ಎಪಿಎಂಸಿ ಪ್ರಾಂಗಣದ ವಸತಿಗೃಹದಲ್ಲಿ ಹೊರಗುತ್ತಿಗೆ ಸಿಬ್ಬಂದಿ ಅನಧಿಕೃತ ವಾಸ ಆರೋಪ-ಅಧಿಕಾರಿಗಳಿಂದ ವಸತಿ ಗೃಹಕ್ಕೆ ಬೀಗ-ರಾತ್ರಿತನಕವೂ ಹೊರಗಡೆ ಕುಳಿತ ವಿಶೇಷಚೇತನ ಸಂತ್ರಸ್ತೆ

0

ಪುತ್ತೂರು:ಎಪಿಎಂಸಿ ಮುಖ್ಯಪ್ರಾಂಗಣದೊಳಗಿರುವ ಸರಕಾರಿ ವಸತಿ ಗೃಹದಲ್ಲಿ ಎಪಿಎಂಸಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಮಹಿಳೆ ಅನಧಿಕೃತವಾಗಿ ವಾಸವಾಗಿದ್ದಾರೆನ್ನುವ ಆರೋಪದಲ್ಲಿ ಎಪಿಎಂಸಿ ಕಾರ್ಯದರ್ಶಿ ಎಂ.ಸಿ.ಪಡಾಗನೂರ ಅವರ ನೇತೃತ್ವದ ಅಧಿಕಾರಿಗಳ ತಂಡ ಅ.16ರಂದು ವಸತಿಗೃಹಕ್ಕೆ ಬೀಗ ಜಡಿದು ಮಹಜರು ಪ್ರಕ್ರಿಯೆ ನಡೆಸಿದರು.ಮನೆಯಲ್ಲಿದ್ದ ಮಹಿಳೆ ರಾತ್ರಿ ತನಕವೂ ಮನೆಯ ಹೊರಗಡೆ ಏಕಾಂಗಿಯಾಗಿ ಕುಳಿತುಕೊಂಡಿದ್ದರು.


ಎಪಿಎಂಸಿ ಪ್ರಾಂಗಣದೊಳಗೆ ಸರಕಾರಿ ವಸತಿಗೃಹಗಳಿದ್ದು, ಈ ಪೈಕಿ 003 ಸಂಖ್ಯೆಯ ಮನೆಯಲ್ಲಿ ಎಪಿಎಂಸಿ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ವಿಶೇಷ ಚೇತನೆ ಜಾನಕಿಯವರು ವಾಸವಾಗಿದ್ದರು.ಈ ಮನೆಯಿಂದ ವಾಸ ತೆರವು ಮಾಡುವಂತೆ ಮೂರು ದಿನಗಳ ಹಿಂದೆ ಎಪಿಎಂಸಿ ಕಾರ್ಯದರ್ಶಿಯವರು ನೋಟೀಸ್ ಜಾರಿಗೊಳಿಸಿ, ಮನೆಯ ಬಾಗಿಲಿಗೆ ನೋಟೀಸ್ ಅಂಟಿಸಿದ್ದರು.ಮನೆಯಲ್ಲಿ ಅನಧಿಕೃತವಾಗಿರುವ ವಾಸ್ತವ್ಯವನ್ನು ಅ.16ರ ಪೂರ್ವಾಹ್ನ 11.30ರ ಒಳಗೆ ತೆರವು ಮಾಡಬೇಕೆಂದು ನೋಟೀಸ್‌ನಲ್ಲಿ ಸೂಚಿಸಲಾಗಿತ್ತು.
ಎಪಿಎಂಸಿ ಆಡಳಿತಾಧಿಕಾರಿ ಯಾಗಿರುವ ತಹಸೀಲ್ದಾರ್ ಅವರ ಸೂಚನೆಯ ಮೇರೆಗೆ ತೆರವು ಕಾರ್ಯಾಚರಣೆ ನಡೆಸಿದ ಎಪಿಎಂಸಿ ಕಾರ್ಯದರ್ಶಿ ಎಂ.ಸಿ.ಪಡಾಗನೂರರವರು ಅ.16ರಂದು ತಮ್ಮ ಸಿಬ್ಬಂದಿಗಳೊಂದಿಗೆ ಪೊಲೀಸ್ ಭದ್ರತೆಯಲ್ಲಿ ಪ್ರಾಂಗಣದಲ್ಲಿರುವ ಮನೆಯ ಮುಂದೆ ಆಗಮಿಸಿದ್ದರು.ಆದರೆ ಜಾನಕಿ ಅವರು ಈ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತರಿರಲಿಲ್ಲ.ಅವರು ಎಪಿಎಂಸಿ ಕಚೇರಿಯಲ್ಲಿ ಕರ್ತವ್ಯ ನಿರತರಾಗಿದ್ದರು.ಸಿಬ್ಬಂದಿಗಳ ಮೂಲಕ ಜಾನಕಿ ಅವರನ್ನು ಸ್ಥಳಕ್ಕೆ ಕರೆಸಲು ಕಾರ್ಯದರ್ಶಿಯವರು ಯತ್ನಿಸಿದರು.ಆದರೆ ಜಾನಕಿ ಅವರು ಬರಲು ನಿರಾಕರಿಸಿದರು. ಅಂತಿಮವಾಗಿ ಸ್ವತ: ಕಾರ್ಯದರ್ಶಿಯವರೇ ಪೊಲೀಸ್ ಅಧಿಕಾರಿಗಳು ಮತ್ತು ಮಹಿಳಾ ಪೊಲೀಸರ ಜತೆಯಲ್ಲಿ ಎಪಿಎಂಸಿ ಕಚೇರಿಗೆ ತೆರಳಿ ಜಾನಕಿಯವರಿಗೆ ಇಲಾಖೆಯ ನಿಯಮಗಳ ಬಗ್ಗೆ ಮನವರಿಕೆ ಮಾಡಿದ್ದರು.


ಸರಕಾರಿ ಅಧಿಕಾರಿಗಳಿಗೆ ಮಾತ್ರ ವಸತಿಗೃಹ ನೀಡಲವಕಾಶ:
ನೀವು ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದೀರಿ.ನಿಯಮ ಪ್ರಕಾರ ಇಲ್ಲಿನ ವಸತಿಗೃಹಗಳು ಸರಕಾರಿ ಅಧಿಕಾರಿಗಳಿಗೆ ಮಾತ್ರ ನೀಡಲು ಸಾಧ್ಯವಿದೆ.ನೀವು ಕಾನೂನು ಬಾಹಿರವಾಗಿ ವಾಸ್ತವ್ಯವಿದ್ದೀರಿ.ಹೀಗಾಗಿ ನಿಮ್ಮನ್ನು ತೆರವು ಮಾಡದೆ ಬೇರೆ ದಾರಿಯೇ ಇಲ್ಲ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಜಾನಕಿ ಅವರು, ನನ್ನ ಸಹೋದರ ಮೋಹನ ಎಂಬವರು ಪೊಲೀಸ್ ಆಗಿ ಕೆಲಸ ಮಾಡುತ್ತಿದ್ದಾರೆ.ಅವರು ಈ ಮನೆಯನ್ನು ಕೇಳಿದ್ದಾರೆ.ಅವರಿಗೆ ಮನೆ ಮಂಜೂರಾದ ಮೇಲೆ ನಾನು ಅವರ ಜತೆ ಇದೇ ಮನೆಯಲ್ಲಿ ಇರುತ್ತೇನೆ.ಅವರಿಗೆ ಮನೆ ಮಂಜೂರಾಗುವವರೆಗೆ ನಾನು ಮನೆ ತೆರವು ಮಾಡುವುದಿಲ್ಲ.ನನಗೆ ಗಂಡ,ಮಕ್ಕಳು ಯಾರೂ ಇಲ್ಲ.ನಾನು ವಿಕಲ ಚೇತನೆಯಾಗಿದ್ದೇನೆ.ನನಗೆ ನೀವೆಲ್ಲ ವೃಥಾ ತೊಂದರೆ ಕೊಡುತ್ತಿದ್ದೀರಿ ಎಂದು ಹೇಳಿ ಕಣ್ಣೀರು ಹಾಕಿದರು. ಅದಕ್ಕೆ ಉತ್ತರಿಸಿದ ಕಾರ್ಯದರ್ಶಿಯವರು,ನಿಮ್ಮ ಸಹೋದರ ಮನೆ ಕೇಳಿ ಅರ್ಜಿ ಸಲ್ಲಿಸಿದರೆ ಅದರ ಮಂಜೂರಾತಿ ಪ್ರಕ್ರಿಯೆ ಬೇರೆಯೇ ನಡೆಯುತ್ತದೆ.ಅದಕ್ಕೂ ಇದಕ್ಕೂ ಸಂಬಂಧವಿಲ್ಲ.ನೀವೀಗ ಕಾನೂನು ಬಾಹಿರವಾಗಿ ವಾಸ್ತವ್ಯ ಇರುವ ಕಾರಣ ನೀವು ಮನೆಯಿಂದ ವಾಸ್ತವ್ಯ ತೆರವು ಮಾಡಲೇ ಬೇಕಾಗಿದೆ ಎಂದು ತಿಳಿಸಿದರು.ಜಾನಕಿಯವರು ಬಾರದ ಹಿನ್ನೆಲೆಯಲ್ಲಿ ವಸತಿಗೃಹದ ಬಾಗಿಲು ಹಾಗೂ ಗೇಟಿಗೆ ಅಧಿಕಾರಿಗಳು ಬೀಗ ಜಡಿದರು.


ರಾತ್ರಿ ಮನೆಯ ಹೊರಗಡೆ ಕುಳಿತ ಒಂಟಿ ಮಹಿಳೆ:
ವಸತಿಗೃಹಕ್ಕೆ ಅಧಿಕಾರಿಗಳು ಬೀಗ ಜಡಿದಿರುವುದರಿಂದ ತೊಂದರಗೆ ಒಳಗಾದ ಜಾನಕಿಯವರು ಬೀಗ ಹಾಕಿದ ಮನೆಯ ಹೊರಗಡೆ, ಸುರಿಯುವ ಮಳೆಗೆ ನೆನೆಯುತ್ತಾ ಕುಳಿತಿದ್ದರು.ಗಂಡ ಮೃತಪಟ್ಟಿದ್ದಾರೆ.ಮಕ್ಕಳೂ ಇಲ್ಲ.ಈಗ ನಾನು ಒಂಟಿಯಾಗಿದ್ದೇನೆ.ಅಲ್ಲದೆ ವಿಕಲಚೇತನಳೂ ಆಗಿದ್ದೇನೆ.ನನಗಾಗಿ ಬೇಯಿಸಿಟ್ಟ ಅನ್ನ, ಪದಾರ್ಥಗಳು ಮನೆಯೊಳಗಡೆಯೇ ಇದೆ.ಅಧಿಕಾರಿಗಳು ಬೀಗ ಹಾಕಿರುವುದರಿಂದ ನನಗೆ ಆಹಾರವೂ ಇಲ್ಲದಾಗಿದೆ.ನನಗೆ ಗಂಡ ಇರುತ್ತಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಕಣ್ಣೀರು ಹಾಕುತ್ತಾ, ಬೀಗ ಹಾಕಿದ್ದ ಮನೆಯ ಹೊರಗಡೆ ಕುಳಿತಿರುವ ಜಾನಕಿ ಅವರು ತನ್ನ ಅಳಲನ್ನು ತಿಳಿಸಿದ್ದಾರೆ.


ಸರಕಾರಿ ಅಧಿಕಾರಿಗಳಿಗೆ ಮೀಸಲು ವಸತಿಗೃಹ ಕಾನೂನು ಬಾಹಿರ ಹಂಚಿಕೆ-ಕಾರ್ಯದರ್ಶಿ:
ಹಿಂದಿನ ಕಾರ್ಯದರ್ಶಿಯವರು ಈ ಮನೆಯನ್ನು ಅಡುಗೆ ಸಹಾಯಕಿ ಪ್ರೇಮ ಕುಮಾರಿ ಎಂಬವರ ಹೆಸರಿಗೆ ನೀಡಿದ್ದರು.ಆ ಮನೆಯಲ್ಲಿ ಜಾನಕಿ ವಾಸ್ತವ್ಯವಿದ್ದಾರೆ.ಸರಕಾರಿ ಅಧಿಕಾರಿಗಳಿಗೆ ಮೀಸಲಾದ ವಸತಿಗೃಹವನ್ನು ಕಾನೂನು ಬಾಹಿರವಾಗಿ ಹಂಚಿಕೆ ಮಾಡಿದ ಕಾರಣ ಕಾನೂನು ಕ್ರಮಕ್ಕೆ ಮುಂದಾದ ಬಳಿಕ ಪ್ರೇಮ ಕುಮಾರಿ ಅವರು,ತಾನು ಈ ಮನೆಯಲ್ಲಿ ಇರುವುದಿಲ್ಲ ಎಂದು ಲಿಖಿತವಾಗಿ ತಿಳಿಸಿದ್ದಾರೆ.ಇದಾದ ಬಳಿಕ ಜಾನಕಿ ಅವರಿಗೆ ಮನೆ ತೆರವು ಮಾಡುವಂತೆ 4 ತಿಂಗಳ ಹಿಂದೆ ಸೂಚಿಸಲಾಗಿತ್ತು.ನನಗೆ 15 ದಿನಗಳ ಕಾಲಾವಕಾಶ ನೀಡುವಂತೆ ಜಾನಕಿ ಅವರು ಜೂನ್ 15ರಂದು ಲಿಖಿತ ಮನವಿ ಸಲ್ಲಿಸಿದ್ದರು.ಮಾನವೀಯ ನೆಲೆಯಲ್ಲಿ ನಾವು ಒಪ್ಪಿದ್ದೆವು.ಆದರೆ 4 ತಿಂಗಳು ಕಳೆದರೂ ಅವರು ಇನ್ನೂ ಮನೆ ಖಾಲಿ ಮಾಡಿಲ್ಲ.ಈ ವಿಚಾರವನ್ನು ಆಡಳಿತಾಧಿಕಾರಿಯಾಗಿರುವ ತಹಸೀಲ್ದಾರ್ ಅವರ ಗಮನಕ್ಕೆ ತಂದಾಗ, ನಿಯಮ ಪ್ರಕಾರ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದರು.ಅದರಂತೆ ಈಗ ನಾವು ಮನೆಗೆ ಬೀಗ ಜಡಿದಿದ್ದೇವೆ.ಮನೆ ಖಾಲಿ ಮಾಡುವಂತೆ ತಿಳಿಸಿದ್ದರೂ ಅವರು ಬರಲಿಲ್ಲ. ನಾವು ಬೀಗ ಹಾಕಿ ಸೀಲ್ ಹಾಕಿದ್ದೇವೆ ಎಂದು ಎಪಿಎಂಸಿ ಕಾರ್ಯದರ್ಶಿ ಎಂ.ಸಿ.ಪಡಾಗನೂರ ತಿಳಿಸಿದ್ದಾರೆ.


ವಸತಿಗೃಹ ನೀಡಲು ಜಂಟಿ ನಿರ್ದೇಶಕರು ಆದೇಶ ಮಾಡಿದ್ದರೂ ಕಾರ್ಯದರ್ಶಿ ಸತಾಯಿಸುತ್ತಿದ್ದಾರೆ-ಜಾನಕಿ:
ಎಪಿಎಂಸಿಯಲ್ಲಿ ಕಳೆದ 28 ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕಚೇರಿ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ.ಈ ಹಿಂದೆ ಎಪಿಎಂಸಿ ಕಚೇರಿ ಹಿಂಬದಿಯಲ್ಲಿರುವ ಕಟ್ಟಡದಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದೆ.ಮೂರು ವರ್ಷಗಳ ಹಿಂದೆ ಗಂಡ ಮೃತಪಟ್ಟಿದ್ದರು.ಇದಾದ ಬಳಿಕ ತಾನು ಒಂಟಿಯಾಗಿ ಆ ಮನೆಯಲ್ಲಿ ವಾಸ್ತವ್ಯವಿರುವಾಗ ರಾತ್ರಿ ವೇಳೆ ಕೆಲವರು ಅಲ್ಲಿ ತೊಂದರೆ ನೀಡುತ್ತಿದ್ದರು.ಹೀಗಾಗಿ ನಾನು ಎಪಿಎಂಸಿಯ ಅಂದಿನ ಕಾರ್ಯದರ್ಶಿ ಓಂಕಾರ್‌ರವರಲ್ಲಿ ತನ್ನ ನೋವನ್ನು ತಿಳಿಸಿದ್ದೆ.ಪ್ರಾಂಗಣದಲ್ಲಿ ಖಾಲಿಯಿರುವ ವಸತಿಗೃಹದಲ್ಲಿ ಇಲಾಖೆಯ ನಿಯಮದಂತೆ ಕೊಂಬೆಟ್ಟು ವಿದ್ಯಾರ್ಥಿ ನಿಲಯದ ಅಡುಗೆ ಸಹಾಯಕಿ ಪ್ರೇಮ ಕುಮಾರಿಯವರಿಗೆ ನೀಡಿದ್ದ ವಸತಿ ಗೃಹದಲ್ಲಿ ಅವರ ಜೊತೆಗೆ ಇರಲು ಕೇಂದ್ರ ಕಚೇರಿಯ ಅನುಮತಿಯೊಂದಿಗೆ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಅವಕಾಶ ನೀಡಿದ್ದು ಕಳೆದ ಒಂದೂವರೆ ವರ್ಷದಿಂದ ವಸತಿ ಗೃಹದಲ್ಲಿ ವಾಸವಾಗಿದ್ದೇನೆ.ಇದಕ್ಕೆ ಮಾಸಿಕ ರೂ.2,300 ಬಾಡಿಗೆ ಹಾಗೂ ವಿದ್ಯುತ್ ಬಿಲ್‌ನ್ನು ನಾನೇ ಪಾವತಿಸುತ್ತಿದ್ದೇನೆ.ಅಡುಗೆ ಸಹಾಯಕಿ ಪ್ರೇಮಾರವರನ್ನು ಬೆದರಿಸಿ ವಸತಿಗೃಹದಿಂದ ಬಿಡುಗಡೆಗೊಳಿಸಿದ್ದರು.ಇದಾದ ಬಳಿಕ ನಿಯಮಾವಳಿಯಂತೆ ವಸತಿಗೃಹ ನೀಡುವಂತೆ, ಪುತ್ತೂರಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯದಲ್ಲಿರುವ ನನ್ನ ಅಣ್ಣ ಕಾರ್ಯದರ್ಶಿಯವರಿಗೆ ಅರ್ಜಿ ಸಲ್ಲಿಸಿದ್ದರು.ಅಲ್ಲದೆ ಖಾಲಿಯಿರುವ ವಸತಿ ಗೃಹದಲ್ಲಿ ತನ್ನ ಸಹೋದರನಿಗೆ ಅವಕಾಶ ನೀಡಿದರೆ ನಾನು ಅವರ ಜೊತೆಗೆ ವಾಸಿಸುವುದಾಗಿ ಕೇಂದ್ರ ಕಚೇರಿಗೆ ಮನವಿ ಮಾಡಿದ್ದೇನೆ.ವಸತಿ ಗೃಹ ನೀಡುವಂತೆ ಕೇಂದ್ರ ಕಚೇರಿಯಿಂದ ಜಂಟಿ ನಿರ್ದೇಶಕರು ಆದೇಶ ಮಾಡಿದ್ದರೂ ಕಾರ್ಯದರ್ಶಿಯವರು ನೀಡದೇ ಸತಾಯಿಸುತ್ತಿದ್ದಾರೆ.ಈಗ ವಸತಿಗೃಹಕ್ಕೆ ಬೀಗ ಜಡಿದಿದ್ದಾರೆ.ನಾನು ವಿಶೇಷ ಚೇತನೆ,ಈಗ ಒಬ್ಬಂಟಿಯಾಗಿರುವ ನನಗೆ ತೊಂದರೆ ಕೊಟ್ಟಿದ್ದಾರೆ. ನನಗೆ ಬೇರೆ ದಾರಿಯಿಲ್ಲ.ಮಧ್ಯಾಹ್ನ ಹಾಗೂ ರಾತ್ರಿಗೆ ಸಿದ್ದ ಮಾಡಿದ್ದ ಅನ್ನ, ಪದಾರ್ಥಗಳು ಮನೆಯೊಳಗಿದೆ.ಬೀಗ ಹಾಕಿರುವುದರಿಂದ ಏನು ಮಾಡಬೇಕೆಂಬುದು ತೋಚದಂತಾಗಿದೆ ಎಂದು ಬೀಗ ಜಡಿದ ವಸತಿ ಗೃಹದ ಮುಂಭಾಗದಲ್ಲಿ ರಾತ್ರಿ ಮಳೆಯಲ್ಲಿ ನೆನೆಯುತ್ತಾ ಕುಳಿತಿರುವ ಸಂತ್ರಸ್ತೆ ಜಾನಕಿ ಅವರು ತಮ್ಮ ನೋವನ್ನು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here