ನೆಲ್ಯಾಡಿ: 65ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶಿರಾಡಿ ಶಾಖೆಯ ನೂತನ ಕಟ್ಟಡ ’ಕಲ್ಪತರು ಸಹಕಾರಿ ಸೌಧ’ ಅ.7ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಎಸ್.ಉಮೇಶ್ ಶೆಟ್ಟಿ, ಉಪಾಧ್ಯಕ್ಷ ಕಮಲಾಕ್ಷ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಕೆ.ಯಂ., ಹಾಗೂ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 7 ಗ್ರಾಮಗಳ ವ್ಯಾಪ್ತಿ ಹೊಂದಿದ್ದು 6259 ಸದಸ್ಯರಿದ್ದು 873 ಲಕ್ಷ ರೂ.ಪಾಲು ಬಂಡವಾಳ, 29.82 ಕೋಟಿ ರೂ.ಠೇವಣಿ ಹೊಂದಿದೆ. ಡಿಸಿಸಿ ಬ್ಯಾಂಕ್ನಿಂದ 61.69 ಕೋಟಿ ರೂ. ಸಾಲ ಹೊಂದಿದ್ದು, ಸದಸ್ಯರ ಹೊರಬಾಕಿ ಸಾಲ 79.99 ಕೋಟಿ ಆಗಿರುತ್ತದೆ. ಕೃಷಿ ಸಾಲಗಾರ ರೈತರಿಗೆ ಬೆಳೆ ವಿಮೆ ಯೋಜನೆಯ ಸೌಲಭ್ಯವನ್ನು ಅಳವಡಿಸಲಾಗಿದೆ. ನವೋದಯ ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್, ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘಗಳು ಹಾಗೂ ಇನ್ನಿತರ ಸಂಘ ಸಂಸ್ಥೆಗಳಿಗೆ ಸಾಲ ವಿತರಿಸುತ್ತಿದೆ. ಸಂಘವು ಸದಸ್ಯರಿಗೆ ಬಡ್ಡಿ ರಹಿತ ಕೃಷಿ ಸಾಲ, ಕೃಷಿಯೇತರ ಸಾಲ, ರಸಗೊಬ್ಬರ ಮಾರಾಟ, ಪಡಿತರ ವಿತರಣೆ ಮಾಡುತ್ತಿದೆ. ಪ್ರಸಕ್ತ ವರ್ಷ ಶೇ.100 ಸಾಲ ವಸೂಲಾತಿಯೂ ಮಾಡಿದೆ. ಸಂಘವು ಲಾಭದಲ್ಲಿ ಮುನ್ನಡೆಯುತ್ತಿದೆ.
1973ರಲ್ಲಿ ಶಿರಾಡಿ ಶಾಖೆಯು ಆರಂಭಗೊಂಡಿದ್ದು ಬಾಡಿಗೆ ಕಟ್ಟಡದಲ್ಲಿ ವ್ಯವಹಾರ ನಡೆಸುತ್ತಿತ್ತು. ಇದೀಗ ಶಿರಾಡಿ ಶಾಖೆಗೆ 1.52 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಲ್ಪತರು ಸಹಕಾರಿ ಸೌಧವು 6037 ಚದರ ಅಡಿ ವಿಸ್ತೀರ್ಣ ಹೊಂದಿದೆ. ಇದರಲ್ಲಿ ಬ್ಯಾಂಕಿನ ವ್ಯವಹಾರಕ್ಕೆ ಅಗತ್ಯವುಳ್ಳ ಕಚೇರಿ, ಭದ್ರತಾ ಕೊಠಡಿ, ನ್ಯಾಯಬೆಲೆ ಅಂಗಡಿ, ಕ್ಯಾಂಪ್ಕೋ ಖರೀದಿ ಕೇಂದ್ರ, ರಸಗೊಬ್ಬರ ಗೋದಾಮು, ವಸತಿ ಸಂಕೀರ್ಣ ಒಳಗೊಂಡಿದೆ ಎಂದು ಅವರು ತಿಳಿಸಿದರು.
ಕಲ್ಪತರು ಸಹಕಾರಿ ಸೌಧವನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷರಾದ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಶಾಖಾ ಕಚೇರಿ ಉದ್ಘಾಟಿಸಲಿದ್ದಾರೆ. ಇನ್ನೋರ್ವ ನಿರ್ದೇಶಕ ಜಯರಾಮ ರೈ ಎಸ್.ಬಿ.,ಅವರು ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ. ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ್ ಹೆಚ್.ಎನ್.ಅವರು ನ್ಯಾಯಬೆಲೆ ಅಂಗಡಿ ಉದ್ಘಾಟಿಸಲಿದ್ದಾರೆ. ಕ್ಯಾಂಪ್ಕೋ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಅವರು ಕ್ಯಾಂಪ್ಕೋ ಖರೀದಿ ಕೇಂದ್ರ ಉದ್ಘಾಟಿಸಲಿದ್ದಾರೆ. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ ಅವರು ರಸಗೊಬ್ಬರ ಗೋದಾಮು ಉದ್ಘಾಟಿಸಲಿದ್ದಾರೆ. ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ರಘು ಎಸ್.ಎಂ.ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಯಸ್.ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.