ಉಪ್ಪಿನಂಗಡಿ: ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ಉಪ್ಪಿನಂಗಡಿಯು 2023-24ನೇ ಸಾಲಿನಲ್ಲಿ 521 ಕೋ. ರೂ. ವ್ಯವಹಾರ ನಡೆಸಿ, 3,50,41,100.86 ರೂ. ಲಾಭ ಗಳಿಸಿದೆ. ಬಂದ ಲಾಭಾಂಶದಲ್ಲಿ ಸದಸ್ಯರಿಗೆ ಶೇ.15 ಡಿವಿಡೆಂಟ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ ಘೋಷಿಸಿದರು.
ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ನೇತ್ರಾವತಿ ಸಭಾಂಗಣದಲ್ಲಿ ಸೆ.22ರಂದು ನಡೆದ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದ.ಕ. ಜಿಲ್ಲೆಯ ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ಉತ್ತಮ ಸೇವೆಯಿಂದ ಹೆಸರು ಪಡೆದುಕೊಂಡ ನಮ್ಮ ಸಂಘವು ವರದಿ ವರ್ಷಾಂತ್ಯಕ್ಕೆ 8942 ಜನ ಸದಸ್ಯರಿಂದ 9.10 ಕೋ. ರೂ. ಪಾಲು ಬಂಡವಾಳ ಸಂಗ್ರಹಿಸಿದೆ. ಠೇವಣಾತಿ ಮೊತ್ತವು 94.50 ಕೋ.ರೂ. ಆಗಿದ್ದು, ಶೇ.12.02 ಅಭಿವೃದ್ಧಿ ಸಾಧಿಸಿದೆ. ವ್ಯಾಪಾರ ವಿಭಾಗದಲ್ಲಿ 87.65 ಲಕ್ಷ ಲಾಭ ಸೇರಿದಂತೆ ವರದಿ ಸಾಲಿನಲ್ಲಿ 3.50 ಕೋ. ನಿವ್ವಳ ಲಾಭ ಗಳಿಸಿದೆ. ಇದಕ್ಕೆ ಸಹಕರಿಸಿದ ಸದಸ್ಯರು, ಗ್ರಾಹಕರು, ಠೇವಣಿದಾರರು, ಕೇಂದ್ರ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗ, ಸಂಘದ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಪ್ರಸ್ತುತ ಸಾಲಿನಲ್ಲಿ ಸಂಘವು 3.50 ಕೋ.ರೂ. ನಿವ್ವಳ ಲಾಭ ಗಳಿಸಿದ್ದರೂ ಡಿವಿಡೆಂಟ್ ಮಾತ್ರ 4 ವರ್ಷಗಳಿಂದ ಏರಿಕೆಯೇ ಆಗುತ್ತಿಲ್ಲ. ಈ ಬಾರಿಯೂ ಶೇ.13 ಡಿವಿಡೆಂಟ್ ನೀಡುವುದಾಗಿ ಸಭೆಗೆ ಶಿಫಾರಸ್ಸು ಮಾಡಿದ್ದೀರಿ. ಅದು ಬೇಡ. ಈ ಬಾರಿ ಶೇ. 20 ಡಿವಿಡೆಂಟ್ ಸದಸ್ಯರಿಗೆ ನೀಡಬೇಕು ಎಂದು ಲಕ್ಷ್ಮಣ ಗೌಡ ನೆಡ್ಚಿಲ್, ಚಂದ್ರಶೇಖರ ತಾಳ್ತಜೆ, ವೆಂಕಟ್ರಮಣ ಭಟ್ ಪೆಲಪ್ಪಾರು, ರೂಪೇಶ್ ರೈ ಅಲಿಮಾರ್ ಮತ್ತಿತರರು ಆಗ್ರಹಿಸಿದರು. ವರ್ಷದಿಂದ ವರ್ಷಕ್ಕೆ ಸಂಘದ ಲಾಭ ಹೆಚ್ಚಾಗುತ್ತಲೇ ನಡೆದಿದೆ. ಈ ಬಾರಿ ಗರಿಷ್ಠ ಡಿವಿಡೆಂಟ್ ನೀಡಲೇ ಬೇಕು ಎಂದು ಅವರು ವಾದಿಸಿದರು. ಆದರೆ ಇದಕ್ಕೆ ಸಮ್ಮತಿಸದ ಅಧ್ಯಕ್ಷರು, ಶಾಖಾ ಕಚೇರಿಗಳಿಗೆ ಜಾಗ ಖರೀದಿ, ಕಟ್ಟಡ ನಿರ್ಮಿಸಲು ನಿಧಿ ಬೇಕಾಗಿದೆ. ಹಾಗಾಗಿ ಡಿವಿಡೆಂಟ್ ಹೆಚ್ಚು ಮಾಡಲು ಸಾಧ್ಯವಿಲ್ಲ ಎಂದರು. ಕೊನೆಗೂ ಸದಸ್ಯರ ಆಗ್ರಹಕ್ಕೆ ಮಣಿದ ಅಧ್ಯಕ್ಷರು ಶೇ.15 ಡಿವಿಡೆಂಟ್ ನೀಡುವುದಾಗಿ ಅವರು ಘೋಷಣೆ ಮಾಡಿದರು.
ರೈತರ ಪಾಲಿಗೆ ಅತ್ಯಗತ್ಯವಾದ ಮಣ್ಣಿನ ಸತ್ವ ತಿಳಿಯುವ ಮಣ್ಣು ಪರೀಕ್ಷಾ ಕಾರ್ಯಾಗಾರವನ್ನು ನಡೆಸಿ ಸಂಘದ ವ್ಯಾಪ್ತಿಯ ರೈತರಿಗೆ ಹಾಗೂ ಕೃಷಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಸದಸ್ಯರು ಸಂಘದ ಸಭೆಯಲ್ಲಿ ಆಗ್ರಹಿಸಿದರು. ಮಣ್ಣಿನ ಸತ್ವ ಪರೀಕ್ಷೆ ನಡೆಸುವ ಅನಿವಾರ್ಯತೆಯನ್ನು ಸದಸ್ಯರು ಈ ಸಂದರ್ಭ ಮಂಡಿಸಿದರು.
ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ ತಾಳ್ತಾಜೆ ಮಾತನಾಡಿ, ಸಂಘವು ಕೃಷಿಕ ಸದಸ್ಯರಿಗೆ ಅಲ್ಪಾವಧಿ ಬೆಳೆ ಸಾಲ 5 ಲಕ್ಷ ರೂ.ವರೆಗೆ ನೀಡಬೇಕು ಎಂದು ಸರಕಾರದ ಸುತ್ತೋಲೆ ಇದೆ. ಆದರೆ ನೀವು 3 ಲಕ್ಷ ರೂ. ನೀಡುತ್ತಿರುವುದಾಗಿ ವರದಿಯಲ್ಲಿ ತಿಳಿಸಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಕೆ.ವಿ. ಪ್ರಸಾದ, ರೈತಾಪಿ ವರ್ಗಕ್ಕೆ ಅಲ್ಪಾವಧಿ ಬೆಳೆಸಾಲ 3 ಲಕ್ಷದ ಬದಲಿಗೆ 5 ಲಕ್ಷ ರೂ. ಕೊಡಬೇಕು ಎಂಬುವುದು ಸರಕಾರದ ಸುತ್ತೋಲೆಯಾಗಿದೆ. ಕೊಡಲು ಅವಕಾಶ ಇದೆ. ಆದರೆ ನಮ್ಮ ಸಂಘದಲ್ಲಿ ಅಷ್ಟು ಕೊಡಲು ಹಣಕಾಸಿನ ವ್ಯವಸ್ಥೆ ಇಲ್ಲ. ಈಗ 3 ಲಕ್ಷ ಪಡೆದವರಿಗೆ 5 ಲಕ್ಷ ಕೊಡಲು ಹೋದರೆ 32 ಕೋಟಿ ಬೇಕು. ಅಷ್ಟು ಹಣಕ್ಕೆ ನಾವು ಎಲ್ಲಿಗೆ ಹೋಗೋದು ಎಂದರು.
ಫಸಲು ಭಿಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಯೋಜನೆಗೆ ಬೆಳೆ ಸಮೀಕ್ಷೆ ಮಾಡುವವರು ಯಾರು? ಯಾವ ಇಲಾಖೆ ಎಂಬುದು ಬಹಿರಂಗವಾಗುತ್ತಿಲ್ಲ. ಪ್ರತೀ ವರ್ಷ ಬೆಳೆ ಸಮೀಕ್ಷೆ ಮಾಡುವುದು ರೈತರನ್ನು ಮೋಸಗೊಳಿಸುವ ಸರ್ಕಾರದ ಹುನ್ನಾರವಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ 5 ವರ್ಷಕ್ಕೊಮ್ಮೆ ಬೆಳೆ ಸಮೀಕ್ಷೆ ಮಾಡಿದರೆ ಸಾಕು ಎಂಬ ನಿರ್ಣಯ ಮಾಡೋಣ ಎಂದು ಸದಸ್ಯರಾದ ಲಕ್ಷ್ಮಣ ಗೌಡ, ಜಯಂತ ಪೊರೋಳಿ, ರೂಪೇಶ್ ರೈ ಅಲಿಮಾರ ಮತ್ತಿತರರು ಪ್ರಸ್ತಾಪಿಸಿದರು. ಈ ವಿಚಾರದಲ್ಲಿ ಸಹಮತ ವ್ಯಕ್ತಪಡಿಸಿದ ಚಂದ್ರಶೇಖರ ತಾಳ್ತಜೆ ಅವರು ಸಂಘದ ನೇತೃತ್ವದಲ್ಲಿ ರಾಜ್ಯ ಸರಕಾರದ ವಿರುದ್ಧ ರೈತರು ಪ್ರತಿಭಟನೆ ಮಾಡೋಣ ಎಂದರು. ಅಧ್ಯಕ್ಷ ಕೆ.ವಿ.ಪ್ರಸಾದ ಅವರೂ ಇದಕ್ಕೆ ಸಮ್ಮತಿಸಿದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಸದಸ್ಯರಾದ ಮಹೇಂದ್ರವರ್ಮ ಮಾತನಾಡಿ, ನಾವ್ಯಾಕೆ ಪ್ರತಿಭಟನೆ ಮಾಡಬೇಕು. ನಾವು ಓಟು ಕೊಟ್ಟು ಕಳುಹಿಸಿಲ್ವಾ. ಅಲ್ಲಿ ವಿರೋಧಪಕ್ಷದಲ್ಲಿ ಕುಳಿತುಕೊಂಡು ಅವರೇನು ಕತ್ತೆ ಕಾಯುತ್ತಾ ಇದ್ದಾರಾ. ಅವರು ಅಧಿವೇಶನದಲ್ಲಿ ಈ ಬಗ್ಗೆ ಮಾತನಾಡಲಿ. ಅವರು ಪ್ರತಿಭಟನೆ ಮಾಡಲಿ ಎಂದು ಖಾರವಾಗಿಯೇ ನುಡಿದರು. ಇದಕ್ಕೆ ಬಲವಾದ ಬೆಂಬಲ ವ್ಯಕ್ತವಾಗಿ ಹಲವು ದ್ವನಿಗಳು ಕೇಳಿ ಬಂದವು. ವಿರೋಧ ಪಕ್ಷದವರನ್ನು ಮಾತ್ರ ಉಲ್ಲೇಖೀಸಿದ್ದಕ್ಕೆ ರೈತರ ಸಮಸ್ಯೆಗೆ ಸ್ಪಂದಿಸುವಲ್ಲಿ ಆಡಳಿತ ಪಕ್ಷಕ್ಕೂ ಬದ್ಧತೆ ಇದೆ ಎಂದು ಅಧ್ಯಕ್ಷರು ದ್ವನಿ ಎತ್ತಿದಾಗ ರೈತರ ಪ್ರತಿಭಟನೆ ವಿಚಾರ ತಣ್ಣಗಾಯಿತು. ನಮ್ಮ ಶಾಸಕರು ಅಧಿವೇಶನದಲ್ಲಿ ಈಗಾಗಲೇ ಹಲವು ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ ಎಂಬ ಧ್ವನಿ ಈ ಸಂದರ್ಭ ರೂಪೇಶ್ ರೈ ಅಲಿಮಾರ್ ಅವರಿಂದ ಕೇಳಿ ಬಂತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸುನೀಲ್ ಕುಮಾರ್ ದಡ್ಡು, ನಿರ್ದೇಶಕರಾದ ಯಶವಂತ ಜಿ., ಜಗದೀಶ್ ರಾವ್ ಎಂ., ರಾಜೇಶ್, ಯತೀಶ್ ಶೆಟ್ಟಿ ಯು., ರಾಮ ನಾಯ್ಕ, ಶ್ಯಾಮಲಾ ಶೆಣೈ ಎನ್., ದಯಾನಂದ ಎಸ್., ಕುಂಞ ಎನ್., ಸಚಿನ್ ಮುದ್ಯ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪ್ರತಿನಿಧಿ ಶರತ್ ಉಪಸ್ಥಿತರಿದ್ದರು.
ಸಂಘದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಶೋಭಾ ಕೆ. ವರದಿ ಮಂಡಿಸಿದರು. ಉಪಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪರಾಜ್ ಶೆಟ್ಟಿ ಎಚ್. ಕಾರ್ಯಕ್ರಮ ನಿರೂಪಿಸಿದರು. ಶಾಖಾ ವ್ಯವಸ್ಥಾಪಕರಾದ ಶಶಿಧರ ಹೆಗ್ಡೆ ಕೆ., ಪ್ರವೀಣ್ ಆಳ್ವ, ಲೆಕ್ಕಾಧಿಕಾರಿ ರವೀಶ್ ಎಚ್.ಟಿ., ವಸೂಲಾತಿ ಅಧಿಕಾರಿ ಉಮೇಶ ಸೇರಿದಂತೆ ಸಿಬ್ಬಂದಿ ಸಹಕರಿಸಿದರು.