ಅ.12: ಶಾರದಾ ಭಜನಾ ಮಂದಿರದ ಶಾರದೋತ್ಸವದ ವೈಭವದ ಶೋಭಾಯಾತ್ರೆ

0

*ಕರ್ನಾಟಕ, ಕೇರಳ, ತುಳುನಾಡಿನ ವೈವಿದ್ಯಮಯ ಕಲಾ ಪ್ರದರ್ಶನ

*ನಾಡಿನ ಭಕ್ತಿ, ಸಂಸ್ಕೃತಿಯ ಅನಾವರಣ

*ಮುಖ್ಯರಸ್ತೆ 12 ಕಡೆಗಳಲ್ಲಿ ವೀಕ್ಷಣೆಗೆ ಸ್ಥಳ

  • *ಬೊಳುವಾರಿನಿಂದ ದರ್ಬೆ ತನಕ ಶೋಭಾಯಾತ್ರೆ
  • *ಡಿಜೆ, ಪಟಾಕಿ ನಿಷೇಧ
  • *ಯಾಂತ್ರೀಕೃತ ವಿಧಾನದ ಮೂಲಕ ಜಲಸ್ಥಂಭನ

ಪುತ್ತೂರು:ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಡೆಯುತ್ತಿರುವ 90ನೇ ವರ್ಷದ ಶಾರದೋತ್ಸವದ ವೈಭವದ ಶೋಭಾಯಾತ್ರೆಯು ಅ.12ರಂದು ಸಂಜೆ ನಡೆಯಲಿದೆ. ಕರ್ನಾಟಕ, ಕೇರಳ ಮತ್ತು ತುಳುನಾಡಿನ ವಿವಿಧ ಜಾನಪದ ಕಲಾ ತಂಡಗಳ ವಿಭಿನ್ನ ಕಲಾ ಪ್ರದರ್ಶನಗಳೊಂದಿಗೆ ಅದ್ದೂರಿಯಾಗಿ ನಡೆಯಲಿರುವ ಶೋಭಾಯಾತ್ರೆ ಕಳೆದ ಬಾರಿಗಿಂತಲೂ ವೈಭದಿಂದ ನಡೆಯಲಿದೆ ಎಂದು ಭಜನಾ ಮಂದಿರ ಗೌರವಾಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಹೇಳಿದರು.


ಅ.8ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಜನಾ ಮಂದಿರದಲ್ಲಿ ಅ.3ರಿಂದ ನವರಾತ್ರಿ ಉತ್ಸವವು ಪ್ರಾರಂಭಗೊಂಡಿದ್ದು ವಿವಿಧ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದು ಅಕ್ಷರ ಯಜ್ಞ ಸೇವೆಗಾಗಿ ಭಕ್ತಾದಿಗಳು ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಗಿದೆ. ಅ.9ರಂದು ಶಾರದಾ ಪ್ರತಿಷ್ಠೆ, ಅಕ್ಷರ ಯಜ್ಞ, ಸರಸ್ವತಿ ಪೂಜೆ ನೆರವೇರಿದೆ.

ಇಂದು ಚಂಡಿಕಾ ಯಾಗ:
ನವರಾತ್ರಿ ಉತ್ಸವದಲ್ಲಿ ಅ.10ರಂದು ಬೆಳಿಗ್ಗೆ ಚಂಡಿಕಾ ಯಾಗವು ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.

ನಾಳೆ ಸಭಾ ಕಾರ್ಯಕ್ರಮ:
ಅ.11ರಂದು ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಭಜನಾ ಮಂದಿರದ ಅಧ್ಯಕ್ಷ ಪಿ.ಜಿ ಜಗನ್ನಿವಾಸ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬ್ರಹ್ಮಶ್ರೀ ಕೆಮ್ಮಿಂಜೆ ಕಾರ್ತಿಕ ತಂತ್ರಿಗಳು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಭಜನಾ ಮಂದಿರದ ಗೌರವಾಧ್ಯಕ್ಷ ಕೆದಂಬಾಡಿ ಗುತ್ತು ಸೀತಾರಾಮ ರೈ, ಖ್ಯಾತ ವೈದ್ಯ ಡಾ.ಸುರೇಶ್ ಪುತ್ತೂರಾಯ ಉಪಸ್ಥಿತರಿರಲಿದ್ದಾರೆ. ಧಾರ್ಮಿಕ ಸಭೆಯಲ್ಲಿ ಭಜನಾ ಮಂದಿರದ ಹಿರಿಯ ಸದಸ್ಯರಿಗೆ ಸನ್ಮಾನ ನಡೆಯಲಿದೆ.

ಅ.12 ವೈಭವದ ಶೋಭಾಯತ್ರೆ:
ಶಾರದೋತ್ಸವದಲ್ಲಿ ಅ.12ರಂದು ಬೆಳಿಗ್ಗೆ ಅಕ್ಷರಾಭ್ಯಾಸ, ಸಂಜೆ 5 ಗಂಟೆಗೆ ಶಾರದಾ ದೇವಿಯ ವೈಭವದ ಶೋಭಾಯಾತ್ರೆ ನಡೆಯಲಿದೆ. ಬೊಳುವಾರು ವೃತ್ತದಿಂದ ದರ್ಬೆ ವೃತ್ತದ ತನಕ ನಡೆಯಲಿರುವ ಶೋಭಾಯಾತ್ರೆಗೆ ಬೊಳುವಾರು ವೃತ್ತದ ಬಳಿ ಮಾಜಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ. ಶೋಭಾಯಾತ್ರೆಯಲ್ಲಿ ಕರ್ನಾಟಕ, ಕೇರಳ ಹಾಗೂ ತುಳುನಾಡಿನ ವೈವಿದ್ಯಮಯ ಕಲಾ ತಂಡಗಳ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಸಾಗಲಿದೆ. ವಿಶೇಷವಾಗಿ ಶೋಭಾಯಾತ್ರೆಯಲ್ಲಿ ಡಿಜೆ, ಸುಡುಮದ್ದು ಪ್ರದರ್ಶನಗಳನ್ನು ನಿಷೇಧಿಸಲಾಗಿದೆ. ನಮ್ಮ ನಾಡಿನ ಸಂಪ್ರದಾಯ, ಸಂಸ್ಕೃತಿ, ಧಾರ್ಮಿಕತೆಗೆ ಅನುಗುಣವಾಗಿ ಶೋಭಾಯಾತ್ರೆ ಸುಂದರವಾಗಿ, ಶಿಸ್ತು ಹಾಗೂ ಅಚ್ಚುಕಟ್ಟಾಗಿ ನೆರವೇರಲಿದೆ. ಬೊಳುವಾರಿನಿಂದ ದರ್ಬೆ ವೃತ್ತದ ತನಕ ಮುಖ್ಯರಸ್ತೆಯಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿದೆ. ಶೋಭಾಯಾತ್ರೆಯಲ್ಲಿ ಎಲ್ಲಿಯೂ ವ್ಯತ್ಯಾಸಗಳಾಗದಂತೆ ಸ್ವಯಂ ಸೇವಕರನ್ನು ನೇಮಿಸಲಾಗಿದೆ. ಶೋಭಾಯಾತ್ರೆಯು ನಿಗದಿತ ಸಮಯದಲ್ಲಿ ಸಂಜೆ 5 ಗಂಟೆಗೆ ಬೊಳುವಾರಿನಿಂದ ಪ್ರಾರಂಭಗೊಂಡು 10.30ಕ್ಕೆ ದರ್ಬೆ ವೃತ್ತದ ಬಳಿ ತಲುಪಲಿದೆ.


12 ಕೇಂದ್ರಗಳಲ್ಲಿ ಕಲಾ ಪ್ರದರ್ಶನ:
ಶೋಭಾಯಾತ್ರೆಯಲ್ಲಿ ಬೊಳುವಾರು ವೃತ್ತದಿಂದ ದರ್ಬೆಯ ತನಕ 12 ಕೇಂದ್ರಗಳಲ್ಲಿ ನಿಂತು ಸಾರ್ವಜನಿಕರಿಗೆ ಶೋಭಾಯಾತ್ರೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಈ ಕೇಂದ್ರಗಳಲ್ಲಿ ಕಲಾ ತಂಡಗಳಿಗೆ ಪ್ರದರ್ಶನ ನೀಡಲು ಸ್ಥಳಗಳನ್ನು ನಿಗದಿಪಡಿಸಲಾಗಿದ್ದು ಬೊಳುವಾರು ವೃತ್ತ, ಪ್ರಗತಿ ಆಸ್ಪತ್ರೆ ಇನ್‌ಲ್ಯಾಂಡ್ ಮಯೂರ, ಶ್ರೀಧರ ಭಟ್ ಬ್ರದರ್ಸ್, ಅಂಚೆ ಕಚೇರಿ, ವೆಂಕಟ್ರಮಣ ದೇವಸ್ಥಾನ, ಹಳೇಯ ಸಂಜೀವ ಶೆಟ್ಟಿ ಬಳಿ, ಬಸ್ ನಿಲ್ದಾಣ, ಅರುಣಾ ಕಲಾ ಮಂದಿರ, ಕಲ್ಲಾರೆ, ಹರ್ಷ ಹಾಗೂ ದರ್ಬೆ ವೃತ್ತದ ಬಳಿ ಕಲಾ ತಂಡಗಳಿಂದ ವಿಶೇಷ ಪ್ರದರ್ಶನಗಳು ನಡೆಯಲಿದೆ.


ಕರ್ನಾಟಕ, ಕೇರಳದ ವಿವಿಧ ಕಲಾ ತಂಡಗಳ ಕಲಾ ಪ್ರದರ್ಶನ:
ಶೋಭಾಯಾತ್ರೆಯ ಸಂಚಾಲಕ ನವೀನ್ ಕುಲಾಲ್ ಮಾತನಾಡಿ, ಶಾರದಾ ಮಾತೆಯ ಶೋಭಾಯಾತ್ರೆಯಲ್ಲಿ ಭಕ್ತಿ ಹಾಗೂ ಸಂಸ್ಕೃತಿಯ ಅನಾವಣೆಗೊಳ್ಳಲಿದ್ದು ಕರ್ನಾಟಕ, ಕೇರಳ ಹಾಗೂ ತುಳುನಾಡಿನ ವೈವಿದ್ಯಮಯ ಕಲಾ ತಂಡಗಳ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಸಾಗಲಿದೆ. ವೇದಘೋಷ, ಚೆಂಡೆ ಮೇಳ, ವಾದ್ಯ ಘೋಷ, ವಾದ್ಯ ವೃಂದ, ಕುಣಿತ ಭಜನೆಗಳೊಂದಿಗೆ ಕರ್ನಾಟಕದ ಕಲಾ ಮೇಳಗಳಾದ ಮಹಿಳಾ ವೀರಗಾಸೆ, ಡೊಳ್ಳು ಕುಣಿತ, ವೀರಭದ್ರ ಕುಣಿತ, ಕಹಳೆ, ಜಗ್ಗುಲಿಗ ಮೇಳ, ಮಂಗಳೂರಿನ ನಡೆದಾಡುವ ಬೃಹತ್ ಹನುಮಂತ, ಬೃಹತ್ ಘಟೋದ್ಗಜ ಮಾತ್ರವಲ್ಲದೆ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಕೇರಳದ ತ್ರಿಶೂರಿನ ಪಂದಳಾಟಮ್, ಸಿಂಗಾರಿ ಕಾವಡಿ, ಕಥಕ್ಕಳಿ, ಮಹಿಳಾ ಸಿಂಗಾರಿ ಮೇಳಮ್, ತಿರಾಯಾಟ್ಟಮ್, ಸಿಂಗಾರಿ ಮೇಳ ಹಾಗೂ 20 ಭಜನಾ ತಂಡಗಳಿಂದ ಭಜನೆ, ತುಳುನಾಡಿ ಹುಲಿ ವೇಷಗಳ ಅಬ್ಬರ ಕುಣಿತದೊಂದಿಗೆ ವೈವಿದ್ಯಮಯವಾಗಿ ಶೋಭಾಯಾತ್ರೆಯು ಸಾಗಿಬರಲಿದೆ ಎಂದು ಮಾಹಿತಿ ನೀಡಿದರು.


ಹಣ್ಣುಕಾಯಿ, ಮಂಗಳಾರತಿಗೆ ಅವಕಾಶ:
ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ ಮಾತನಾಡಿ, ಶೋಭಾಯಾತ್ರೆಯಲ್ಲಿ ಶಾರದಾ ಮಾತೆಗೆ ಹಣ್ಣುಕಾಯಿ ಹಾಗೂ ಮಂಗಳಾರತಿ ಸೇವೆ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ರಸ್ತೆ, ಅಂಗಡಿ ಮುಂಭಾಗದಲ್ಲಿ ಸ್ವಚ್ಚ ಮಾಡುವ ಸಂದರ್ಭದಲ್ಲಿ ರಸ್ತೆಗೆ ನೀರು ಹಾಕದಂತೆ ವರ್ತಕರು ಹಾಗೂ ಭಕ್ತಾದಿಗಳಲ್ಲಿ ವಿನಂತಿಸಿದರು.


ಯಾಂತ್ರೀಕೃತ ವಿಧಾನದ ಮೂಲಕ ಜಲಸ್ಥಂಭನ:
ದರ್ಬೆ ವೃತ್ತದ ತನಕ ಸಾಗಿ ನಂತರ ಹಿಂತಿರುಗಿ ದೇವಸ್ಥಾನದ ಎದುರಿನ ಗದ್ದೆಯಲ್ಲಿರುವ ಕೆರೆಯಲ್ಲಿ ಯಾಂತ್ರೀಕೃತ ತಂತ್ರಜ್ಞಾನದ ಮೂಲಕ ವಿಶಿಷ್ಠ ರೀತಿಯಲ್ಲಿ ಶಾರದಾ ವಿಗ್ರಹದ ಜಲಸ್ಥಂಭನ ನಡೆಯಲಿದೆ ಎಂದು ಗೌರವಾಧ್ಯಕ್ಷ ಸೀತಾರಾಮ ರೈ ಹೇಳಿದರು.
ಭಜನಾ ಮಂದಿರದ ಉಪಾಧ್ಯಕ್ಷ ಯಶವಂತ್ ಆಚಾರ್ಯ, ಜತೆ ಕಾರ್ಯದರ್ಶಿ ಸುಧೀರ್ ಕಲ್ಲಾರೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here