ಪುತ್ತೂರು: ಪರ್ಲಡ್ಕ ಶಿವಪೇಟೆ ವಿವೇಕಾನಂದ ಶಿಶುಮಂದಿರದಲ್ಲಿ ಅ.2ರಂದು ಸೇವಾದಿನದ ಅಂಗವಾಗಿ ಗಿಡನೆಡುವ ಕಾರ್ಯಕ್ರಮ ಹಾಗೂ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಮಕ್ಕಳಲ್ಲಿ ಸಂಸ್ಕೃತಿಯ ಅರಿವು ಮೂಡಿಸುವುದರ ಜೊತೆಗೆ ಈ ದಿನ ಗಿಡ ನೆಡುವುದರ ಮೂಲಕ ಪ್ರಕೃತಿಯ ಕುರಿತು ಕಾಳಜಿಯನ್ನು ಮೂಡಿಸುವ ಒಂದು ಸಣ್ಣ ಪ್ರಯತ್ನವು ಶಿಶುಮಂದಿರದಾಗಿತ್ತು. ಶಿಶುಮಂದಿರ ಎಂದರೆ ಅದೊಂದು ಜ್ಞಾನ ಮಂದಿರ. ಶಿಶುಮಂದಿರದ ಪುಟಾಣಿಗಳನ್ನು ನಮ್ಮ ಭವ್ಯ ಭಾರತ ಪ್ರಜೆಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಶಿಶುಮಂದಿರದ ಪಾತ್ರ ದೊಡ್ಡದು. ಈ ನಿಟ್ಟಿನಲ್ಲಿ ಇಂದು ಶಿಶುಮಂದಿರದಲ್ಲಿ ಏರ್ಪಡಿಸಿದ ಸೇವಾ ದಿನ ಕೂಡ ಒಂದು ಮಕ್ಕಳಿಗೆ ಪ್ರಕೃತಿಯ ಬಗ್ಗೆ ಆಸಕ್ತಿ ಬರಬೇಕು, ಸೇವಾ ಬಿಂದುಗಳಾಗಿ ಕೆಲಸ ಮಾಡಿಸುವ ನಿಟ್ಟಿನಲ್ಲಿ ಆಸಕ್ತಿ ಮೂಡಿಸುವ ಪ್ರಯತ್ನವೂ ಹೌದು ಎಂಬುದಾಗಿ ಆಡಳಿತ ಮಂಡಳಿಯ ಅಧ್ಯಕ್ಷ ರಾಜಗೋಪಾಲ ಭಟ್ಟ ಸೇಡಿಯಾಪು ಇವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ತಿಳಿಸಿದರು.
ಶಿಶುಮಂದಿರದ ಮಕ್ಕಳು ತಂದ ನೂರಕ್ಕೂ ಅಧಿಕ ಹೂವು, ಹಣ್ಣಿನ ಗಿಡಗಳನ್ನು ಶಿಶುಮಂದಿರದ ಆವರಣದಲ್ಲಿ ನೆಡಲಾಯಿತು. ಕಾರ್ಯಕ್ರಮದಲ್ಲಿ ಶಿಶುಮಂದಿರದ ಮಾತಾಜಿ ಬಳಗ, ಆಡಳಿತ ಮಂಡಳಿಯ ಸದಸ್ಯರು, ಮಾತೃಮಂಡಳಿಯ ಸದಸ್ಯರು, ಶಿಶುಮಂದಿರದ ಪಾಲಕರು ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.