ಉಪ್ಪಿನಂಗಡಿ: ಕಾರು ಹಾಗೂ ಬೈಕ್ ಮುಖಾಮುಖಿ ಢಿಕ್ಕಿಯಾಗಿ ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ- ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಕರಾಯದ ಭಾರತ್ ಪೆಟ್ರೋಲ್ ಪಂಪ್ ಮುಂಭಾಗ ಅ.1ರಂದು ಸಂಜೆ ನಡೆದಿದೆ.
ಅನ್ಸಾರ್ ಹಾಗೂ ಇನ್ನೋರ್ವ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರು ಕಾರಿಂಜ ಕಟ್ಟೆ ನಿವಾಸಿಗಳು ಎನ್ನಲಾಗಿದೆ. ಇವರು ಬೈಕ್ನಲ್ಲಿ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ವೇಳೆ ಉಪ್ಪಿನಂಗಡಿ ಕಡೆಯಿಂದ ಕಲ್ಲೇರಿ ಕಡೆಗೆ ಸಾಗುತ್ತಿದ್ದ ಇನೋವಾ ಕಾರನ್ನು ರಸ್ತೆಯ ಮತ್ತೊಂದು ದಿಕ್ಕಿನಲ್ಲಿರುವ ಪೆಟ್ರೋಲ್ ಪಂಪ್ಗೆಂದು ಬಲ ಬದಿಗೆ ತಿರುಗಿಸಿದ್ದು, ಈ ಸಂದರ್ಭ ಎದುರಿನಿಂದ ವೇಗವಾಗಿ ಬರುತ್ತಿದ್ದ ಬೈಕ್ ಕಾರಿನ ಮುಂಭಾಗಕ್ಕೆ ಢಿಕ್ಕಿ ಹೊಡೆದಿದೆ.
ಘಟನೆಯಿಂದ ಬೈಕ್ ಸವಾರರು ರಸ್ತೆಗೆಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡಿದ್ದಾರೆ. ಇವರಲ್ಲಿ ಅನ್ಸಾರ್ ಎಂಬವರ ಕಾಲು ಮುರಿತಕ್ಕೊಳಗಾಗಿದೆ. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳನ್ನು ಉಪ್ಪಿನಂಗಡಿ ರಕ್ಷಕ್ ಆಂಬುಲೆನ್ಸ್ನ ಸಂದೀಪ್ ಅವರು ತಕ್ಷಣವೇ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ.