ಸಾಧಕರಿಗೆ ಸನ್ಮಾನ, ಮಹಿಷಮರ್ಧಿನಿ ಕಥಾ ಕೀರ್ತನೆ,ವೈಭವದ ಶೋಭಾಯಾತ್ರೆ
ಸವಣೂರು: ಶ್ರೀ ಶಾರದಾಂಬಾ ಸೇವಾ ಸಂಘ ಸವಣೂರು ಇದರ ವತಿಯಿಂದ ಸವಣೂರು ಶ್ರೀ ವಿನಾಯಕ ಸಭಾಭವನದಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವವು ಬಂಬಿಲ ಕೇಶವ ಕಲ್ಲೂರಾಯ ಅವರ ಪೌರೋಹಿತ್ವದಲ್ಲಿ ಅ.12ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಅ.12ರಂದು ಬೆಳಿಗ್ಗೆ ಉದಯ ಕುಮಾರ್ ಸರ್ವೆ ಅವರು ಧ್ವಜಾರೋಹಣ ನೆರವೇರಿಸುವರು. ಬಳಿಕ ಶ್ರೀ ದೇವಿಯ ಪ್ರತಿಷ್ಟೆ, ಗಣ ಹೋಮ, ಮುಗೇರು ಶ್ರೀ ಮಹಾವಿಷ್ಣು ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಧಾರ್ಮಿಕ ಸಭೆ
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಹನುಮಗಿರಿ ಮೇಳದ ಯಕ್ಷಗಾನ ಕಲಾವಿದ ಪ್ರಸಾದ್ ಸವಣೂರು ಮಾತನಾಡಿ, ಬಸದಿಯ ಪದ್ಮಾವತಿ,ಮುಗೇರು ಶ್ರೀ ವಿಷ್ಣುಮೂರ್ತಿ, ಸವಣೂರು ವಿಷ್ಣುಮೂರ್ತಿ ದೇವರ ಸಾನಿಧ್ಯವಿರುವ ಸವಣೂರು ಸಮಗ್ರ ಭಾರತದ ಕಲ್ಪನೆಗೆ ಪೂರಕವಾಗಿದೆ. ಇದು ಸವಣೂರಿನ ವಿಶೇಷ ಎಂದು ಹೇಳಿದರು.
ಶಾರದಾ ಮಾತೆಯು ಸರ್ವರ ತಮೋಗುಣವನ್ನು ಹೊರತೆಗೆದು ಸಾತ್ವಿಕ ಗುಣವನ್ನು ನೀಡುವ ದೇವಿ. ಸವಣೂರಿನಲ್ಲಿ ಕಳೆದ 20 ವರ್ಷಗಳಿಂದ ಸರ್ವರನ್ನೂ ಸೇರಿಸಿಕೊಂಡು ಯಶಸ್ವಿಯಾಗಿ ಶಾರದೋತ್ಸವ ನಡೆಸುತ್ತಿರುವ ಶಾರದಾಂಬಾ ಸೇವಾ ಸಂಘಕ್ಕೆ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹಬ್ಬಗಳು ನಮ್ಮನ್ನು ಒಂದುಗೂಡಿಸುತ್ತದೆ. ವೇದಗಳ ಅಧ್ಯಯನದಿಂದ ದೇವರು ಏನೆಂಬುದು ತಿಳಿಯಲು ಸಾಧ್ಯ. ಕಲಿಯುಗದಲ್ಲಿ ಭಗವಂತನ ನಾಮಸ್ಮರಣೆಗೆ ಮಹತ್ವವಿದ್ದು ಆತನ ನಾಮ ಸ್ಮರಣೆಯೇ ನಮಗೆ ಶಕ್ತಿ. ಸನಾತನ ಸಂಸ್ಕೃತಿಯ ಹಿಂದೂ ಧರ್ಮದಲ್ಲಿ ಸಾಮೂಹಿಕ ಆರಾಧನೆಗೆ ಹೆಚ್ಚು ಮಹತ್ವವಿದೆ. ಹಿಂದೂ ಧರ್ಮಾಚರಣೆಯ ಕುರಿತು ಎಲ್ಲರಿಗೂ ಪ್ರಾಥಮಿಕ ಶಿಕ್ಷಣದ ಅಗತ್ಯತೆ ಇದೆ. ಧರ್ಮದ ಬಗ್ಗೆ ಅರಿವಿರಬೇಕಾಗಿದೆ. ಸಂಸ್ಕಾರ ಬೋಧಿಸುವ ಶಿಕ್ಷಣ ಸಂಸ್ಥೆಗಳಿಗೆ ನಮ್ಮ ಮಕ್ಕಳನ್ನು ಕಳುಹಿಸಬೇಕು ಎಂದರು.
ಪುತ್ತೂರು ತಾ.ಪಂ.ಮಾಜಿ ಉಪಾಧ್ಯಕ್ಷ ದಿನೇಶ್ ಮೆದು ಮಾತನಾಡಿ, ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಧಕರನ್ನು ಗೌರವಿಸುವ ಮೂಲಕ ಅವರು ಮಾಡಿರುವ ಸಾಧನೆ ಇತರರಿಗೂ ಪ್ರೇರಣೆ ನೀಡುವ ಕಾರ್ಯವಾಗಿದೆ ಎಂದರು.
ಸನ್ಮಾನ
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕಿ ಚಂದ್ರಕಲಾ ಎಸ್ ಇಂದ್ರ ಸೋಂಪಾಡಿ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪಿ, ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ ಸವಣೂರು ಗ್ರಂಥಾಲಯದ ಗ್ರಂಥಪಾಲಕಿ ಶಾರದಾ ಮಾಲೆತ್ತಾರು ಅವರನ್ನು ಶಾರದಾಂಬಾ ಸೇವಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಮುಖ್ಯ ಶಿಕ್ಷಕಿ ಚಂದ್ರಕಲಾ ಎಸ್ ಇಂದ್ರ ಸೋಂಪಾಡಿ ಅವರು ಕೃತಜ್ಞತೆ ಸಲ್ಲಿಸಿ , ಶಾರದಾಂಬಾ ಸೇವಾ ಸಂಘವು ಇನ್ನಷ್ಟು ಎತ್ತರಕ್ಕೇರಲಿ ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಶಾರದಾಂಬಾ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಮೋಹನ್ ಕೆರೆಕ್ಕೋಡಿ ಉಪಸ್ಥಿತರಿದ್ದರು. ಸಪ್ತಮಿ ಇಡ್ಯಾಡಿ ಪ್ರಾರ್ಥಿಸಿದರು.ಶಾರದಾಂಬಾ ಸೇವಾ ಸಂಘದ ಅಧ್ಯಕ್ಷ ವಸಂತ ರೈ ಸೊರಕೆ ಸ್ವಾಗತಿಸಿದರು, ಕಾರ್ಯದರ್ಶಿ ವೆಂಕಪ್ಪ ಗೌಡ ಅಡೀಲು ವಂದಿಸಿದರು.ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು. ಚರಣ್ ಇಡ್ಯಾಡಿ , ಜತ್ತಪ್ಪ ಗೌಡ ಆರೇಲ್ತಡಿ, ಅಂಗಾರ ಬೇರಿಕೆ ಅವರು ಅತಿಥಿಗಳನ್ನು ಗೌರವಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾಸಾರಥಿ ತೋನ್ಸೆ ಪುಷ್ಕಳ್ ಕುಮಾರ್ ಇವರಿಂದ ಮಹಿಷಮರ್ಧಿನಿ ಕಥಾ ಕೀರ್ತನೆ ನಡೆಯಿತು.
ಶೋಭಾಯಾತ್ರೆ
ಸಂಜೆ ಮಹಾಪೂಜೆ, ಪ್ರಸಾದ ವಿತರಣೆ, ಶ್ರೀ ಶಾರದಾ ಮೂರ್ತಿಯ ವಿಜೃಂಭಣೆಯ ಶೋಭಾಯಾತ್ರೆಯು ಮುಖ್ಯ ರಸ್ತೆಯಲ್ಲಿ ಸಾಗಿ ಸರ್ವೆ ಗೌರಿ ಹೊಳೆಯಲ್ಲಿ ಶ್ರೀ ಶಾರದಾ ಮೂರ್ತಿಯ ಜಲಸ್ಥಂಬನ ನಡೆಯಿತು. ಶೋಭಾಯಾತ್ರೆಯಲ್ಲಿ ಮರಾಠಿ ಯುವ ವೇದಿಕೆ ಪುತ್ತೂರು ಹಾಗೂ ವಿದ್ಯಾನಿಧಿ ಸರಸ್ವತಿ ಭಜನಾ ಮಂಡಳಿ ಕೈಕಾರ ತಂಡದಿಂದ ಕುಣಿತ ಭಜನೆ ನಡೆಯಿತು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಕೆ ಸೀತಾರಾಮ ರೈ ಸವಣೂರು, ಅಧ್ಯಕ್ಷ ವಸಂತ ರೈ ಸೊರಕೆ, ಕಾರ್ಯದರ್ಶಿ ವೆಂಕಪ್ಪ ಗೌಡ ಅಡೀಲು, ಉಪಾಧ್ಯಕ್ಷರಾದ ಕುಂಞ ನಲಿಕೆ, ಕೋಶಾಧಿಕಾರಿ ಎಮ್. ಟಿ. ಗಿರಿಧರ ಗೌಡ ಮೆದು,ಸ್ಥಾಪಕಾಧ್ಯಕ್ಷ ಮೋಹನ್ ರೈ ಕೆರೆಕ್ಕೋಡಿ, ಮಾಜಿ ಅಧ್ಯಕ್ಷ ಸಂಪತ್ ಕುಮಾರ್ ಇಂದ್ರ, ಸಮಿತಿಯ ಗೌರವ ಸಲಹೆಗಾರರು, ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.