ಪುತ್ತೂರು: ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆ ದರ್ಬೆ, ರೋಟರಿ ಪುತ್ತೂರು ಎಲೈಟ್, ರೋಟರಿ ಪುತ್ತೂರು ಸ್ವರ್ಣ, ಎಜೆ ಹಾಸ್ಪಿಟಲ್ ಮಂಗಳೂರು ಹಾಗೂ ಸಂತ ಫಿಲೋಮಿನಾ ಪ್ರೌಢಶಾಲಾ ಅಮೃತ ಮಹೋತ್ಸವ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಅಮೃತ ಮಹೋತ್ಸವದ ಪ್ರಯುಕ್ತ ಆರೋಗ್ಯ ಶಿಬಿರ ಹಾಗೂ ಜಾಗೃತಿ ಮಾಹಿತಿ ಕಾರ್ಯಾಗಾರ ಅ.18ರಂದು ನಡೆಯಿತು.
ಉದ್ಘಾಟನೆ:
ಅಮೃತ ಮಹೋತ್ಸವದ ಪ್ರಯುಕ್ತ ನಡೆಸಲಾಗುವ 2ನೇ ಕಾರ್ಯಕ್ರಮ ಆರೋಗ್ಯ ಶಿಬಿರದ ಉದ್ಘಾಟನೆ ಬೆಳಿಗ್ಗೆ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಲಾರೆನ್ಸ್ ಮಸ್ಕರೇನಸ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ 75 ವರ್ಷದಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದ್ದಾರೆ. ದೇಶ ವಿದೇಶದಲ್ಲಿ ಇಲ್ಲಿನ ಹಿರಿಯ ವಿದ್ಯಾರ್ಥಿಗಳು ಉನ್ನತ ಉದ್ಯೋಗ ಹೊಂದಿದ್ದಾರೆ. ಅಮೃತ ಮಹೋತ್ಸವದ 2ನೇ ಕಾರ್ಯಕ್ರಮ ಇದಾಗಿದೆ ಎಂದರು. ಪುತ್ತೂರಿನಲ್ಲಿ ವಿದ್ಯೆಯನ್ನು ದಾನ ಮಾಡಲು ಆಂಟನಿ ಪತ್ರಾವೋರವರು ವಿದ್ಯಾಸಂಸ್ಥೆ ಸ್ಥಾಪಿಸಿದ್ದಾರೆ ಅಲ್ಲದೆ. ಪತ್ರಾವೋ ಆಸ್ಪತ್ರೆಯನ್ನು ಕೂಡ ಸ್ಥಾಪಿಸಿದ್ದಾರೆ. ಇವತ್ತು ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಎಲ್ಲರಿಗೂ ಮುಖ್ಯ ಎ.ಜೆ.ಹಾಸ್ಪಿಟಲ್ ನವರು ಆರೋಗ್ಯ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ರೋಟರಿಯವರು ಕೂಡ ಸಮಾಜ ಕಟ್ಟು ಕೆಲಸ ಮಾಡುತ್ತಿದ್ದಾರೆ. ನಿಮ್ಮ ಎಲ್ಲಾ ಕಾರ್ಯಗಳು ಯಶಸ್ವಿಯಾಗಲಿ ಎಂದು ಹಾರೈಸಿದರು.
ಪುತ್ತೂರು ರೋಟರಿ ಎಲೈಟ್ ಅಧ್ಯಕ್ಷ ಅಶ್ವಿನಿ ಎಲ್. ಶೆಟ್ಟಿ ಮಾತನಾಡಿ ಎ.ಜೆ.ಹಾಸ್ಪಿಟಲ್ ಮಂಗಳೂರಿನಲ್ಲಿ ಉತ್ತಮ ಹೆಲ್ತ್ ಕೇರ್ ಸಂಸ್ಥೆಯಾಗಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಅರೋಗ್ಯದ ಶಿಬಿರದ ಪ್ರಯೋಜನ ಪಡೆಯಿರಿ. ವೈದ್ಯರ ಸಲಹೆ ಸೂಚನೆ ತೆಗೆದುಕೊಳ್ಳಿ. ಅಲ್ಲದೆ ಮಾದಕ ವ್ಯಸನದ ಬಗ್ಗೆ ನಡೆಯುವ ಮಾಹಿತಿಯನ್ನು ತೆಗೆದುಕೊಳ್ಳಿ ಎಂದು ಹೇಳಿದರು.
ಪುತ್ತೂರು ರೋಟರಿ ಸ್ವರ್ಣ ಅಧ್ಯಕ್ಷ ಸುರೇಶ್ ಪಿ. ಮಾತನಾಡಿ ರೋಗ ಭಾಧಿಸುವ ಮುಂಚೆಯೇ ಆರೋಗ್ಯದ ಬಗ್ಗೆ ತಪಾಸಣೆ ನಡೆಸುವುದು ಸೂಕ್ತ. ಇದಕ್ಕೆ ಇಂತಹ ಶಿಬಿರಗಳು ಪ್ರಯೋಜನಕಾರಿಯಾಗಿದೆ. ಶಿಬಿರದಿಂದ ಸಮುದಾಯಕ್ಕೆ ರೋಗ ಹರಡುವುದನ್ನು ತಪ್ಪಿಸಬಹುದು ಎಂದರು. ವಿದ್ಯಾರ್ಥಿಗಳು ಮಾದಕ ವ್ಯಸನದ ಬಗ್ಗೆ ಜಾಗೃತರಾಗಿರಬೇಕು. ಮಾದಕ ವ್ಯಸನ ಕಂಡುಬಂದಲ್ಲಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ. ಅದರ ನಿರ್ಮೂಲನೆಯಲ್ಲಿ ಪಾಲ್ಗೊಳ್ಳಿ ಎಂದು ಹೇಳಿದರು.
ಸಂತ ಫಿಲೋಮಿನಾ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗನ್ನೀವಾಸ ರಾವ್ ಮಾತನಾಡಿ 75 ವರ್ಷದಲ್ಲಿ ಈ ಸಂಸ್ಥೆ ಸಮಾಜಕ್ಕೆ ಕೊಟ್ಟ ಕೊಡುಗೆ ಅನನ್ಯವಾಗಿದೆ. ಒಳ್ಳೆಯ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡಿದೆ. ಜೀವನದಲ್ಲಿ ಶಿಸ್ತು, ಸಮಯಪಾಲನೆ ಕಲಿಯಲು ಇಂತಹ ಸಂಸ್ಥೆಗಳು ಅಗತ್ಯವಾಗಿದೆ ಎಂದರು. ಆರೋಗ್ಯ ಎಲ್ಲರಿಗೂ ಮುಖ್ಯ. ವಿದ್ಯಾರ್ಥಿಗಳು ಹಾಗೂ ಪೋಷಕರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇದರ ಸದುಪಯೋಗವನ್ನು ಎಲ್ಲರೂ ಪಡೆಯಿರಿ ಎಂದರು.