ಚುನಾವಣಾ ಬಾಂಡ್ ಅಕ್ರಮ: ನಳಿನ್ ಕುಮಾರ್ ಸಹಿತ ಇತರರ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ 

0

ಬೆಂಗಳೂರು: ಈಗ ರದ್ದಾಗಿರುವ ಚುನಾವಣಾ ಬಾಂಡ್‌ಗಳ ಮೂಲಕ ಹಣ ವಸೂಲಿ ಮಾಡಿದ ಆರೋಪದ ಮೇಲೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇತರ ನಾಯಕರ ವಿರುದ್ಧ ತನಿಖೆಗೆ ಹೈಕೋರ್ಟ್ ಸೋಮವಾರ ತಡೆ ನೀಡಿದೆ.

ಎಫ್ ಐಆರ್ ನಲ್ಲಿ ತನ್ನ ಹೆಸರಿರುವುದನ್ನು ಪ್ರಶ್ನಿಸಿ ಬಿಜೆಪಿ ನಾಯಕ ನಳಿನ್ ಕುಮಾರ್ ಕಟೀಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಮಧ್ಯಂತರ ಆದೇಶ ಪ್ರಕಟಿಸಿದ್ದು, ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 22ಕ್ಕೆ ನಿಗದಿಪಡಿಸಿದೆ.

ಚುನಾವಣಾ ಬಾಂಡ್ ಅಕ್ರಮಕ್ಕೆ ಸಂಬಂಧಿಸಿದ ದೂರಿನ ನಂತರ ವಿಶೇಷ ನ್ಯಾಯಾಲಯವೊಂದರ ನಿರ್ದೇಶನದಂತೆ ನಿರ್ಮಲಾ ಸೀತಾರಾಮನ್ ಮತ್ತಿತರರ ವಿರುದ್ಧ ಶನಿವಾರ ಕೇಸ್ ದಾಖಲಾಗಿತ್ತು. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 384( ಸುಲಿಗೆಗೆ ಶಿಕ್ಷೆ) 120 ಬಿ (ಕ್ರಿಮಿನಲ್ ಪಿತೂರಿ) 34 (ಸಾಮಾನ್ಯ ಉದ್ದೇಶದೊಂದಿಗೆ ಹಲವಾರು ವ್ಯಕ್ತಿಗಳು ಮಾಡಿದ ಕಾರ್ಯಗಳು) ಅಡಿಯಲ್ಲಿ ಸೀತಾರಾಮನ್, ಇಡಿ ಅಧಿಕಾರಿಗಳು ಮತ್ತು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಬಿಜೆಪಿ ಪದಾಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೆಸರು ಕೂಡಾ ಎಫ್ ಐಆರ್ ನಲ್ಲಿತ್ತು.

 ಚುನಾವಣಾ ಬಾಂಡ್‌ಗಳ ಸೋಗಿನಲ್ಲಿ ಸುಲಿಗೆ ಮಾಡಿದ್ದು, 8,000 ಕೋಟಿ ರೂ. ಗೂ ಅಧಿಕ ಲಾಭ ಪಡೆದಿದ್ದಾರೆ ಎಂದು ಆರೋಪಿಸಿ ‘ಜನಾಧಿಕಾರ ಸಂಘರ್ಷ ಪರಿಷತ್’ (ಜೆಎಸ್‌ಪಿ) ಸಹ-ಸಂಸ್ಥಾಪಕ ಆದರ್ಶ್ ಆರ್ ಅಯ್ಯರ್ ಅವರು ದೂರು ದಾಖಲಿಸಿದ್ದರು.

ಇಡಿ ಅಧಿಕಾರಿಗಳ ನೆರವು ಮತ್ತು ಬೆಂಬಲದ ಮೂಲಕ ನಿರ್ಮಲಾ ಸೀತಾರಾಮನ್, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿನ ಇತರ ಪದಾಧಿಕಾರಿಗಳ ಅನುಕೂಲಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಸುಲಿಗೆಗೆ ಅನುಕೂಲ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು.

LEAVE A REPLY

Please enter your comment!
Please enter your name here