ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಅ.21ರಂದು ಉಪ ಚುನಾವಣೆ

0

ಬಿಜೆಪಿಯಲ್ಲಿ ಹಲವು ಆಕಾಂಕ್ಷಿಗಳು, ಕಾಂಗ್ರೆಸ್‌ನಿಂದ ಶಕುಂತಲಾ ಶೆಟ್ಟಿ ರೇಸ್‌ನಲ್ಲಿ

ಪುತ್ತೂರು:ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರದ ಚುನಾವಣಾ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನೂತನ ಸದಸ್ಯರ ಆಯ್ಕೆಗಾಗಿ ಅ.21ರಂದು ಉಪ ಚುನಾವಣೆ ನಿಗದಿಯಾಗಿದೆ.ಚುನಾವಣಾ ನೀತಿ ಸಂಹಿತೆ ಸೆ.19ರಿಂದಲೇ ಜಾರಿಯಾಗಿದೆ.


ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರದ ಚುನಾವಣಾ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದ ಬಿಜೆಪಿಯ ಕೋಟಾ ಶ್ರೀನಿವಾಸ ಪೂಜಾರಿಯವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಚುನಾಯಿತರಾಗಿದ್ದರಿಂದ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.ಇದರಿಂದಾಗಿ ತೆರವಾಗಿರುವ ಪರಿಷತ್ ಸದಸ್ಯ ಸ್ಥಾನಕ್ಕೆ ಇದೀಗ ಉಪಚುನಾವಣೆ ನಿಗದಿಯಾಗಿದೆ.


ಸೆ.26ರಂದು ಅಧಿಸೂಚನೆ:
ಉಪಚುನಾವಣೆಗೆ ಸಂಬಂಧಿಸಿ ಸೆ.26ರಂದು ಅಧಿಸೂಚನೆ ಹೊರಡಿಸಲಾಗುವುದು ಮತ್ತು ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ.ಅ.3 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುತ್ತದೆ. ಅ.4ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.ನಾಮಪತ್ರ ಹಿಂಪಡೆಯಲು ಅ.7ರಂದು ಕೊನೆಯ ದಿನವಾಗಿದೆ.ಅ.21ರಂದು ಬೆಳಗ್ಗೆ 8ರಿಂದ ಸಂಜೆ 4ಗಂಟೆಯವರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟು 392 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ.ಅ.24ರಂದು ಮತ ಎಣಿಕೆ ನಡೆಯಲಿದೆ,ಅ.೨28ರವರೆಗೆ ಅಧಿಸೂಚನೆಯ ಪ್ರಕ್ರಿಯೆ ಇರುತ್ತದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.


2024ರ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೋಟ ಶ್ರೀನಿವಾಸ ಪೂಜಾರಿಯವರು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಗಡೆಯವರ ವಿರುದ್ದ ಗೆಲುವು ಸಾಧಿಸಿದ್ದರು.ವಿಧಾನ ಪರಿಷತ್ ಸದಸ್ಯರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವಧಿ 5/1/2028ರ ತನಕ ಇದ್ದರೂ ಅವರು ಸಂಸತ್ ಸದಸ್ಯರಾಗಿ ಚುನಾಯಿತರಾದ ಹಿನ್ನೆಲೆಯಲ್ಲಿ ಜೂ.24ರಂದು ತನ್ನ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.ಇದರಿಂದಾಗಿ ಉಪ ಚುನಾವಣೆ ನಡೆಯಲಿದೆ.


6037 ಮತದಾರರು:
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ದ.ಕ.ಸ್ಥಳೀಯ ಪ್ರಾಧಿಕಾರದ ಚುನಾವಣಾ ಕ್ಷೇತ್ರದ ವಿಧಾನ ಪರಿಷತ್‌ಗೆ ನಡೆಯಲಿರುವ ಈ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ನಗರ ಪಂಚಾಯತ್, ನಗರಸಭೆ, ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರು ಮತದಾರರಾಗಿರುತ್ತಾರೆ.ತಾ.ಪಂ., ಜಿ.ಪಂ ಸದಸ್ಯರೂ ಈ ಚುನಾವಣೆಯ ಮತದಾರರಾಗಿದ್ದರೂ ಅವರ ಅಽಕಾರದ ಅವಧಿ ಈಗಾಗಲೇ ಮುಕ್ತಾಯಗೊಂಡು ವರ್ಷಗಳೇ ಕಳೆದರೂ ಇನ್ನೂ ನೂತನ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯದೇ ಇರುವುದರಿಂದ ಈ ಉಪ ಚುನಾವಣೆಯಲ್ಲಿ ಜಿ.ಪಂ.,ತಾ.ಪಂ.ಸದಸ್ಯರ ಮತಗಳು ಇರುವುದಿಲ್ಲ.


ನೀತಿ ಸಂಹಿತೆ ಜಾರಿ:
ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾದ ಸೆ.19ರಿಂದಲೇ ನೀತಿ ಸಂಹಿತೆ ಜಾರಿಯಾಗಿದ್ದು ಅ.28ರ ತನಕ ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರಲಿದೆ.ಈ ಸಂದರ್ಭದಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಹೊಸ ಯೋಜನೆ,ಕಾರ್ಯಕ್ರಮ ನೀತಿಯನ್ನು ಪ್ರಕಟಿಸುವಂತಿಲ್ಲ ಎಂದು ಚುನಾವಣಾಧಿಕಾರಿಯೂ ಆಗಿರುವ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.ಕಳೆದ ಮಾರ್ಚ್ ತಿಂಗಳಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಸುಮಾರು 3 ತಿಂಗಳ ಕಾಲ ನೀತಿ ಸಂಹಿತೆ ಜಾರಿಯಲ್ಲಿತ್ತು.ಅದಾದ ಬಳಿಕ ವಿಧಾನ ಪರಿಷತ್‌ನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾದ ಬಳಿಕ ಮತ್ತೆ ನೀತಿ ಸಂಹಿತೆ ಜಾರಿಯಾಗಿತ್ತು.ಇದೀಗ ಮತ್ತೆ ವಿಧಾನ ಪರಿಷತ್ ಉಪಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದೆ.


ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಮುಂದೂಡಿಕೆ;
ನಗರ ಸಭೆಯ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿ ಸ್ಥಾಯಿ ಸಮಿತಿಗೆ ಸದಸ್ಯರ ಆಯ್ಕೆ ನಡೆದು ಸೆ.20ರಂದು ನಡೆಯಬೇಕಿದ್ದ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಯನ್ನು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ಪೌರಾಯುಕ್ತ ಮಧು ಎಸ್ ಮನೋಹರ್ ತಿಳಿಸಿದ್ದಾರೆ.

ಗ್ರಾ.ಪಂ.ಗಳಿಗೆ ತಾ.ಪಂ.ಇಒ ಸೂಚನೆ
ವಿಧಾನ ಪರಿಷತ್ ಉಪ ಚುನಾವಣೆಗೆ ಸಂಬಂಧಿಸಿ ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆಯು ಜಾರಿಯಾಗಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಎಲ್ಲಾ ಸರಕಾರಿ ಆಸ್ತಿಗಳಲ್ಲಿ ಇರುವಂತಹ ವಿವಿಧ ಸರಕಾರಿ ಯೋಜನೆಗಳ ಮಾಹಿತಿಗಳಲ್ಲಿ ಮಂತ್ರಿಗಳು/ಜನಪ್ರತಿನಿಧಿಗಳಿರುವ ಪೊಟೋ, ಹೆಸರು ಅಥವಾ ರಾಜಕೀಯ ಪಕ್ಷಗಳ ಚಿಹ್ನೆಗಳಿರುವ ಅಥವಾ ರಾಜಕೀಯ ಪ್ರೇರಿತವಾದ ಎಲ್ಲಾ ಬ್ಯಾನರ್, ಬಂಟಿಂಗ್ಸ್, ಹೋರ್ಡಿಂಗ್ಸ್ , ಬೋರ್ಡಿಂಗ್ಸ್, ಪ್ಲೆಕ್ಸ್, ಬಿತ್ತಿಚಿತ್ರ ಹಾಗೂ ಇತರೆ ಯಾವುದೇ ಮುದ್ರಣಗಳು ಮುಂದಿನ 24 ಗಂಟೆಯ ಗಡುವಿನೊಳಗಡೆ ಸಂಪೂರ್ಣವಾಗಿ ಹಾಗೂ ಕಡ್ಡಾಯವಾಗಿ ತೆರವುಗೊಳಿಸಬೇಕು.ಮುಂದಿನ 48 ಗಂಟೆಯ ಗಡುವಿನೊಳಗೆ ಸಾರ್ವಜನಿಕ ಆಸ್ತಿ/ಪ್ರದೇಶಗಳಲ್ಲಿರುವ ಅನಧಿಕೃತವಾಗಿ/ಅನುಮತಿ ಇಲ್ಲದೇ ಅಳವಡಿಸಿರುವ, ಮೇಲೆ ತಿಳಿಸಿರುವ ಎಲ್ಲಾ ಮುದ್ರಣಗಳನ್ನು ತೆರವುಗೊಳಿಸಬೇಕು.ಮುಂದಿನ 72 ಗಂಟೆಯೊಳಗೆ ಎಲ್ಲಾ ಖಾಸಗಿ ಆಸ್ತಿ/ಪ್ರದೇಶದಲ್ಲಿರುವ ಎಲ್ಲಾ ರಾಜಕೀಯ ಪ್ರೇರಿತ ಮುದ್ರಣಗಳನ್ನು ತೆರವುಗೊಳಿಸಿ ಸೀಮಿತ ಅವಽಗೆ ಅನುಗುಣವಾಗಿ ಮಾಹಿತಿಯನ್ನು ಛಾಯಾಚಿತ್ರದೊಂದಿಗೆ ಕಚೇರಿಗೆ ವರದಿ ನೀಡಲು ತಾ.ಪಂ.ಕಾರ್ಯನಿರ್ವಾಹಕ ಅಽಕಾರಿಯವರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು/ಕಾರ್ಯದರ್ಶಿಗಳು/ಲೆಕ್ಕ ಸಹಾಯಕರಿಗೆ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here