ಕಡಬ: ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕರಿಗೆ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ಭಾಗಕ್ಕೆ ತೆರಳಲು ಸಮರ್ಪಕವಾಗಿ ಬಸ್ ಲಭ್ಯವಾಗದೇ ಪ್ರಯಾಣಿಕರು ಹಲವು ತಾಸು ಕಾದು ಸುಸ್ತಾಗಿರುವ ಘಟನೆ ಅ.14ರಂದು ನಡೆದಿದೆ.
ರಜೆ ಹಿನ್ನಲೆಯಲ್ಲಿ ಭಾರೀ ಸಂಖ್ಯೆಯ ಪ್ರಯಾಣಿಕರು ರೈಲು ಮೂಲಕ ಬೆಳಗ್ಗೆ 8 ಗಂಟೆ ಸುಮಾರಿಗೆ ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಆಗಮಿಸಿದ್ದರು. ಪ್ರಯಾಣಿಕರು ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಕ್ಕೆ ತೆರಳಲು ರಸ್ತೆ ಬದಿ ಸುಮಾರು 10 ಗಂಟೆವರೆಗೂ ಬಸ್‌ಗಾಗಿ ಕಾಯುತ್ತಿದ್ದ ಸ್ಥಿತಿ ಕಂಡುಬಂದಿತ್ತು. ಈ ವೇಳೆ ಮಾತನಾಡಿದ ಪ್ರಯಾಣಿಕರೋರ್ವರು, ನಾನು ಹುಬ್ಬಳ್ಳಿಯಿಂದ ರೈಲಿನಲ್ಲಿ ಬಂದಿದ್ದು 8 ಗಂಟೆಗೆ ಇಲ್ಲಿ ತಲುಪಿದ್ದೇನೆ. ಧರ್ಮಸ್ಥಳಕ್ಕೆ ತೆರಳುವ ಬಸ್‌ಗಾಗಿ ಕಾಯುತ್ತಿದ್ದು ಇನ್ನೂ ಬಸ್ ಬಂದಿಲ್ಲ, ಕೆಲ ಬಸ್‌ಗಳಲ್ಲಿ ಪ್ರಯಾಣಿಕರು ಭರ್ತಿಯಾಗಿದ್ದರು. ಸಮರ್ಪಕ ಬಸ್ ಇಲ್ಲದೆ, ನಾವು ಸಮಸ್ಯೆ ಅನುಭವಿಸುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಸ್ತೆ ಬದಿ ಕುಳಿತ ಪ್ರಯಾಣಿಕರು: ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಸಮೀಪದ ನೆಟ್ಟಣದ ರೈಲು ನಿಲ್ದಾಣದಿಂದ ಸಾವಿರಾರು ಪ್ರಯಾಣಿಕರು ಪ್ರಯಾಣ ಬೆಳೆಸುತ್ತಾರೆ. ರೈಲು ನಿಲ್ದಾಣಕ್ಕೆ ಬಸ್ ತೆರಳುತ್ತಿದ್ದರೂ ಕೆಲ ಸಮಯ ಹೆದ್ದಾರಿವರೆಗೆ ಪ್ರಯಾಣಿಕರು ಆಗಮಿಸಬೇಕು. ಆದರೆ ಹೆದ್ದಾರಿ ಬದಿಯಲ್ಲಿ ಸರಿಯಾದ ಬಸ್ ತಂಗುದಾಣ ಇಲ್ಲದೇ ಪ್ರಯಾಣಿಕರು ರಸ್ತೆ ಬದಿ ನಿಲ್ಲುವ ಸ್ಥಿತಿ ಇಲ್ಲಿದೆ. ಕೆಲವರು ರಸ್ತೆ ಬದಿಯಲ್ಲೇ ಕುಳಿತಿದ್ದ ದೃಶ್ಯ ಕಂಡುಬಂದಿತ್ತು. ನೆಟ್ಟಣ ಪೇಟೆಯ ಎರಡೂ ಬದಿಯಲ್ಲೂ ಸುಸಜ್ಜಿತ ಬಸ್ ತಂಗುದಾಣ ನಿರ್ಮಿಸಬೇಕೆಂಬ ಬೇಡಿಕೆ ವ್ಯಕ್ತವಾಗಿದೆ.