ಪುತ್ತೂರು: ಕಳೆದ ಎರಡು ತಿಂಗಳಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಬಾಕಿ ಇದ್ದು ಈ ವಿಚಾರ ಶಾಸಕರ ಗಮನಕ್ಕೆ ಬರುತ್ತಿದ್ದಂತೆಯೇ ತಕ್ಷಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಕರೆ ಮಾಡಿದ ಶಾಸಕರು ಅ. 17 ರಂದು ವೇತನ ನೀಡಲೇಬೇಕು ಎಂದು ತಿಳಿಸಿದ್ದು ಅದರಂತೆ ಬಾಕಿ ಇರುವ ವೇತನ ಇಂದು ಖಾತೆಗೆ ಜಮೆಯಾಗಲಿದೆ.
ಈ ಕುರಿತು ಇಲಾಖೆಯ ಆಯುಕ್ತರ ಜೊತೆ ಮಾತನಾಡಿದ ಶಾಸಕರು ಯಾಕೆ ಎರಡು ತಿಂಗಳಿಂದ ವೇತನವನ್ನು ಬಾಕಿ ಇರಿಸಲಾಗಿದೆ. ವೇತನ ಬಾಕಿ ಇರುವ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯೋರ್ವರು ತನಗೆ ಮಾಹಿತಿ ನೀಡಿದ್ದರು. ಯಾವುದೇ ಕಾರಣಕ್ಕೂ ವೇತನ ವಿಳಂಬವಾಗಬಾರದು. ವೇತನವನ್ನು ಎಲ್ಲಾ ಅಂಗನವಾಡಿ ಕಾರ್ಯಕರ್ತೆಯವರ ಖಾತೆಗೆ ಜಮೆಯಾಗಬೇಕು ಎಂದು ಸೂಚನೆ ನೀಡಿದ್ದು ಇದಕ್ಕೆ ಆಯುಕ್ತರು ಒಪ್ಪಿಗೆಯನ್ನು ಸೂಚಿಸಿದ್ದಾರೆ.
ಮೊಟ್ಟೆ, ಗ್ಯಾಸ್ ಹಣ ಕೇಂದ್ರ ಸರಕಾರ ಕೊಟ್ಟಿಲ್ಲ
ಅಂಗನವಾಡಿಗೆ ಪೂರೈಕೆಯಾಗುತ್ತಿರುವ ಮೊಟ್ಟೆ ಮತ್ತು ಅಡುಗೆ ಅನಿಲವನ್ನು ಕೇಂದ್ರ ಸರಕಾರ ಪೂರೈಕೆ ಮಾಡಬೇಕಾಗಿದೆ. ಕಳೆದ ಕೆಲವು ತಿಂಗಳಿಂದ ಮೊಟ್ಟೆ ಮತ್ತು ಅಡುಗೆ ಅನಿಲದ ಹಣವನ್ನು ಕೇಂದ್ರ ಸರಕಾರ ನೀಡದ ಕಾರಣ ಕೆಲವು ಅಂಗನವಾಡಿಗಳಿಗೆ ಮೊಟ್ಟೆ ಮತ್ತು ಗ್ಯಾಸ್ ಕೊರತೆ ಎದುರಾಗಿದೆ. ಇದನ್ನು ಮನಗಂಡ ರಾಜ್ಯ ಸರಕಾರ ಹಣವನ್ನು ಬಿಡುಗಡೆ ಮಾಡಿದ್ದು ಎರಡು ದಿನದೊಳಗೆ ಮೊಟ್ಟೆ ಮತ್ತು ಅನಿಲದ ಹಣವೂ ಖಾತೆಗೆ ಜಮೆಯಾಗಲಿದೆ ಎಂದು ಶಾಸಕರು ತಿಳಿಸಿದರು.
ಅಂಗನವಾಡಿ ಬಂದ್ ಮಾಡಿದರೆ ಕಾನೂನು ಕ್ರಮ
ಮೊಟ್ಟೆ ಮತ್ತು ಗ್ಯಾಸ್ ಹಣ ಬಂದಿಲ್ಲ ಎಂದು ಕೆಲವು ಅಂಗನವಾಡಿಗಳನ್ನು ಬಂದ್ ಮಾಡಲಾಗಿದೆ ಎಂಬ ವಿಚಾರವನ್ನು ಕೆಲವರು ಶಾಸಕರ ಗಮನಕ್ಕೆ ತಂದಿದ್ದು ಈ ಕಾರಣಕ್ಕಾಗಿ ಅಂಗನವಾಡಿ ಕೇಂದ್ರವನ್ನು ಬಂದ್ ಮಾಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ. ಈ ವಿಚಾರದಲ್ಲಿ ಮಾತನಾಡಿದ ಶಾಸಕರು ಮೊಟ್ಟೆ ಮತ್ತು ಗ್ಯಾಸ್ ಹಣ ಕೇಂದ್ರ ಸರಕಾರ ನೀಡಬೇಕಿತ್ತು ಯಾವ ಕಾರಣಕ್ಕೆ ನೀಡಿಲ್ಲ ಎಂಬುದು ಗೊತ್ತಾಗಲಿಲ್ಲ. ಮೊಟ್ಟೆ ಬಂದಿಲ್ಲ ಎಂದು ಅಂಗನವಾಡಿಯನ್ನು ಬಂದ್ ಮಾಡುವುದು ಅಕ್ಷಮ್ಯ ಎಂದು ಶಾಸಕರು ಈ ಸಂದರ್ಭದಲ್ಲಿ ತಿಳಿಸಿದರು.