳು, ಪ್ರೌಢಶಾಲಾ ವಿಭಾಗದ ಬಾಲಕರ 7 ತಂಡ ಹಾಗೂ ಬಾಲಕಿಯರ 7 ತಂಡಗಳು ಸೇರಿದಂತೆ ಒಟ್ಟು 28 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಪುತ್ತೂರು ತಾಲೂಕಿನ ಇಂದ್ರಪ್ರಸ್ಥ ಉಪ್ಪಿನಂಗಡಿ (ಪ್ರ), ಮಂಗಳೂರು ದಕ್ಷಿಣದ ಸೈಂಟ್ ರೇಮಂಡ್(ದ್ವಿ) ಬಾಲಕಿಯರ ವಿಭಾಗದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಹಿ.ಪ್ರಾ ಶಾಲೆ(ಪ್ರ), ಮಹಾಲಿಂಗೇಶ್ವರ ಶಾಲೆ ಸುರತ್ಕಲ್ (ದ್ವಿ) ಸ್ಥಾನ ಪಡೆದುಕೊಂಡಿದ್ದಾರೆ. ಪ್ರೌಢಶಾಲಾ ಬಾಲಕ ವಿಭಾಗದಲ್ಲಿ ಪುತ್ತೂರಿನ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯ(ಪ್ರ) ಮಂಗಳೂರು ಉತ್ತರದ ಚೈತನ್ಯ ಪ್ರೌಢ ಶಾಲೆ(ದ್ವಿ), ಬಾಲಕಿಯರ ವಿಭಾಗದಲ್ಲಿ ದರ್ಬೆ ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ(ಪ್ರ), ಸುರತ್ಕಲ್ ಮಹಾಲಿಂಗೇಶ್ವರ ಪ್ರೌಢಶಾಲೆ(ದ್ವಿ) ಸ್ಥಾನ ಪಡೆದುಕೊಂಡು ಮೈಸೂರು ವಿಭಾಗಕ್ಕೆ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ರಾಜ್ಯ ಮಟ್ಟದ ಮಾದರಿಯಲ್ಲಿ ಆಯೋಜನೆ-ಗಣ್ಯರ ಮೆಚ್ಚುಗೆ
4 ವಿಭಾಗಗಳಲ್ಲಿ ನಡೆದ ಪಂದ್ಯಾಟಗಳಿಗೆ ಪ್ರತ್ಯೇಕ ಪ್ರತ್ಯೇಕವಾದ 4 ಅಂಕಣಗಳನ್ನು ಸಿದ್ದಪಡಿಸಲಾಗಿತ್ತು. ಅಂಕಣದ ಸುತ್ತ ಸುಮಾರು 550 ಅಡಿ ಉದ್ದದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ವಿಶಾಲ ವೇದಿಕೆ ವೇದಿಕೆ, ಸಾರ್ವಜನಿಕರಿಗೆ ಪಂದ್ಯಾಟ ವೀಕ್ಷಣೆ ಗ್ಯಾಲರಿ ಮಾದರಿ ವ್ಯವಸ್ಥೆ, ಪಂದ್ಯಾಟದ ನಿರ್ವಹಣೆ, ಊಟ, ಉಪಾಹಾರ ಸೇರಿದಂತೆ ಪ್ರತಿಯೊಂದು ವಿಭಾಗದಲ್ಲಿಯೂ ಅಚ್ಚು ಕಟ್ಟಾಗಿ, ಶಿಸ್ತು ಬದ್ದ ಹಾಗೂ ವ್ಯವಸ್ಥಿತವಾಗಿ ಪಂದ್ಯಾಟವು ಆಯೋಜನೆಗೊಂಡಿತ್ತು. ಪಂದ್ಯಾಟವು ರಾಜ್ಯ ಮಟ್ಟದ ಮಾದರಿಯಲ್ಲಿ ಸಂಯೋಜನೆಗೊಂಡಿದ್ದು ಬೆಥನಿ ಶಾಲಾ ಆಡಳಿತ ಮಂಡಳಿಯಿಂದ ನಡೆದ ಸಿದ್ದತೆಗಳಿಗೆ ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.


4 ಅಡಿ ಎತ್ತರದ ಆಕರ್ಷಣೆಯ ಟ್ರೋಫಿ:
ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಸುಮಾರು 4 ಅಡಿ ಎತ್ತರದ ಟ್ರೋಫಿಯನ್ನು ವಿಜೇತ ತಂಡಗಳಿಗೆ ನೀಡಿ ಅಭಿನಂದಿಸಲಾಗಿತ್ತು. ಇದು ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿಯೇ ಇತಿಹಾಸದಲ್ಲೇ ಪ್ರಥಮವಾಗಿದೆ ಎನ್ನಲಾಗಿದೆ. ಈ ವಿಶೇಷ ಟ್ರೋಫಿಯು ಪಂದ್ಯಾಟದಲ್ಲಿ ವಿಶೇಷ ಆಕರ್ಷಣೆಯಾಗಿತ್ತು. ಅಮರ್ ಅಕ್ಬರ್ ಆಂತೋನಿ ಸೌಹಾರ್ದ ರೋಲಿಂಗ್ ಟ್ರೋಪಿಯ ರಝಾಕ್ ಬಪ್ಪಳಿಗೆ, ಸಿಟಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್‌ನ ಗೌರವಾಧ್ಯಕ್ಷ ಮೋಹನದಾಸ ರೈ, ಅಧ್ಯಕ್ಷ ಬಿ.ಜಿ ಜುನೈದ್ ಆಕರ್ಷಕ ಟ್ರೋಫಿಯ ಪ್ರಾಯೋಜಕರಾಗಿದ್ದಾರೆ.


ಕುಣಿದು ಸಂಭ್ರಮಿಸಿದ ಶಿಕ್ಷಕರು:
ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕಿಯರ ಎರಡೂ ವಿಭಾಗದಲ್ಲಿಯೂ ಅತಿಥೇಯ ತಂಡವಾಗಿದ್ದ ಬೆಥನಿ ಶಾಲಾ ಶಾಲಾ ತಂಡವು ಗರಿಷ್ಟ ಅಂಕಗಳ ಅಂತರದಿಂದ ಪ್ರಥಮ ಸ್ಥಾನ ಗಳಿಸಿ, ವಿಭಾಗ ಮಟ್ಟಕ್ಕೆ ಆಯ್ಕೆಯಾದ ಸಂಭ್ರಮವನ್ನು ವಿದ್ಯಾರ್ಥಿಗಳ ಜೊತೆಗೆ ಶಾಲಾ ಶಿಕ್ಷಕರು ಟ್ರೋಫಿ ಹಿಡಿದು ಕುಣಿದು ಸಂಭ್ರಮಿಸಿದರು.


ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ ಮಾತನಾಡಿ, ಶಾಲಾ ಶಿಕ್ಷಣ ಹಾಗೂ ಕ್ರೀಡೆಗಳು ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗ. ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಕ್ರೀಡೆ ಮಾನಸಿಕ, ದೈಹಿಕ ಆರೋಗ್ಯ ಹಾಗೂ ನೆಮ್ಮದಿ ನೀಡುತ್ತದೆ. ಪಠ್ಯ ಚಟುವಟಿಕೆಗಳಲ್ಲಿರುವಷ್ಟೇ ಕ್ರೀಡೆಯಲ್ಲಿಯೂ ತೊಡಗಿಸಿಕೊಳ್ಳಬೇಕು. ಕ್ರೀಡಾತ್ಮಕ ಮನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು. ಇದನ್ನು ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಜೀವನಲ್ಲಿ ಅಳವಡಿಕೊಂಡು ಭವ್ಯ ಭಾರತದ ಪ್ರಜೆಗಳಾಗಬೇಕು ಎಂದರು.


ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದ ಮಾತನಾಡಿ, ಕ್ರೀಡೆ, ಕಲೆ, ಸಾಹಿತ್ಯ ಕ್ಷೇತ್ರಗಳು ಎಲ್ಲರ ಮನಸ್ಸಿಗೂ ಮುದ ನೀಡುತ್ತದೆ. ಹೀಗಾಗಿ ಸಾಹಿತ್ಯ, ಕ್ರೀಡೆಯಲ್ಲಿ ಭಾಗವಹಿಸುವವರಲ್ಲಿ ದ್ವೇಷ ಇರುವುದಿಲ್ಲ. ಮಕ್ಕಳಲ್ಲಿರುವ ಕ್ರೀಡೆಯ ಸ್ಪೂರ್ತಿ ರಾಜ್ಯದ, ದೇಶದ ನಾಯಕರಲ್ಲಿಯೂ ಇರಬೇಕು. ಸಮಾಜದಲ್ಲಿರುವವರು ವಿದ್ಯಾರ್ಥಿಗಳಿಂದ ಸಾಕಷ್ಟು ಕಲಿಯಬೇಕಿದೆ. ವಿದ್ಯಾರ್ಥಿಗಳು ಉತ್ತಮ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.


ತೆರಿಗೆ ಸಲಹೆಗಾರ ಅಬೂಬಕ್ಕರ್ ಸಿದ್ದೀಕ್ ಮಾತನಾಡಿ, ಕ್ರೀಡೆಯಲ್ಲಿ ಗೆಲ್ಲುವ ಛಲ ಅಟಗಾರರಲ್ಲಿರಬೇಕು. ಸೋತಾಗ ಎಲ್ಲಿ ಎಡವಿದ್ದೇವೆ ಎನ್ನುವುದು ಮುಖ್ಯ. ಸೋಲನ್ನು ಸವಾಲಾಗಿ ಸ್ವೀಕರಿಸಿ, ನಿರಂತರ ಕಠಿಣ ಪರಿಶ್ರಮ ಮೂಲಕ ಸಾಧನೆ ಮಾಡಬೇಕು. ಜಿಲ್ಲಾ ಮಟ್ಟಡ ತ್ರೋಬಾಲ್‌ನ 4 ವಿಭಾಗಗಳಲ್ಲಿಯೂ ಪುತ್ತೂರು ತಾಲೂಕು ಚಾಂಪಿಯನ್ ಆಗಿದ್ದು ವಿಭಾಗ, ರಾಜ್ಯ ಮಟ್ಟದಲ್ಲಿಯೂ ಗೆದ್ದ ಬರಲಿ ಎಂದು ಆಶಿಸಿದರು.


ಅಧ್ಯಕ್ಷತೆ ವಹಿಸಿದ್ದ ಬೆಥನಿ ಸಂಸ್ಥೆಯ ಮಂಗಳೂರು ಪ್ರಾಂತ್ಯದ ಶಿಕ್ಷಣ ಸಂಯೋಜಕಿ ಡಾ| ಮಾರಿಯೋಲ ಬಿ.ಎಸ್ ಮಾತನಾಡಿ, ವಿದ್ಯಾರ್ಥಿಗಳು ಅತ್ಯಂತ ಉತ್ಸಾಹ, ಕ್ರೀಡಾ ಮನೋಭಾವದಿಂದ ಪಂದ್ಯಾಟದಲ್ಲಿ ಬೆಳಿಗ್ಗೆಯಿಂದ ಸಂಜೆ ತನಕ ಭಾಗವಹಿಸಿದ್ದಾರೆ. ಪೋಷಕರು, ಶಿಕ್ಷಕರು ಉತ್ತಮ ಪ್ರೋತ್ಸಾಹ, ಸಹಕಾರ ನೀಡಿದ್ದಾರೆ. ಪಂದ್ಯಾಟದಲ್ಲಿ ವಿಜೇತರಾದವರಿಗೆ ಅಭಿನಂದನೆಗಳು. ಮುಂದಿನ ವರ್ಷ ವಿಭಾಗ ಮಟ್ಟ ಅಥವಾ ರಾಜ್ಯ ಮಟ್ಟದ ಸ್ಪರ್ಧೆಗಳ ಮೂಲಕ ಬೆಥನಿ ಶಾಲೆಯಲ್ಲಿ ಮತ್ತೊಮ್ಮೆ ಒಟ್ಟು ಸೇರುವ ಎಂದ ಅವರು ಪಂದ್ಯಾಟದ ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.


ಸನ್ಮಾನ:
ಜಿಲ್ಲಾ ಮಟ್ಟದ ಪಂದ್ಯಾಟವನ್ನು ವ್ಯವಸ್ಥಿತವಾಗಿ ನಡೆಯುವಲ್ಲಿ ಕಾರಣೀಕರ್ತರಾದ ಬೆಥನಿ ಸಮೂಹ ಸಂಸ್ಥೆಗಳ ಸಂಚಾಲಕಿ ಭಗಿನಿ ಪ್ರಶಾಂತಿ ಬಿ.ಎಸ್., ಬೆಥನಿ ಆಂಗ್ಲ ಮಾಧ್ಯಮ ಹಿ.ಪ್ರಾ ಶಾಲಾ ಶಿಕ್ಷಕಿ ಭಗಿನಿ ಸೆಲಿನ್ ಪೇತ್ರ ಬಿ.ಎಸ್‌ರವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಸಂಚಾರಿ ಠಾಣಾ ಎಸ್.ಐ ಕುಟ್ಟಿ, ಸಿಆರ್‌ಪಿ ಶಶಿಕಲಾ, ಗುತ್ತಿಗೆದಾರ ಹಂಝ ಕೆ.ಎಂ., ಜಾಯ್ಸ್ ಸಾಫ್ಟ್‌ಡ್ರಿಂಕ್ಸ್‌ನ ದೀಪಕ್ ಶೆಟ್ಟಿ, ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳೆಂಜ, ಸಂತ ಫಿಲೋಮಿನಾ ಕಾಲೇಜಿನ ಪ್ರಾಧ್ಯಾಪಕ ಡಾ| ಎಡ್ವಿನ್ ಸಂತಾನ್ ಡಿ ಸೋಜ, ಅಮೆಚೂರು ಕಬಡ್ಡಿ ಎಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡ, ಅರಗ ಕನ್‌ಸ್ಟ್ರಕ್ಷನ್‌ನ ಇರ್ಷಾದ್ ಅಬ್ದುಲ್ ಖಾದರ್, ಪದ್ಮಶ್ರೀ ಮೆಡಿಕಲ್‌ನ ತಾರಾನಾಥ ರೈ, ದರ್ಬೆ ಬುಕ್ ಪಾಯಿಂಟ್‌ನ ಅಝೀಝ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಭುವನೇಶ್ವರ್, ದೈಹಿಕ ಶಿಕ್ಷಣ ಪರಿವೀಕ್ಷಕ ಚಕ್ರಪಾಣಿ, ಬೆಥನಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ರಘುನಾಥ ರೈ, ಇಸ್ಮಾಯಿಲ್ ಶಾಫಿ, ಮಕ್ಕಳ ಸುರಕ್ಷಾ ಸಮಿತಿ ಅಧ್ಯಕ್ಷರಾದ ಸುನೀತ ಪಿರೇರಾ, ಪ್ರತೀಕ್ಷಾ ಪೈ, ರಾಮಚಂದ್ರ ಭಟ್, ಬೆಥನಿ ಸಮೂಹ ಸಂಸ್ಥೆಗಳ ಸಂಚಾಲಕಿ ಪ್ರಶಾಂತಿ ಬಿ.ಎಸ್., ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯಗುರು ಶಾಂತಿ ಬಿ.ಎಸ್., ಪ್ರಾಥಮಿಕ ಶಾಲಾ ಮುಖ್ಯಗುರು ಸೆಲಿನ್ ಪೇತ್ರ ಬಿ.ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಪವಿತ್ರ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here