ಮಾಡಾವುನಲ್ಲಿ ಜನ್ಮಭೂಮಿ ಪೆಟ್ರೋಲಿಯಂ ಶುಭಾರಂಭ

0

ಪುತ್ತೂರು: ಭಾರತ್ ಪೆಟ್ರೋಲಿಯಂನ ಅಧೀನದಲ್ಲಿ ನಡೆಯುವ ಡಾ.ಹರ್ಷ ಕುಮಾರ್ ರೈ ಮಾಡಾವುರವರ ಮಾಲಕತ್ವದ ಜನ್ಮಭೂಮಿ ಪೆಟ್ರೋಲಿಯಂ ಕೆಯ್ಯೂರು ಗ್ರಾಮದ ಮಾಡಾವುನಲ್ಲಿ ಅ.11 ರಂದು ಶುಭಾರಂಭಗೊಂಡಿತು.

ಮಾಲಕರ ಜನ್ಮದಾತರಾದ ಕೆ.ಎಂ.ಮೋಹನ್ ರೈ ಮತ್ತು ಜಯಂತಿ ಎಂ.ರೈಯವರು ದೀಪ ಬೆಳಗಿಸುವ ಮೂಲಕ ಸಂಸ್ಥೆಯನ್ನು ಶುಭಾರಂಭಗೊಳಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ಮಾಸ್ ಅಧ್ಯಕ್ಷರಾದ ಸವಣೂರು ಕೆ.ಸೀತಾರಾಮ ರೈಯವರು, ಗ್ರಾಮೀಣ ಪ್ರದೇಶದಲ್ಲಿ ಇಂತಹ ಸಂಸ್ಥೆಯನ್ನು ಮಾಡುವ ಮೂಲಕ ಗ್ರಾಮೀಣ ಪ್ರದೇಶದ ಒಂದಷ್ಟು ಜನರಿಗೆ ಉದ್ಯೋಗ ಕೊಡಿಸುವ ಕೆಲಸದೊಂದಿಗೆ ಗ್ರಾಮದ ಅಭಿವೃದ್ಧಿ ಹರ್ಷ ಕುಮಾರ್ ರೈಯವರು ನಾಂದಿ ಹಾಡಿದ್ದಾರೆ. ಗಾಂಧಿಜಿಯವರು ಹೇಳಿದಂತೆ ಗ್ರಾಮದ ಅಭಿವೃದ್ಧಿಯೇ ದೇಶದ ಅಭಿವೃದ್ಧಿಯಾಗಿದೆ ಎಂಬಂತೆ ಗ್ರಾಮೀಣ ಪ್ರದೇಶದಲ್ಲಿ ಇಂತಹ ಸಂಸ್ಥೆಗಳು ನಿರ್ಮಾಣವಾಗಬೇಕು ಎಂದರು. ಮಾಡಾವಿಗೂ ನನಗೂ ಒಂದು ಅವಿನಾಭಾವ ಸಂಬಂಧವಿದೆ. ಆದ್ದರಿಂದಲೇ ನಾವೆಲ್ಲರೂ ಸೇರಿಕೊಂಡು ಈ ಊರನ್ನು ಅಭಿವೃದ್ಧಿಗೊಳಿಸುವ ಮೂಲಕ ಒಂದಷ್ಟು ಜನರಿಗೆ ಉದ್ಯೋಗ ಕೊಡಿಸುವ ಕೆಲಸವನ್ನು ಮಾಡುವ, ಹರ್ಷ ಕುಮಾರ್ ರೈಯವರ ಜನ್ಮಭೂಮಿ ಪೆಟ್ರೋಲಿಯಂ ಯಶಸ್ಸು ಕಾಣಲಿ ಎಂದು ಹೇಳಿ ಶುಭ ಹಾರೈಸಿದರು.

ಪುತ್ತೂರು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ, ಮಾಡಾವಿನಂತಹ ಗ್ರಾಮೀಣ ಪ್ರದೇಶಕ್ಕೆ ಪೆಟ್ರೋಲ್ ಬಂಕ್‌ನ ಅವಶ್ಯಕತೆ ತುಂಬಾ ಇತ್ತು ಅದನ್ನು ಹರ್ಷ ಕುಮಾರ್ ರೈಯವರು ನೀಗಿಸಿದ್ದಾರೆ. ಗ್ರಾಮೀಣ ಪ್ರದೇಶದ ಸುಸಜ್ಜಿತ ಬಂಕ್ ಇದಾಗಿದ್ದು ವಾಹನ ಚಾಲಕರು ತಮ್ಮ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ತುಂಬಿಸುವ ಮೂಲಕ ಸಂಸ್ಥೆಯ ಯಶಸ್ವಿಗೆ ಸಹಕರಿಸಬೇಕಾಗಿದೆ. ಜನ್ಮಭೂಮಿ ಪೆಟ್ರೋಲಿಯಂ ಯಶಸ್ಸು ಅನ್ನು ಕಾಣಲಿ ಎಂದು ಹೇಳಿ ಶುಭ ಹಾರೈಸಿದರು.


ಮಂಗಳೂರು ಕೆ.ಎಂ.ಎಫ್ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜರವರು ಮಾತನಾಡಿ, ಹರ್ಷ ಕುಮಾರ್ ರೈಯವರು ತಮ್ಮ ಹುಟ್ಟೂರಿನಲ್ಲಿ ಜನ್ಮಭೂಮಿ ಎಂಬ ಪೆಟ್ರೋಲಿಯಂ ಸಂಸ್ಥೆಯನ್ನು ಸ್ಥಾಪನೆ ಮಾಡುವ ಮೂಲಕ ಈ ಭಾಗದ ವಾಹನ ಮಾಲಕ, ಚಾಲಕರಿಗೆ ಬಹಳಷ್ಟು ಪ್ರಯೋಜನವಾಗಲಿದೆ. ಸಂಸ್ಥೆಯು ಅಭಿವೃದ್ದಿಯನ್ನು ಕಾಣಲಿ, ದೇವರ ಆಶೀರ್ವಾದವಿರಲಿ ಎಂದು ಹೇಳಿ ಶುಭ ಹಾರೈಸಿದರು. ಮಂಗಳೂರು ಭಾರತ್ ಪೆಟ್ರೋಲಿಯಂ ಪ್ರಾದೇಶಿಕ ವ್ಯವಸ್ಥಾಪಕ ಅಮೋಲ್ ಬೊಸ್ಲೆ ಮಾತನಾಡಿ, ಒಂದು ಒಳ್ಳೆಯ ಸುಂದರ ಪರಿಸರದಲ್ಲಿ ಹರ್ಷ ಕುಮಾರ್ ರೈಯವರು ಪೆಟ್ರೋಲಿಯಂ ಯುನಿಟ್ ಆರಂಭಿಸಿದ್ದಾರೆ. ಪಾರ್ಕಿಂಗ್‌ನಿಂದ ಹಿಡಿದು ಉಚಿತ ಏರ್, ಶೌಚಾಲಯ ವ್ಯವಸ್ಥೆ ಎಲ್ಲವನ್ನು ಒಳಗೊಂಡಿದೆ. ಸಂಸ್ಥೆಯು ಯಶಸ್ಸು ಕಾಣಲಿ ಎಂದು ಹೇಳಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಕಟ್ಟಡ ಕಂಟ್ರಾಕ್ಟ್‌ದಾರರಾದ ವರುಣ್ ರೈ, ಶ್ರೀದೇವಿ ಇಲೆಕ್ಟ್ರೀಕಲ್ಸ್‌ನ ಸುಬ್ರಾಯ ಗೌಡ ಮಾಡಾವು ಹಾಗೂ ಕಟ್ಟಡ ನಿರ್ಮಾಣ ಉಸ್ತುವಾರಿ ವಹಿಸಿಕೊಂಡಿದ್ದ ಅಶ್ರಫ್ ಸನ್‌ಶೈನ್ ಕುಂಬ್ರರವರುಗಳನ್ನು ಶಾಲು,ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಇದಲ್ಲದೆ ಮಂಗಳೂರು ಭಾರತ್ ಪೆಟ್ರೋಲಿಯಂ ಪ್ರಾದೇಶಿಕ ವ್ಯವಸ್ಥಾಪಕ ಅಮೋಲ್ ಬೊಸ್ಲೆ, ಸೇಲ್ಸ್ ಆಫೀಸರ್ ಶಿತೇಶ್ ಚೌದರಿ, ಇಂಜಿನಿಯರ್ ಹೆಡ್ ನೀರಜ್‌ರವರುಗಳನ್ನು ಶಾಲು,ಹೂಗುಚ್ಛ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಲವು ಗಣ್ಯರನ್ನು ಈ ಸಂದರ್ಭದಲ್ಲಿ ಹರ್ಷ ಕುಮಾರ್ ರೈಯವರು ಶಾಲು ಹಾಕಿ ಗೌರವಿಸಿದರು.


ಈ ಸಂದರ್ಭದಲ್ಲಿ ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ನವದೆಹಲಿ ಅಖಿಲ ಭಾರತ ಪೆಟ್ರೋಲಿಯಂ ವಿತರಕರ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ವಿಶ್ವಾಸ್ ಶೆಣೈ, ಭಾರತ್ ಪೆಟ್ರೋಲಿಯಂನ ಸೇಲ್ಸ್ ಆಫೀಸರ್ ಶಿತೇಶ್ ಚೌದರಿ, ಇಂಜಿನಿಯರ್ ಹೆಡ್ ನೀರಜ್, ಮಾಡಾವು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಹುಸೈನಾರ್ ಹಾಜಿ ಸಂತೋಷ್‌ನಗರ, ಕೆಯ್ಯೂರು ವರ್ತಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಕೆಂಗುಡೇಲು, ಕೆಯ್ಯೂರು ಗ್ರಾಪಂ ಸದಸ್ಯ ತಾರಾನಾಥ ಕಂಪ ಸೇರಿದಂತೆ ನೂರಾರು ಮಂದಿ ಗಣ್ಯರು ಆಗಮಿಸಿ ಶುಭ ಹಾರೈಸಿದರು. ಜನ್ಮಭೂಮಿ ಪೆಟ್ರೋಲಿಯಂ ಮಾಲಕ ಡಾ.ಹರ್ಷ ಕುಮಾರ್ ರೈ ಮಾಡಾವು ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿ, ಸಹಕಾರ ಕೋರಿದರು. ಜನ್ಮಭೂಮಿ ಪೆಟ್ರೋಲಿಯಂನ ಆಡಳಿತದಾರ ಮನೋಹರ ಆಳ್ವ ಸಹಕರಿಸಿದ್ದರು.


ಸಾವಿರಾರು ಮಂದಿಯಿಂದ ಶುಭ ಹಾರೈಕೆ
ಜನ್ಮಭೂಮಿ ಪೆಟ್ರೋಲಿಯಂನ ಶುಭಾರಂಭದ ಸಂದರ್ಭದಲ್ಲಿ ರಾಜಕೀಯ ಗಣ್ಯರಿಂದ ಹಿಡಿದು ಸಾವಿರಾರು ಮಂದಿ ಆಗಮಿಸಿ ಶುಭ ಹಾರೈಸಿದ್ದಾರೆ. ವಿಶೇಷವಾಗಿ ವಿವಿಧ ರಾಜಕೀಯ ಗಣ್ಯರು, ಮುಖಂಡರು, ರೋಟರಿ, ಜೇಸಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು,ಪದಾಧಿಕಾರಿಗಳು, ಗ್ರಾಮ ಪಂಚಾಯತ್‌ನ ಸದಸ್ಯರುಗಳು, ಸಿಬ್ಬಂದಿ ವರ್ಗದವರು, ವರ್ತಕರ ಸಂಘದ ಪದಾಧಿಕಾರಿಗಳು, ಉದ್ಯಮಿಗಳು, ಹರ್ಷ ಕುಮಾರ್ ರೈಯವರ ಬಂಧುಗಳು, ಹಿತೈಷಿಗಳು, ಸೇರಿದಂತೆ ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರದ ವಿವಿಧ ಗಣ್ಯರುಗಳು, ಅಧಿಕಾರಿ ವರ್ಗದವರು ಸೇರಿದಂತೆ ಸಾವಿರಾರು ಮಂದಿ ಆಗಮಿಸಿ ಶುಭ ಹಾರೈಸುವ ಮೂಲಕ ಜನ್ಮಭೂಮಿ ಪೆಟ್ರೋಲಿಯಂ ಸಂಸ್ಥೆಗೆ ಪ್ರೋತ್ಸಾಹದ ಬೆಂಬಲ ಸೂಚಿಸಿದರು.



ಜನ್ಮದಿನ, ಜನ್ಮಸ್ಥಳ, ಜನ್ಮದಾತರಿಂದ ಜನ್ಮಭೂಮಿ ಪೆಟ್ರೋಲಿಯಂ ಉದ್ಘಾಟನೆ
ಜನ್ಮಭೂಮಿ ಪೆಟ್ರೋಲಿಯಂ ಬಂಕ್ ಉದ್ಘಾಟನೆಯು ಬಹಳ ವಿಶೇಷತೆಯನ್ನು ಒಳಗೊಂಡಿತ್ತು. ಮುಖ್ಯವಾಗಿ ಪೆಟ್ರೋಲಿಯಂ ಬಂಕ್ ಮಾಲಕರಾದ ಹರ್ಷ ಕುಮಾರ್ ರೈಯವರ ಜನ್ಮದಿನ ಅ.11 ರಂದು ಅವರ ಜನ್ಮಸ್ಥಳ ಮಾಡಾವುನಲ್ಲಿ ಅವರ ಜನ್ಮದಾತರಾದ ಕೆ.ಎಂ.ಮೋಹನ್ ರೈ ಮತ್ತು ಜಯಂತಿ ಎಂ.ರೈಯವರಿಂದ ಜನ್ಮಭೂಮಿ ಪೆಟ್ರೋಲಿಯಂನ ಉದ್ಘಾಟನೆ ನಡೆದಿದೆ. ಒಟ್ಟಿನಲ್ಲಿ ಹರ್ಷ ಕುಮಾರ್ ರೈಯವರ ಜನ್ಮದಿನದಂದು ಜನ್ಮಸ್ಥಳದಲ್ಲಿ ಜನ್ಮದಾತರಿಂದ ಜನ್ಮಭೂಮಿ ಪೆಟ್ರೋಲಿಯಂ ಶುಭಾರಂಭಗೊಂಡಿದೆ.



ಸುಸಜ್ಜಿತ ಪೆಟ್ರೋಲ್ ಬಂಕ್
ಜನ್ಮಭೂಮಿ ಪೆಟ್ರೋಲಿಯಂ ಬಂಕ್ ಪುತ್ತೂರು-ಕುಂಬ್ರ-ಬೆಳ್ಳಾರೆ ರಾಜ್ಯ ಹೆದ್ದಾರಿಯಲ್ಲಿ ಮಾಡಾವುನಲ್ಲಿದೆ. ಸಂಪೂರ್ಣ ಗ್ರಾಮೀಣ ಪ್ರದೇಶದಲ್ಲಿರುವ ಸುಸಜ್ಜಿತ ಬಂಕ್ ಇದಾಗಿದೆ. ಸೋಲಾರ್ ಪವರ್ ಸಿಸ್ಟಮ್‌ನೊಂದಿಗೆ ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ವಾಹನಗಳ ಟಯರ್‌ಗಳಿಗೆ ಉಚಿತ ಗಾಳಿ ವ್ಯವಸ್ಥೆ, ಶುದ್ದೀಕರಿಸಿದ ಕುಡಿಯುವ ನೀರು ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಬಂಕ್‌ನಲ್ಲಿದೆ. ಹರ್ಷ ಕುಮಾರ್ ರೈ ಮಾಲಕತ್ವದ ಜನ್ಮ ಫ್ಯೂಯೆಲ್ಸ್ ಇದೆ ರಸ್ತೆಯಲ್ಲಿ ಕುಂಬ್ರ ಜಂಕ್ಷನ್‌ನಲ್ಲಿದೆ.

‘ ನಮ್ಮ ಮೇಲೆ ಪ್ರೀತಿ ಇಟ್ಟು ನಮ್ಮ ಜನ್ಮಭೂಮಿ ಪೆಟ್ರೋಲಿಯಂನ ಉದ್ಘಾಟನಾ ಸಮಾರಂಭಕ್ಕೆ ವಿವಿಧ ಕ್ಷೇತ್ರದ ಸಾವಿರಾರು ಮಂದಿ ಗಣ್ಯರು ಆಗಮಿಸಿ ಶುಭ ಹಾರೈಸಿದ್ದೀರಿ. ನಿಮ್ಮೆಲ್ಲರ ಪ್ರೀತಿಗೆ ಅಭಾರಿಯಾಗಿದ್ದೇನೆ. ಮುಂದೆಯೂ ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹವನ್ನು ಬಯಸುತ್ತೇನೆ. ಶುಭ ಹಾರೈಸಿದ ಸಮಸ್ತ ಬಂಧುಗಳಿಗೆ, ಅಧಿಕಾರಿ ವರ್ಗದವರಿಗೆ, ಹಿತೈಷಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.’
-ಡಾ.ಹರ್ಷ ಕುಮಾರ್ ರೈ ಮಾಡಾವು, ಮಾಲಕರು ಜನ್ಮಭೂಮಿ ಪೆಟ್ರೋಲಿಯಂ ಮಾಡಾವು

LEAVE A REPLY

Please enter your comment!
Please enter your name here