ಬಹುಬೇಡಿಕೆಯ ರಸ್ತೆಗಳಿಗೆ ಆದ್ಯತೆಯ ಮೇಲೆ ಅನುದಾನ ನೀಡಲಾಗುತ್ತದೆ- ಶಾಸಕ ಅಶೋಕ್ ರೈ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ನಾಲ್ಕು ಗ್ರಾ.ಪಂ. ವ್ಯಾಪ್ತಿಯ ನಾಲ್ಕು ರಸ್ತೆಗಳ ಅಭಿವೃದ್ಧಿಗೆ ತಲಾ ರೂ 2 ಕೋಟಿಯಂತೆ ಒಟ್ಟು 8 ಕೋಟಿ ಅನುದಾನ ಬಿಡುಗಡೆಯಾಗಿದ್ದು ಈ ನಾಲ್ಕು ರಸ್ತೆಗಳು ನಾದುರಸ್ಥಿಯಲ್ಲಿದ್ದ ಬಹುಬೇಡಿಕೆಯ ರಸ್ತೆಗಳಾಗಿವೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಕರ್ನಾಟಕ ನೀರಾವರಿ ನಿಗಮದ ವಾರಾಹಿ ಯೋಜನೆಯಡಿ ಈ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ತನ್ನ ಕ್ಷೇತ್ರ ವ್ಯಾಪ್ತಿಯ ಈ ನಾಲ್ಕು ರಸ್ತೆಗಳಿಗೆ ಅನುದಾನ ನೀಡುವಂತೆ ಆಗ್ರಹಿಸಿ ಶಾಸಕ ಅಶೋಕ್ ರೈ ಯವರು ಕೆಲದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ಮುಖ್ಯಮಂತ್ರಿಗಳು ವಾರಾಹಿ ಯೋಜನೆಯಡಿ ಈ ರಸ್ತೆಗಳಿಗೆ ಒಟ್ಟು 8 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದ್ದಾರೆ.
ಯಾವ ರಸ್ತೆ
*ಕೆಯ್ಯೂರು ಗ್ರಾಪಂ ವ್ಯಾಪ್ತಿಯ ಶೇಖಮಲೆ-ದೇರ್ಲ ಸಂಪರ್ಕ ರಸ್ತೆ ಅಭಿವೃದ್ದಿ
*ಕೆದಂಬಾಡಿ ಗ್ರಾಪಂ ವ್ಯಾಪ್ತಿಯ ಸಾರೆಪುಣಿ – ಕೋರಿಕ್ಕಾರು ಸಂಪರ್ಕ ರಸ್ತೆ ಅಭಿವೃದ್ದಿ
*ಕೋಡಿಂಬಾಡಿ ಗ್ರಾಮದ ಶ್ರೀ ಮಹಿಷಮರ್ಧಿನಿ ದೇವಸ್ಥಾನ ಬಳಿಯಿಂದ ಪೆರ್ನೆವರೆಗೆ ಸಂಪರ್ಕ ರಸ್ತೆ
*ಬಂಟ್ವಾಳ ತಾಲೂಕು ಅಳಿಕೆ ಗ್ರಾಪಂ ವ್ಯಾಪ್ತಿಯ ದೂಜಮೂಲೆ-ನೆಕ್ಕರೆ-ಮುಳಿಯ-ನೆಕ್ಕಿತಪುಣಿ ರಸ್ತೆ ಅಭಿವೃದ್ದಿ
ಈ ನಾಲ್ಕು ರಸ್ತೆಗಳ ಅಭಿವೃದ್ದಿಗೆ ತಲಾ ಎರಡು ಕೋಟಿಯಂತೆ ಅನುದಾನ ಬಿಡುಗಡೆಯಾಗಿದೆ.
ಗ್ರಾಮಸ್ಥರಿಂದ ಬಂದ ಬೇಡಿಕೆ ಆಧಾರದಲ್ಲಿ ನಾನು ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದ್ದೆ. ಈ ನಾಲ್ಕು ಗ್ರಾಮೀಣ ರಸ್ತೆಗಳು ಬಹುವರ್ಷದಿಂದ ಸಂಪೂರ್ಣ ಕೆಟ್ಟು ಹೋಗಿದ್ದು ಮಾತ್ರವಲ್ಲದೆ ಸಂಚಾರಕ್ಕೂ ಯೋಗ್ಯವಾಗಿರಲಿಲ್ಲ. ಇನ್ನೂ ಅನೇಕ ರಸ್ತೆಗಳು ತಮ್ಮ ಕ್ಷೇತ್ರದಲ್ಲಿ ನಾದುರಸ್ಥಿಯಲ್ಲಿದೆ. ಹಂತ ಹಂತವಾಗಿ ಎಲ್ಲಾ ರಸ್ತೆಗಳಿಗೂ ಅನುದಾನವನ್ನು ತರಲಾಗುವುದು. ರಸ್ತೆಗಳ ಅಭಿವೃದ್ದಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು
ಅಶೋಕ್ ರೈ ಶಾಸಕರು ಪುತ್ತೂರು