ಪುತ್ತೂರು: ಕರ್ನಾಟಕ ಸುವರ್ಣ ಸಂಭ್ರಮ ಆಚರಣೆಯ ಪ್ರಯುಕ್ತ ‘ಹೆಸರಾಯಿತು ಕರ್ನಾಟಕ- ಉಸಿರಾಗಲಿ ಕನ್ನಡ’ ಎಂಬ ಅಭಿಯಾನದ ಅಂಗವಾಗಿ ರಾಜ್ಯಾದ್ಯಂತ ನಡೆಯುತ್ತಿರುವ ‘ಕನ್ನಡ ಜ್ಯೋತಿರಥಯಾತ್ರೆ’ ಯು ಅ. 1ರಂದು ಪುತ್ತೂರಿಗೆ ಆಗಮಿಸಲಿದೆ.
ಪುತ್ತೂರು ತಾಲೂಕು ಆಡಳಿತ ಹಾಗೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಈ ಭವ್ಯ ರಥವನ್ನು ಕನಕಮಜುಲುವಿನಲ್ಲಿ ಬೆಳಗ್ಗೆ 10 ಗಂಟೆಗೆ ಸ್ವಾಗತಿಸಲಿದ್ದು ಬಳಿಕ 10:30 ಕ್ಕೆ ಪುತ್ತೂರು ತಾಲೂಕು ಆಡಳಿತ ಸೌಧದ ಬಳಿ ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ನಡೆಯಲಿದೆ.
ಕನ್ನಡ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳಗ್ಗೆ ತಾಲೂಕು ಆಡಳಿತ ಸೌಧದ ಬಳಿ ಆಗಮಿಸಿ ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ನೆರವೇರಿಸಿ ತಾಲೂಕು ಆಡಳಿತ ಹಾಗೂ ಸಾಹಿತ್ಯ ಪರಿಷತ್ತಿನ ಜೊತೆ ಕೈಜೋಡಿಸಿ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಸಂಭ್ರಮಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.