ಕಾಣಿಯೂರು: ರಕ್ತದಾನವು ಶ್ರೇಷ್ಠದಾನ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವ ಮೂಲಕ ಅಪಾಯದಲ್ಲಿ ಇರುವ ಅಮೂಲ್ಯ ಜೀವವನ್ನು ಉಳಿಸಲು ಸಾಧ್ಯ. ಇಂತಹ ಶಿಬಿರ ಅಯೋಜಿಸುವ ಮೂಲಕ ರಕ್ತ ಸಂಗ್ರಹಿಸಿ,ರಕ್ತದ ಕೊರತೆ ನಿವಾರಿಸಲು ಸಾಧ್ಯ ಎಂದು ಕಾಣಿಯೂರು ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಮಧುಶ್ರೀ ಹೇಳಿದರು.
ಅವರು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಸುವರ್ಣ ಮಹೋತ್ಸವದ ಪ್ರಯುಕ್ತ ಕಾಣಿಯೂರು ಕಣ್ವರ್ಷಿ ಮಹಿಳಾ ಮಂಡಲದ ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ, ಸುವರ್ಣ ಮಹೋತ್ಸವ ಸಮಿತಿಯ ಆಶ್ರಯಯಲ್ಲಿ ವೆನ್ಲಾಕ್ ಆಸ್ಪತ್ರೆ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಕಾರದೊಂದಿಗೆ ಕಾಣಿಯೂರು ಸ. ಹಿ.ಪ್ರಾ.ಶಾಲೆಯಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಮತ್ತು ರಕ್ತ ವರ್ಗೀಕರಣ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಮಾಜಿ ಕಾರ್ಯದರ್ಶಿ ಲಕ್ಷ್ಮಣ ಗೌಡ ಮುಗರಂಜ ಅಧ್ಯಕ್ಷತೆ ವಹಿಸಿದ್ದರು. ವೆನ್ಲಾಕ್ ಆಸ್ಪತ್ರೆ ಬ್ಲಡ್ ಬ್ಯಾಂಕ್ ಮಂಗಳೂರು ಇಲ್ಲಿನ ಕೌನ್ಸಿಲರ್ ಶ್ರೀಲತಾ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಅಧ್ಯಕ್ಷ ಪುಟ್ಟಣ್ಣ ಗೌಡ ಮುಗರಂಜ, ಕಾರ್ಯದರ್ಶಿ ಜಯಂತ ಅಬೀರ, ಕಾಣಿಯೂರು ಕಣ್ವರ್ಷಿ ಮಹಿಳಾ ಮಂಡಲದ ಗೌರವಾಧ್ಯಕ್ಷೆ ರೋಹಿಣಿ ಸುವರ್ಣ ಅಬೀರ, ಅಧ್ಯಕ್ಷೆ ಮಮತಾ ಲೋಕೇಶ್ ಅಗಳಿ, ವೆನ್ಲಾಕ್ ಆಸ್ಪತ್ರೆಯ ವೈದ್ಯರಾದ ಡಾ| ಗೌತಮ್, ಲ್ಯಾಬ್ ಟೆಕ್ನಿಷಿಯನ್ ಭಾರತಿ ಉಪಸ್ಥಿತರಿದ್ದರು. ಸುವರ್ಣ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪದ್ಮಯ್ಯ ಗೌಡ ಅನಿಲ ಪ್ರಸ್ತಾವಿಕದೊಂದಿಗೆ ಸ್ವಾಗತಿಸಿ, ಮಹಿಳಾ ಮಂಡಲದ ಗೌರವಾಧ್ಯಕ್ಷೆ ರೋಹಿಣಿ ಸುವರ್ಣ ಅಬೀರ ವಂದಿಸಿದರು. ಕಾರ್ಯದರ್ಶಿ ನಾಗವೇಣಿ ಬೆದ್ರಾಜೆ ಕಾರ್ಯಕ್ರಮ ನಿರೂಪಿಸಿದರು.