ರೋಟರಿ ಕ್ಲಬ್ ಬಿರುಮಲೆ ಹಿಲ್ಸ್‌ಗೆ ಜಿಲ್ಲಾ ಗವರ್ನರ್ ವಿಕ್ರಂ ದತ್ತ ಅಧೀಕೃತ ಭೇಟಿ-ಕ್ಲಬ್‌ನ ವಿವಿಧ ಸಮಾಜಮುಖಿ ಕಾರ್ಯಕ್ರಮಗಳಿಗೆ ಚಾಲನೆ

0

ಪುತ್ತೂರು:ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ರೋಟರಿ ಕ್ಲಬ್ ಪುತ್ತೂರು ಬಿರುಮಲೆ ಹಿಲ್ಸ್‌ಗೆ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ಸೆ.21ರಂದು ಅಧಿಕೃತ ಭೇಟಿ ನೀಡಿ ಕ್ಲಬ್‌ನಿಂದ ಹಮ್ಮಿಕೊಂಡ ವಿವಿಧ ಸಮಾಜಮುಖಿ ಸೇವಾ ಕಾರ್ಯಗಳಿಗೆ ಚಾಲನೆ ನೀಡಿದರು.


ಪುತ್ತೂರಿಗೆ ಆಗಮಿಸಿದ ಜಿಲ್ಲಾ ಗವರ್ನರ್‌ರನ್ನು ದರ್ಬೆ ಬೈಪಾಸ್ ಅಶ್ವಿನಿ ವೃತ್ತದ ಬಳಿ ಬೆಳಿಗ್ಗೆ ಜಿಲ್ಲಾ ಗವರ್ನರ್‌ರವರಿಗೆ ಸ್ವಾಗತಿಸಲಾಯಿತು. ನಂತರ ರೋಟರಿ ಕ್ಲಬ್‌ ನ ವಿಶ್ವಾಸ್ ಶೆಣೈಯವರ ನಿವಾಸಕ್ಕೆ ತೆರಳಿ ಅಲ್ಲಿ ಉಪಹಾರ ನಡೆಯಿತು. ನಂತರ ಅವರ ಮನೆಯಲ್ಲಿ ನಿರ್ಮಿಸಲಾದ ಮಳೆ ಕೊಯಿಲು ಯೋಜನೆಯ ಉದ್ಘಾಟನೆ ಹಾಗೂ ಹಸಿರು ವನ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಬಳಿಕ ಬಿರುಮಲೆ ಪ್ರಜ್ಞಾ ಆಶ್ರಮದಲ್ಲಿ ಮೈಕ್ರೋ ವೋವೆನ್ ಹಸ್ತಾಂತರ ನಡೆಸಿಕೊಟ್ಟರು.


ನಂತರ ನಡೆದ ಕ್ಲಬ್ ಎಸ್ಸೆಂಬ್ಲಿಯಲ್ಲಿ ಜಿಲ್ಲಾ ಗವರ್ನರ್ ವಿಕ್ರಮ್‌ದತ್ತ ಮಾತನಾಡಿ, ರೋಟರಿ ಕ್ಲಬ್‌ಗೆ 119 ವರ್ಷಗಳ ಇತಿಹಾಸವಿದೆ. ಶಿಸ್ತು ಬದ್ದ ಸಂಘಟನೆಯಾಗಿ ರೋಟರಿ ಕ್ಲಬ್ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಜಗತ್ತಿನ ಮೂಲೆ ಮೂಲೆಯಲ್ಲಿ ವಿಸ್ತಾರಗೊಂಡಿರುವ ರೋಟರಿ ಕ್ಲಬ್ ಯಾರಿಗೆ ಯಾವುದೇ ಸಮಸ್ಯೆ ಉಂಟಾದರೂ ಸ್ಪಂಧನೆ ನೀಡುತ್ತಿದೆ. ಕ್ಲಬ್‌ಗೆ ಸೇರ್ಪಡೆಗೊಳ್ಳುವುದಕ್ಕೆ ಯಾವುದೇ ಜಿಜ್ಞಾಸೆ ಬೇಡ ಎಂದರು. ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಉತ್ತಮ ಕ್ಲಬ್ ಆಗಿ ಮೂಡಿಬರಬೇಕು. ಕ್ಲಬ್ 5 ವಿಭಾಗಗಳ ನಿರ್ದೇಶಕರು ಅಧ್ಯಕ್ಷರಿಗೆ ಬೆನ್ನೆಲುಬಾಗಿ ಕೆಲಸ ಮಾಡಬೇಕು. ಸದಸ್ಯರು ವಾರದಲ್ಲಿ ಕನಿಷ್ಠ ಒಂದು ಗಂಟೆಯಾದರೂ ಕ್ಲಬ್ ಚಟುವಟಿಕೆಗಳಿಗೆ ಮೀಸಲಿಡಬೇಕು ಎಂದು ಹೇಳಿದರು.


ಸಹಾಯಕ ಗವರ್ನರ್ ವಿನಯ ಕುಮಾರ್ ಮಾತನಾಡಿ, ನೂತನ ಬಿರುಮಲೆ ಹಿಲ್ಸ್ ಕ್ಲಬ್ ಇತರ ಕ್ಲಬ್‌ಗಳಿಗಿಂತ ವಿಭಿನ್ನವಾಗಿದೆ. ಬಿರುಮಲೆ ಬೆಟ್ಟದ ಅಭಿವೃದ್ಧಿಗಾಗಿ ಹುಟ್ಟಿಕೊಂಡಿರುವ ಉತ್ತಮ ಕ್ಲಬ್ ಕಾರ್ಯ ಸಾಧನೆಯಲ್ಲಿ ವೇಗವಾಗಿ ಮುನ್ನಡೆಯುತ್ತಿದೆ. ವರ್ಷದ ಪ್ರಾರಂಭದಲ್ಲೇ ಜಿಲ್ಲಾ ಗವರ್ನರ್ ಭೇಟಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದೆ ಎಂದರು.


ಪ್ರಭಾಕರ ನಾಯರ್ ಮಾತನಾಡಿ, ಹೊಸದಾಗಿ ಪ್ರಾರಂಭಗೊಂಡಿರುವ ಕ್ಲಬ್‌ನ ಮುಖಾಂತರ ಅತ್ಯುತ್ತಮ ಕಾರ್ಯಗಳು ನಡೆಯುತ್ತಿದೆ. ಎಲ್ಲರ ಸಹಕಾರದಿಂದ ರೋಟರಿ ಜಿಲ್ಲೆಯಲ್ಲಿ ಬಿರುಮಲೆ ಹಿಲ್ಸ್ ಮಾದರಿ ಕ್ಲಬ್ ಆಗಿ ಮೂಡಿಬರಲಿ ಎಂದ ಅವರು ಪ್ರಜ್ಞಾ ವಿಶೇಷ ಚೇತನರ ಆಶ್ರಮಕ್ಕೆ ರೂ.10,000 ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದರು.


ಕ್ಲಬ್ ಸಂಯೋಜಕ ಶರತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್‌ನ ಸದಸ್ಯ ರುಕ್ಮಯ್ಯ ಕುಲಾಲ್ ಪ್ರಾರ್ಥಿಸಿದರು. ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ವಂದನಾ ಶರತ್ ವರದಿ ವಾಚಿಸಿ, ವಂದಿಸಿದರು. ಖಜಾಂಚಿ ಪುರುಷೋತ್ತಮ ಪ್ರಭು ಗವರ್ನರ್ ಪರಿಚಯ ಮಾಡಿದರು.


ಬಳಿಕ ಬಿರುಮಲೆ ಬೆಟ್ಟ ವೀಕ್ಷಣೆ ಮಾಡಿದರು. ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಯಾನಿಟರಿ ಪ್ಯಾಡ್ ಬರ್ನಿಂಗ್ ಮೆಷಿಂಗ್ ಹಸ್ತಾಂತರ ನಡೆಸಿಕೊಟ್ಟರು.
ರೋಟರಿ ಕ್ಲಬ್‌ನ ಪ್ರಮುಖರಾದ ವಿಶ್ವಾಸ್ ಶೆಣೈ, ಪುರಂದರ ರೈ ಮಿತ್ರಂಪಾಡಿ, ಆಸ್ಕರ್ ಆನಂದ್, ಸಂತೋಷ್ ಶೆಟ್ಟಿ, ವಾಮನ್ ಪೈ, ಸಾಜ ರಾಧಾಕೃಷ್ಣ ಆಳ್ವ ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here