ನೆಲ್ಯಾಡಿ: ಸಂಸದರಾಗಿ ಚುನಾಯಿತರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರ ರಾಜೀನಾಮೆಯಿಂದ ತೆರವಾಗಿರುವ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದ ವಿಧಾನ ಪರಿಷತ್ನ ಸ್ಥಾನಕ್ಕೆ ಅ.21ರಂದು ಉಪಚುನಾವಣೆ ನಡೆಯುತ್ತಿದ್ದು ಆಯಾ ಗ್ರಾ.ಪಂ.ನ ಮತಗಟ್ಟೆಗಳಲ್ಲಿ ಗ್ರಾ.ಪಂ.ಸದಸ್ಯರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ.
ಕೌಕ್ರಾಡಿ ಗ್ರಾಮ ಪಂಚಾಯಿತಿಯ ಮತಗಟ್ಟೆಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ಒಟ್ಟಾಗಿ ಬಂದು ಸರದಿ ಸಾಲಿನಲ್ಲಿ ನಿಂತು ಒಬ್ಬೊಬ್ಬರಾಗಿ ಮತ ಚಲಾಯಿಸಿದರು. ಅಚ್ಚರಿಯ ಬೆಳವಣಿಗೆಯಲ್ಲಿ ಕೌಕ್ರಾಡಿ ಗ್ರಾಮ ಪಂಚಾಯಿತಿಯ ಇಚ್ಲಂಪಾಡಿ 2ನೇ ವಾರ್ಡ್ನಿಂದ ಬಿಜೆಪಿ ಬೆಂಬಲಿತ ಸದಸ್ಯೆಯಾಗಿ ಚುನಾಯಿತರಾಗಿರುವ ಸಂಧ್ಯಾ ಅವರು ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಸವಿತಾ ಸರ್ವೋತ್ತಮ ಗೌಡ, ಕೆ.ಎಂ.ಹನೀಫ್, ಡೈಸಿ ವರ್ಗೀಸ್, ದಿನೇಶ್, ರೋಯಿ ಯಾನೆ ಕುರಿಯಾಕೋಸ್ ಟಿ.ಎಂ., ಕೆ.ಎಂ.ಹನೀಫ್, ರತ್ನ ಬಿಜೇರು, ಶೈಲಾ, ಜೊತೆ ಬಂದು ತಮ್ಮ ಹಕ್ಕು ಚಲಾಯಿಸಿದರು.
ತಾ.ಪಂ.ಮಾಜಿ ಅಧ್ಯಕ್ಷೆ ಕೆ.ಟಿ.ವಲ್ಸಮ್ಮ, ಕೌಕ್ರಾಡಿ ಗ್ರಾ.ಪಂ.ಮಾಜಿ ಸದಸ್ಯ ವರ್ಗೀಸ್ ಅಬ್ರಹಾಂ, ಕಾಂಗ್ರೆಸ್ ಮುಖಂಡ ಇಂಜಿನಿಯರ್ ಚಾಕೋ ಅವರು ಈ ವೇಳೆ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಬಿಜೆಪಿ ಬೆಂಬಲಿತ 10 ಸದಸ್ಯರು ಗುಂಪಾಗಿ ಬಂದು ಸರದಿ ಸಾಲಿನಲ್ಲಿ ನಿಂತು ಒಬ್ಬೊಬ್ಬರಾಗಿ ಮತಚಲಾಯಿಸಿದರು.