ಪುತ್ತೂರು: ಗ್ರಾಮ ಆಡಳಿತಾಧಿಕಾರಿಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸಬೇಕು, ಮೊಬೈಲ್ ಆಪ್‌ಗಳಲ್ಲಿ ವಿವರ ಅಪ್‌ಲೋಡ್ ಮಾಡುವಂತೆ ಒತ್ತಡ ಹೇರುವುದನ್ನು ನಿಲ್ಲಿಸಬೇಕು ಮುಂತಾದ ಬೇಡಿಕೆಗಳಿಗೆ ಆಗ್ರಹಿಸಿ ಸೆ.26ರಂದು ಆರಂಭಿಸಿದ ಅನಿಧಿಷ್ಟಾವಧಿ ಮುಷ್ಕರ ಸೆ.30ರಂದು ಕಂದಾಯ ಸಚಿವರ ಮಾತುಕತೆಯಿಂದಲೂ ಫಲಪ್ರದವಾಗದ ಹಿನ್ನಲೆಯಲ್ಲಿ ಮುಷ್ಕರ ಇನ್ನಷ್ಟು ತೀವ್ರತೆಯನ್ನು ಕಂಡುಕೊಂಡಿದೆ.
ರಾಜ್ಯಸಂಘದ ಕರೆಯಂತೆ ಸೆ.26ಕ್ಕೆ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ತಾಲೂಕು ಆಡಳಿತ ಸೌಧದ ಮುಂಭಾಗ ಅನಿಧಿಷ್ಟಾವಧಿ ಮುಷ್ಕರ ಆರಂಭಗೊಂಡಿತ್ತು. ಮಂಗಳೂರಿನಲ್ಲಿ ನಡೆದ ಎರಡನೇ ದಿನದ ಮುಷ್ಕರದ ಸಂದರ್ಭ ಜಿಲ್ಲಾಧಿಕಾರಿಯವರ ಮೂಲಕ ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲೆಯಾದ್ಯಂತ ನಡೆದ ಮುಷ್ಕರದಲ್ಲಿ ಸಚಿವರಿಗೆ ಮನವಿ ಸಲ್ಲಿಕೆಯಾದ ಬಳಿಕ ಸೆ.30ಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ನೇತೃತ್ವದಲ್ಲಿ ರಾಜ್ಯ ಸಂಘದ ಅಧ್ಯಕ್ಷ ಯೋಗೀಶ್ ನಾಯ್ಕ್ ಮತ್ತು ಪದಾಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಮಾತುಕತೆಯಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಮೂರು ಬೇಡಿಕೆ ಈಡೇರಿಸುವ ಭರವಸೆ ನೀಡಲಾಗಿದೆ. ಆದರೆ ಪ್ರಮುಖ ಬೇಡಿಕೆಯೇ ಈಡೇರಿಲ್ಲ ಮತ್ತು ತಮ್ಮೆಲ್ಲಾ ಬೇಡಿಕೆಗಳು ಈಡೇರಿಕೆ ಆಗುವ ತನಕ ನಮ್ಮ ಅನಿಧಿಷ್ಟಾವಧಿ ಮುಷ್ಕರ ಮುಂದುವರಿಯಲಿದೆ ಎಂದು ರಾಜ್ಯ ಸಂಘ ಘೋಷಣೆ ಮಾಡಿದೆ.
ಮುಂದಿನ ಮುಷ್ಕರದ ಹೋರಾಟ ತೀವ್ರ: ಗ್ರಾಮ ಆಡಳಿತಾಽಕಾರಿ ಸಂಘದ ರಾಜ್ಯ ಅಧ್ಯಕ್ಷ ಯೋಗೀಶ್ ಮಾತನಾಡಿ ಸಚಿವರು ನಮ್ಮ ಬೇಡಿಕೆಗಳನ್ನು ಸಂಪೂರ್ಣವಾಗಿ ಆಲಿಸಿದ್ದಾರೆ. ಮೂರು ನಾಲ್ಕು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಆದರೆ ನಮಗೆ ಎಲ್ಲಾ ಬೇಡಿಕೆ ಈಡೇರಬೇಕು. ಸರಕಾರದಲ್ಲಿ ಹಲವಾರು ಸಣ್ಣಪುಟ್ಟ ಯೋಜನೆಗಳಿಗೂ ಅನುದಾನ ಮೀಸಲಿಡುವ ಈ ಸಂದರ್ಭದಲ್ಲಿ ಸಾರ್ವಜನಿಕ ಸೇವೆಗಳನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪಿಸುತ್ತಿರುವ ನಮ್ಮ ವೃಂದಕ್ಕೆ ಯಾವುದೇ ರೀತಿಯ ಸೌಲಭ್ಯ ಕೊಡುವಲ್ಲಿ ಮೀನಾಮೇಷ ಮಾಡುವುದು ಬೇಸರದ ಸಂಗತಿಯಾಗಿದೆ. ಹಾಗಾಗಿ ನಮ್ಮ ಬೇಡಿಕೆಗಳು ಈಡೇರುವ ತನಕ ಮುಷ್ಕರ ಮುಂದುವರಿಯಲಿದೆ. ಈಗಾಗಲೇ 30 ದಿನಗಳ ಪರಿವರ್ತಿತ ರಜೆ ಹಾಕಿಕೊಂಡಿದ್ದೇವೆ. ರಾಜ್ಯ ಸಂಘದ ಮುಂದಿನ ಎಲ್ಲಾ ನಿರ್ಣಯ ಆಗುವ ತನಕ ಯಾರು ಕೂಡಾ ಕಚೇರಿಗೆ ಹೋಗುವಂತಿಲ್ಲ. ನಿಮ್ಮ ಸಮಸ್ಯೆಗಳಿಗೆ ಜಿಲ್ಲಾಧ್ಯಕ್ಷರು ಇದ್ದಾರೆ. ಅದನ್ನು ಮೀರಿ ನನ್ನ ಬಳಿಯೂ ಹೇಳಿ. ನಿಮ್ಮಲ್ಲಿ ಇಲಾಖೆ ಇರುವ ಮೊಬೈಲ್ ಆಪ್ ಅನ್‌ಇನ್‌ಸ್ಟಾಲ್ ಮಾಡಿ. ಸರಕಾರಿ ಗ್ರೂಪ್, ತಹಸೀಲ್ದಾರ್ ಗ್ರೂಪ್, ಹೋಬಳಿ ಗ್ರೂಪ್‌ಗಳಿಂದ ಇವತ್ತೆ ಹೊರಗೆ ಬನ್ನಿ. ಮುಂದಿನ ಮುಷ್ಕರದ ಹೋರಾಟ ತೀವ್ರವಾಗಿರುತ್ತದೆ. ನಮ್ಮ ಉದ್ದೇಶ ಈಡೇರುವ ತನಕ ಯಾವುದೇ ರೀತಿಯಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ ಎಂದು ತಿಳಿಸಿದ್ದಾರೆ.
ಪರಿವರ್ತಿತ ರಜೆಯಲ್ಲಿ ಅನಿಧಿಷ್ಟಾವಧಿ ಮುಷ್ಕರ– ಇಂದಿನಿಂದ ಗ್ರಾಮ ಆಡಳಿತಾಧಿಕಾರಿಗಳ ಗೈರು
ಗ್ರಾಮ ಆಡಳಿತಾಽಕಾರಿಗಳು ಎದುರಿಸುತ್ತಿರುವ ಸಮಸ್ಯೆ ಮತ್ತು ಬೇಡಿಕೆಗಳನ್ನು ಈಡೇರಿಸುವಲ್ಲಿ ಸಚಿವರ ಮಾತುಕತೆ ವಿಫಲವಾಗಿದೆ. ನಮ್ಮ ಬೇಡಿಕೆಗೆ ಯಾವುದೇ ಸ್ಪಂದನೆ ಸಿಗಲಿಲ್ಲ. ಹಾಗಾಗಿ ಎಲ್ಲಾ ಗ್ರಾಮ ಆಡಳಿತಾಧಿಕಾರಿಗಳೂ ಕರ್ತವ್ಯಕ್ಕೆ ಗೈರಾಗಲಿದ್ದಾರೆ. ಈಗಾಗಲೇ 30 ದಿವಸದ ಪರಿವರ್ತಿತ ರಜೆ ತೆಗೆದುಕೊಂಡಿದ್ದು ಮುಂದೆ ಗೈರಾಗಲಿದ್ದೇವೆ.
ಉಮೇಶ್ ಕಾವಾಡಿ,
ಅಧ್ಯಕ್ಷರು, ಗ್ರಾಮ ಆಡಳಿತಾಧಿಕಾರಿಗಳ ಸಂಘ ಪುತ್ತೂರು