ರಾಷ್ಟ್ರಕವಿ ಕುವೆಂಪು ಕಂಡಂತೆ ರಾಷ್ಟ್ರಪಿತ ಗಾಂಧೀಜಿ-ಬ್ರಿಟಿಷರ ವಿರುದ್ಧ ಉಪವಾಸ ಮಾಡಿದ ಗಾಂಧೀಜಿ- ತನ್ನದೇ ನೆಲದಲ್ಲಿ ದೇಶವಾಸಿಗಳ ವಿರುದ್ಧ ಉಪವಾಸ ಮಾಡಿದ್ದು ಯಾಕೆ ಗೊತ್ತೇ

0

(ವಾಗ್ಮಿ ನಿಕೇತ್‌ರಾಜ್ ಮೌರ್ಯ ಅವರ ಮಾತುಗಳಿಂದ ಆಯ್ದ ಭಾಗ)

*ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಗಾಂಧೀಜಿ ಎಲ್ಲಿ ಎಂಬ ಪ್ರಶ್ನೆ ಇಡೀ ದೇಶದ ಜನರ ಹೃದಯವನ್ನು ಕಾಡುತ್ತಿತ್ತು.
*ಆ ಕೋಟಿ ಕೋಟಿ ಕಂಗಳು ಹುಡುಕುತ್ತಿದ್ದುದು ಗಾಂಧೀಯನ್ನು. ಗಾಂಧೀಜಿಯವರು ಮಾತ್ರ ಎಲ್ಲೂ ಕಾಣಲಿಲ್ಲ. ಅವರು ಎಲ್ಲಿ ಹೋಗಿದ್ದರು?
*ಎಲ್ಲಿಗೆ ಹೋದೆ ಹೇ ಸ್ವಾತಂತ್ರ್ಯ ಕನ್ಯೆಯಂ ಪಡೆದ ತಂದೆ ಎಲ್ಲಿಗೆ ಹೋದೆ?

ಕುವೆಂಪು ಅವರಿಗೆ ಗಾಂಧಿ ಎನ್ನುವ ಹೆಸರು ಕೇಳಿದ ತಕ್ಷಣ ರೋಮಾಂಚನವಾಗುತ್ತಿತ್ತು. ಗಾಂಧಿ ಬೆಳಗಾವಿ ಅಧಿವೇಶನಕ್ಕೆ ಬರ್ತಾರೆ ಅಂದಾಗ ಅವರನ್ನು ಹೇಗಾದರೂ ನೋಡಬೇಕೆಂದು ಕುವೆಂಪು ಅವರಿಗೆ ತಹತಹಿಸ್ತಾ ಇತ್ತು. ಕುವೆಂಪು ಅವರು ಕಾಂಗ್ರೆಸ್‌ನವರಾಗಿರಲಿಲ್ಲ, ಸ್ವಾತಂತ್ರ್ಯ ಹೋರಾಟದಲ್ಲೂ ಅವರೇನೂ ಭಾಗಿಯಾದವರಲ್ಲ. ಅವರೊಬ್ಬ ಕವಿ ಹೃದಯದ ಮನುಷ್ಯ. ಆದರೆ ಗಾಂಧಿ ಎನ್ನುವ ಹೆಸರು ಕೇಳಿದಾಕ್ಷಣ ಅವರ ಮನಸ್ಸು ಅರಳುತ್ತಿತ್ತು. ಗಾಂಧಿಯನ್ನು ನೋಡಬೇಕು ಎಂದು ದೂರದ ಬೆಳಗಾವಿಗೆ ಪ್ರಯಾಣ ಮಾಡಿದ್ರು. ಅಲ್ಲಿ ಆ ಮೈದಾನದಲ್ಲಿ ಲಕ್ಷಾಂತರ ಜನ ಸೇರಿ ಹೋಗಿದ್ರು. ಅವರೆಲ್ಲಾ ಗಾಂಧಿಯನ್ನು ನೋಡುವುದಕ್ಕೋಸ್ಕರ ಕಾತರರಾಗಿದ್ದರು.


ಆ ನೂಕಾಟದ ಮಧ್ಯೆ ಕುವೆಂಪು ಗಾಂಧಿಯನ್ನು ನೋಡುತ್ತಾರೆ. ಅಲ್ಲಿದ್ದ ಲಕ್ಷ ಲಕ್ಷ ಜನ ಮಹಾತ್ಮಾಗಾಂಧಿ ಪರ ಘೋಷಣೆಗಳನ್ನು ಕೂಗುತ್ತಾ ಇದ್ದರು. ಭಾರತದ ಸ್ವಾತಂತ್ರ್ಯಕ್ಕೋಸ್ಕರ ಆ ಲಕ್ಷ ಲಕ್ಷ ಮನಸ್ಸುಗಳು ಹವಣಿಸುತ್ತಾ, ಕಾತರಿಸುತ್ತಾ ಇತ್ತು. ಗಾಂಧೀಜಿ ನಮಗೆ ಆ ಸ್ವಾತಂತ್ರ್ಯವನ್ನು ಕೊಡುತ್ತಾರೆ ಎಂಬ ಭಾವನೆಯಿಂದ ಎಲ್ಲರೂ ಕೈ ಎತ್ತಿ ಗಾಂಧಿಯನ್ನು ನಮಿಸ್ತಾ ಇದ್ದರು.


ಈ ಅನುಭವವನ್ನು ಕುವೆಂಪು ಬರೀತಾರೆ: ಯಾರಿವನು, ಇವನೇನು ದಶಕಂಠ ರಾವಣನ ಎದೆ ಸೀಳಿದ ಕೋದಂಡ ಪಾಣಿ ರಾಮನಲ್ಲ. ಹಿರಣ್ಯಾಕ್ಷನ ಎದೆ ಬಗೆದ ನಾರಸಿಂಹನಲ್ಲ. ಅಥವಾ ತ್ರಿವಿಕ್ರಮನಲ್ಲ, ವಾಮನನಲ್ಲ, ಯಾರಿವನು? ಇವನ ತಲೆಯೋ ಬೋಳು ತಲೆ, ಇವನ ಬಾಯೋ ಬೊಚ್ಚು ಬಾಯಿ. ಇವನ ದೇಹವೋ ಕೃಶ ಶರೀರ. ಆದರೆ ಇವನ ಹೃದಯದಲ್ಲಿರುವ ಮಾನವ ಪ್ರೇಮ ಭಾನು ಭುವಿಗಳನ್ನು ಬಾಚಿ ತಬ್ಬಿ ಹಿಡಿದಿದೆ ಎನ್ನುವ ಭಾವಾರ್ಥ ಬರುವಂತೆ ಗಾಂಧೀಜಿ ಕುರಿತು ಬರೆಯುತ್ತಾರೆ ಕುವೆಂಪು.


ಗಾಂಧೀಜಿ ಜನರ ಕಡೆಗೆ ನಮಸ್ಕಾರ ಮಾಡುತ್ತಾ ನಡೆದುಕೊಂಡು ಬರುತ್ತಿದ್ದರೆ, ಆ ದೃಶ್ಯವನ್ನು ಕಣ್ತುಂಬಿಕೊಂಡ ಕುವೆಂಪು ಆ ಗಾಂಧಿ ಕುರಿತ ಸ್ಮೃತಿಯನ್ನು ಸದಾ ಕಾಲ ತಮ್ಮ ಹೃದಯದಲ್ಲಿ ನೆಲೆಯಾಗಿಸಿಕೊಂಡಿದ್ದರು.


ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಗಾಂಧೀಜಿ ಎಲ್ಲಿ ಎಂಬ ಪ್ರಶ್ನೆ ಇಡೀ ದೇಶದ ಜನರ ಹೃದಯವನ್ನು ಕಾಡುತ್ತಿತ್ತು. ದೇಶಕ್ಕೆ ಸ್ವಾತಂತ್ರ್ಯವೇನೋ ಬಂತು, ಆದರೆ ಸ್ವಾತಂತ್ರ್ಯ ಬರುವ ಮೊದಲೇ ದೇಶ ತುಂಡಾಯಿತು. ಮತ್ತೊಂದು ಕಡೆ ಧಾರ್ಮಿಕ ಸಾಮರಸ್ಯ ಹಾಳಾಗಿದ್ದದರಿಂದ ನೌಕಾಲಿಯಲ್ಲಿ ಧರ್ಮ ಧರ್ಮಗಳ ನಡುವಿನ ಸಂಘರ್ಷ ತಡೆಯುವುದು ಆದ್ಯ ಕರ್ತವ್ಯವಾಗಿತ್ತು. ಈ ಕಡೆ ಪಂಡಿತ್ ನೆಹರೂ, ಸರ್ದಾರ್ ಪಟೇಲ್, ಮೌಲಾನಾ ಆಝಾದ್ ಇಂತಹ ಮಹಾನ್ ನಾಯಕರೆಲ್ಲಾ ಅಲ್ಲಿ ನೆರೆದಿದ್ದ ಲಕ್ಷಾಂತರ ಜನರಿಗೆ ಅವರಿಗೆ ದೇಶದ ಕನಸನ್ನು ಕಟ್ಟುವುದಕ್ಕೋಸ್ಕರ ಮುಂದೆ ನಿಂತು ಕೆಂಪುಕೋಟೆಯ ಮೇಲೆ ಮಾತನಾಡುತ್ತಿದ್ದರೆ, ಆ ಕೋಟಿ ಕೋಟಿ ಕಂಗಳು ಹುಡುಕುತ್ತಿದ್ದುದು ಗಾಂಧಿಯನ್ನು. ಗಾಂಧಿಜಿಯವರು ಮಾತ್ರ ಎಲ್ಲೂ ಕಾಣಲಿಲ್ಲ. ಅವರು ಎಲ್ಲಿ ಹೋಗಿದ್ದರು? – ಈ ಮಾತುಗಳನ್ನೆಲ್ಲಾ ರೇಡಿಯೋದಲ್ಲಿ ಕೇಳಿಸಿಕೊಂಡ ಕುವೆಂಪು ಕರ್ನಾಟಕದಲ್ಲಿ ಕೂತು ಪದ್ಯ ಬರೆದರು.


ಮನಸ್ಸು ತುಂಬಿ ಭಾವುಕರಾಗಿ ಕುವೆಂಪು ಬರಿತಾರೆ: ಮರೆಯುವುದೆಂತ ಭುವನ ಗೌರವ ಮಹಾತ್ಮನಂ ಸ್ವಾತಂತ್ರ್ಯದಿ ಸುಪ್ರಭಾತದಲ್ಲಿ. ಹೆಜ್ಜೆ ಹೆಜ್ಜೆಯನಿಡಿದು, ಕೈಹಿಡಿದು ನಡೆ ಗಲಿಸಿ ಬಿಡುಗಡೆಗೆ ತಂದ ಆ ತಂದೆ ಎಲ್ಲಿ? ಎಲ್ಲಿ ಅವನೆಲ್ಲಿ? ನಿಚ್ಚವೂ ನಮ್ಮದೆಯ ನಂಜ ನಿಂತುವ ನೀಲಕಂಠನೆಲ್ಲಿ? ಜನಮನದ ಹಗೆತನದ ರೋಷ ಹಾಲಾಹಲದಿ ಹಾಲುದಿಸಿ ಬರುವಂತೆ ಮೂಡಿ ಬಂದೆ. ಕ್ರಿಸ್ತ ಬುದ್ಧರ ಮೈತ್ರಿ ಸಾರಿ ಸಾಧಿಸುತೆ, ವಿಶ್ವಸೇವಕರ ಪಂಕ್ತಿಯಲಿ ನಿಂದೆ. ಎಲ್ಲಿಗೆ ಹೋದೆ ಹೇ ಸ್ವಾತಂತ್ರ್ಯ ಕನ್ಯೆಯಂ ಪಡೆದ ತಂದೆ ಎಲ್ಲಿಗೆ ಹೋದೆ?


ಅಂದರೆ ತಂದೆ ಮಗಳ ಮದುವೆ ಆಗ್ತಾ ಇದ್ರೆ ಬಾರದಿರುತ್ತಾನಾ? ಈ ದೇಶದ ಸ್ವಾತಂತ್ರ್ಯ ಕನ್ಯೆಯನು ಹಡೆದ ತಂದೆ ನೀನು. ನೀನೆಲ್ಲಿಗೆ ಹೋದೆ? ಕುವೆಂಪು ಕೇಳ್ತಾರೆ.
ಆ ಪ್ರಶ್ನೆಗೆ ಗಾಂಧಿಯೇ ಉತ್ತರ ಕೊಟ್ಟಿದ್ರು. ದೇಶದ ಸ್ವಾತಂತ್ರ್ಯ ಬಂತು ಎಂದು ಜನ ಸಂಭ್ರಮ ಪಡ್ತಾ ಇದ್ರೆ, ಗಾಂಧಿ ಗೋಳಾಡ್ತಾ ಇದ್ರು, ಕಣ್ಣೀರು ಸುರಿಸ್ತಾ ಇದ್ರು. ಯಾಕೆಂದ್ರೆ ಸ್ವಾತಂತ್ರ್ಯ ಬಂದಿದೆ. ಬ್ರಿಟಿಷರು ಬಿತ್ತಿದ್ದ ಧರ್ಮ ಧರ್ಮಗಳ ನಡುವಿನ ವಿಷಬೀಜ ಇವತ್ತು ಹೆಮ್ಮರವಾಗಿ ಬೆಳೆದು ಬಿಟ್ಟಿದೆ. ಅಲ್ಲಿ ನೌಕಾಲಿಯಲ್ಲಿ ಮನುಷ್ಯ ಮನುಷ್ಯನನ್ನು ಕೊಲ್ಲುತ್ತಿದ್ದಾನೆ. ಮುಸ್ಲಿಂ ಹಿಂದು ಅಂತ ಕೊಲ್ತಾ ಇದ್ದಾನೆ. ಇದನ್ನು ನೋಡಿದ ಗಾಂಧಿ ಓಡಿ ಹೋಗಿ ನೌಕಾಲಿಯಲ್ಲಿ ಕಣ್ಣೀರು ಸುರಿಸ್ತಾ ಕೂತಿದ್ದಾರೆ. ಉಪವಾಸ ಮಾಡ್ತಿದ್ದಾರೆ. ಅವತ್ತು ಬ್ರಿಟಿಷರ ವಿರುದ್ಧ ಉಪವಾಸವಾದರೆ, ಇವತ್ತು ತನ್ನದೇ ದೇಶವಾಸಿಗಳ ವಿರುದ್ಧ ಗಾಂಧಿ ಉಪವಾಸ ಮಾಡ್ತಾ ಇದ್ದಾರೆ.


ಗಾಂಧೀಜಿ ಕಣ್ಣೀರುಗರೆಯುತ್ತಾ ಹೇಳಿದ್ದನ್ನು ಕುವೆಂಪು ಬರೆಯುತ್ತಾರೆ: ಅವನೆಲ್ಲಿ, ಅವನೆಲ್ಲಿ ಇಲ್ಲಿಲ್ಲ. ಆ ದೂರದಲಿ ದಾರಿದ್ರ್ಯ, ದುಃಖ, ದೈನ್ಯ ಧನ ಮದಗಳೊಡನೆ ವಾದಿಸುತೆ, ಬೋದಿಸುತೆ, ಕರುಣೆಯಂ ಸಾಧಿಸುತೆ, ಭಕ್ತಿಯಂ ದೇವನಂ ಪ್ರಾರ್ಥಿಸುತೆ, ನಿರಶನ ವೃತನಿಷ್ಠನಾಗಿಹನು ನೋಡಲ್ಲಿ, ಧರ್ಮಶಕ್ತಿಯ ಕೃಪೆಯ ಆರ್ಜಿಸುತ್ತೆ.
ಗಾಂಧಿ ಅಲ್ಲಿರುವಂತಹ ಆ ಮತಪಂಥಗಳ ಬೇಧ, ಹಣ, ಅಹಂಕಾರದ ಬೇಧ, ಮನುಷ್ಯ ಮನುಷ್ಯ ನಡುವಿನ ಕ್ರೌರ್ಯ ಇವೆಲ್ಲದರ ವಿರುದ್ಧ ಕಣ್ಣೀರು ಸುರಿಸ್ತಾ ಮನುಷ್ಯರನ್ನು ಜೋಡಿಸುವುದಕ್ಕೋಸ್ಕರ ಅಲ್ಲಿ ನೌಕಾಲಿಯಲ್ಲಿದ್ದಾನೆ.
ಕುವೆಂಪು ಈ ಪದಪುಂಜಗಳನ್ನು ಬರೆಯಬೇಕಾದರೆ ಭಾವುಕರಾಗ್ತಾರೆ. ಕಣ್ಣೀರುಗರೆದಿದ್ದರು. ಇಂತಹ ರಾಷ್ಟ್ರಕವಿ ಅಂತಹ ರಾಷ್ಟ್ರಪಿತನ ನೆನಪಿಸಿಕೊಂಡ ರೀತಿ ಇದು.
(ಸಂಗ್ರಹ: ದುರ್ಗಾ ಕುಮಾರ್ ನಾಯರ್‌ಕೆರೆ)

ಮಹಾತ್ಮ ಗಾಂಧೀಜಿಯ ಬಗ್ಗೆ ಇರುವ ತಪ್ಪು ಅಭಿಪ್ರಾಯಗಳನ್ನು ಹೊಗಲಾಡಿಸಿ ನಿಜಾಂಶವನ್ನು ದೇಶದ ಜನತೆಗೆ ತಿಳಿಸುವ ಉದ್ದೇಶದ ಲೇಖನವಿದು.
| ಡಾ.ಯು.ಪಿ.ಶಿವಾನಂದ, ಸುದ್ದಿ ಜನಾಂದೋಲನ ವೇದಿಕೆ

LEAVE A REPLY

Please enter your comment!
Please enter your name here