ಪುತ್ತೂರು:ಸ್ವಚ್ಚತೆಯೇ ಸೇವೆ ಅಭಿಯಾನದ ಅಂಗವಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಉತ್ತಮವಾದ ಕಾರ್ಯಕ್ರಮಗಳನ್ನು ಸಂಘಟಿಸಿದ ದ.ಕ ಜಿಲ್ಲೆಯ ಪ್ರತಿ ತಾಲೂಕಿನ ಒಂದು ಗ್ರಾಮ ಪಂಚಾಯತ್‌ನ ಓರ್ವ ಅಧಿಕಾರಿ ಅಥವಾ ಸಿಬ್ಬಂದಿಗೆ ದ.ಕ ಜಿಲ್ಲಾ ಪಂಚಾಯತ್, ಸ್ವಚ್ಚ ಭಾರತ್ ಮಿಷನ್ ಜಿಲ್ಲಾ ನೆರವು ಘಟಕದ ವತಿಯಿಂದ ನೀಡಲಾಗುವ ‘ಸ್ವಚ್ಚತಾ ಹೀ ಸೇವಾ ಆಂದೋಲನ’ ಪ್ರಶಂಸನ ಪತ್ರವನ್ನು ಬಲ್ನಾಡು ಗ್ರಾಮ ಪಂಚಾಯತ್‌ನ ಪಿಡಿಓ ದೇವಪ್ಪ ಪಿ.ಆರ್‌ರವರಿಗೆ ನೀಡಿ ಗೌರವಿಸಿದೆ.
ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದ ಎದುರಿನ ಗಾಂಧಿ ಪ್ರತಿಮೆಯ ಬಳಿ ಅ.2ರಂದು ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪಿಡಿಓ ದೇವಪ್ಪ ಪಿ.ಆರ್ ಪುರಸ್ಕಾರವನ್ನು ಸ್ವೀಕರಿಸಿದರು. ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ದ.ಕ ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಆನಂದ್, ಪೊಲೀಸ್ ವರೀಷ್ಠಾಧಿಕಾರಿ ಯತೀಶ್ ಯನ್., ಪುರಸ್ಕಾರ ನೀಡಿ ಗೌರವಿಸಿದರು.
ಕೇಂದ್ರ, ಕುಡಿಯುವ ನೀರು ಮತ್ತು ನೈರ್ಮಲ್ಯ, ಇಲಾಖೆ, ಜಲಶಕ್ತಿ, ಮಂತ್ರಾಲಯ ಹಾಗೂ ಕೇಂದ್ರ ನಗರ ವಸತಿ ವ್ಯವಹಾರಗಳ ಸಚಿವಾಲಯವು ಎಲ್ಲಾ ಗ್ರಾಮಗಳಲ್ಲಿ ದೃಶ್ಯ ಸ್ವಚ್ಚತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸೆ.17ರಿಂದ ಅ.2ರ ತನಕ ಸ್ವಚ್ಚತಾ ಹೀ ಸೇವಾ ಆಂದೋಲನವನ್ನು ಹಮ್ಮಿಕೊಂಡಿದ್ದು ಈ ಅವಧಿಯಲ್ಲಿ ನೈರ್ಮಲ್ಯ, ಶುಚಿತ್ವ ವಿಷಯಗಳಲ್ಲಿ ವಿವಿಧ ಉತ್ತಮ ಚಟುವಟಿಕೆಗಳನ್ನು ಆಯೋಜಿಸಿ ವ್ಯಾಪಕವಾದ ಅರಿವು ಮೂಡಿಸುವುದು ಹಾಗೂ ಸ್ವಚ್ಚತಾ ಹೀ ಸೇವಾ-2024ರ ಅಂಗವಾಗಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿ ಉತ್ತಮ ಪ್ರಗತಿ ಸಾಧಿಸಿದ ದ.ಕ ಜಿಲ್ಲೆಯ ಪ್ರತೀ ತಾಲೂಕಿನ ಒಂದು ಗ್ರಾಮ ಪಂಚಾಯತ್‌ನ ಅಧಿಕಾರಿ ಅಥವಾ ಸಿಬಂದಿಗಳಿಗೆ ಜಿಲ್ಲಾ ಮಟ್ಟದ ಪ್ರಶಂಸನ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ.
ದ.ಕ ಜಿಲ್ಲೆಯ 9 ತಾಲೂಕಿನ 9 ಗ್ರಾ.ಪಂಗಳ ಅಧಿಕಾರಿ, ಸಿಬಂದಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು ಬಂಟ್ವಾಳ ತಾಲೂಕಿನ ತುಂಬೆಯ ಪಿಡಿಓ ಶಿವುಲಾಲ್ ಚೌವ್ಹಾನ್, ಬೆಳ್ತಂಗಡಿಯ ಹೊಸಂಗಡಿ ಗ್ರಾ.ಪಂ ಪಿಡಿಓ ಗಣೇಶ್ ಶೆಟ್ಟಿ, ಕಡಬದ ಕಾಣಿಯೂರು ಗ್ರಾ.ಪಂ ರಘು ಎನ್.ಬಿ., ಮಂಗಳೂರಿನ ಪಡುಪೆರಾರ ಗ್ರಾ.ಪಂ ಪಿಡಿಓ ಉಗ್ಗಪ್ಪ ಮೂಲ್ಯ, ಮೂಡಬಿದರೆಯ ಪಡು ಮಾರ್ನಾಡು ಗ್ರಾ.ಪಂನ ಸಾಯಿಷ್ ಚೌಟ, ಮಂಗಳೂರಿನ ಪಡುಪಣಂಬೂರು ಗ್ರಾ.ಪಂನ ಪಿಡಿಓ ಸುಧೀರ್, ಸುಳ್ಯದ ಅರಂತೋಡು ಗ್ರಾ.ಪಂನ ಘನ ಮತ್ತು ದ್ರವ ತ್ಯಾಜ್ಯ ಮೇಲ್ವಿಚಾರಕಿ ಸೌಮ್ಯಲತ ಹಾಗೂ ಉಳ್ಳಾಲದ ಹರೇಕಳ ಗ್ರಾ.ಪಂನ ಪಿಡಿಓ ಮುತ್ತಪ್ಪ ಪ್ರಶಂಸನಾ ಪುರಸ್ಕಾರ ಸ್ವೀಕರಿಸಿದರು.