ಆಹಾರ ಇಲಾಖೆಯ ಪಡಿತರ ವಿತರಣೆಗೆ ಸರ್ವರ್‌ ಸಮಸ್ಯೆ

0

ವರದಿ: ಸುಧಾಕರ್ ಕಾಣಿಯೂರು

ಕಾಣಿಯೂರು: ಸರಕಾರ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗಾಗಿ ಉಚಿತ ಅಕ್ಕಿ ವಿತರಣೆ ಮಾಡುತ್ತಿದೆಯಾದರೂ ವಿತರಣೆಯ ಸರ್ವರ್‌ನ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸದೆ ಇರುವುದರಿಂದ ಅಕ್ಕಿಗಾಗಿ ನ್ಯಾಯಬೆಲೆ ಅಂಗಡಿಯ ಮುಂದೆ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಎದುರಾಗುತ್ತಿದೆ. ಸರ್ವರ್ ಸಮಸ್ಯೆಯ ಕಾರಣದಿಂದಾಗಿ ತಿಂಗಳ ಪಡಿತರ ಪಡೆಯಲು ಜನರು ದಿನಗಟ್ಟಲೇ ಕೆಲಸ ಕಾರ್ಯ ಬಿಟ್ಟು ನ್ಯಾಯಬೆಲೆ ಅಂಗಡಿ ಎದುರು ಕಾಯುವ ಸ್ಥಿತಿ ನಿರ್ಮಾಣವಾಗಿದೆ.


ನ್ಯಾಯಬೆಲೆ ಅಂಗಡಿಗಳ ಮೂಲಕ ಈ ಮುಂಚಿನ ವ್ಯವಸ್ಥೆಯಂತೆ ಪಡಿತರ ವಿತರಣೆಗೆ ಬಯೋಮೆಟ್ರಿಕ್ ಹಾಗೂ ಮೊಬೈಲ್ ಒಟಿಪಿ ಮೂಲಕ ಗ್ರಾಹಕರಿಗೆ ಪಡಿತರ ವಿತರಣೆ ಆಗುತ್ತಿತ್ತು. ಬಯೋಮೆಟ್ರಿಕ್ ಕಾರ್ಯ ಎನ್‌ಐಸಿಯಿಂದ ನಿರ್ವಹಿಸಲಾಗುತ್ತಿತ್ತು. ಇದೀಗ ಕರ್ನಾಟಕ ಸ್ಟೇಟ್ ಡಾಟಾ ಸೆಂಟರ್‌ಗೆ ನೂತನ ಸರ್ವರ್ ಅಳವಡಿಸಿದ್ದೇ ಇಷ್ಟೆಲ್ಲ ಸಮಸ್ಯೆಗೆ ಕಾರಣ ಎನ್ನಲಾಗಿದೆ.


ಈ ಹಿನ್ನೆಲೆಯಲ್ಲಿ ಅ.18ರಿಂದ ಸಾರ್ವಜನಿಕರಿಗೆ ಪಡಿತರ ವಿತರಣೆ ಮಾಡಲು ಆದೇಶಿಸಲಾಗಿದೆ. ಆದರೆ, ವಿತರಣೆಗೆ ಸರ್ವರ್ ಸಮಸ್ಯೆ ಕಾಡುತ್ತಿದೆ ಎಂಬುದಾಗಿ ಬಹುತೇಕ ನ್ಯಾಯಬೆಲೆ ಅಂಗಡಿಯವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಬೆರಳಚ್ಚು ಪಡೆಯದೆ ಪಡಿತರ ನೀಡುವುದಿಲ್ಲ. ಸರ್ವರ್ ಸಮಸ್ಯೆಯಿಂದ ಬೆರಳಚ್ಚು ಪಡೆಯಲಾಗದೆ ಪಡಿತರ ವಿತರಕರು ಕಾಯಿಸುತ್ತಿದ್ದಾರೆ.
ಅಕ್ಟೊಬರ್ ತಿಂಗಳು ಅಂತ್ಯವಾಗಲಿದ್ದು, ಅದರೊಳಗೆ ಪಡಿತರ ಪಡೆಯದಿದ್ದರೆ ಈ ತಿಂಗಳ ಪಡಿತರದಿಂದ ವಂಚಿರಾಗಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಫಲಾನುಭವಿಗಳು.


ಪಡಿತರ ವಿತರಣೆಯಲ್ಲಿ ಪಾರದರ್ಶಕತೆಯನ್ನು ಸಾಧಿಸುವ ನಿಟ್ಟಿನಲ್ಲಿ ಸರಕಾರ ಬೆರಳಚ್ಚು, ಒಟಿಪಿ ವ್ಯವಸ್ಥೆ ಮಾಡಿದೆ. ಆದರೆ ಸರ್ವರ್ ಸಮಸ್ಯೆಯ ಕಾರಣಕ್ಕೆ ಪಡಿತರ ಪಡೆಯುವವರು ತೊಂದರೆ ಅನುಭವಿಸುವ ಜತೆಗೆ ನ್ಯಾಯಬೆಲೆ ಅಂಗಡಿಯವರಿಗೂ ಸಮಸ್ಯೆಯಾಗುತ್ತಿದೆ. ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್‌ನೆಟ್ ಕೂಡ ವೇಗವಾಗಿ ಇಲ್ಲದೇ ಇರುವುದರಿಂದ ಪಡಿತರ ವಿತರಣೆಗೆ ಇನ್ನಷ್ಟು ಸಮಸ್ಯೆಯಾಗುತ್ತಿದೆ.


ತಿಂಗಳ 10 ತಾರೀಕಿನ ವೇಳೆಗೆ ನ್ಯಾಯಬೆಲೆ ಅಂಗಡಿಯವರು ವಿತರಣೆ ಪ್ರಾರಂಭಿಸಿದರೆ ತಿಂಗಳ ಅಂತ್ಯದೊಳಗೆ ಅದನ್ನು ಪೂರ್ಣಗೊಳಿಸಬೇಕಾಗುತ್ತದೆ. ಆದರೆ ಸರ್ವರ್ ಸಮಸ್ಯೆಯಿಂದ ವಿತರಣೆ ವಿಳಂಬವಾಗುವುದು ಒಂದೆಡೆಯಾದರೆ, ತಮ್ಮನ್ನು ವಿನಾಃ ಕಾರಣ ಕಾಯಿಸುತ್ತಿದ್ದಾರೆ ಎಂದು ಜನರಿಂದ ಬೈಗುಳ ತಿನ್ನಬೇಕಾದ ಪರಿಸ್ಥಿತಿ ಇದೆ.
ಹೆಚ್ಚಾಗಿ ಪೇಟೆ ಪ್ರದೇಶದಲ್ಲಿಯೇ ಇರುವ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಪಡಿತರ ಸಾಮಾಗ್ರಿಕೊಂಡು ಹೋಗುವುದಕ್ಕಾಗಿ ಗ್ರಾಮಾಂತರ ಪ್ರದೇಶದವರು ಆಟೋ ರಿಕ್ಷಾ ಮಾಡಿಕೊಂಡೇ ಹೋಗುತ್ತಾರೆ. ಆದರೆ ಅಲ್ಲಿಗೆ ಹೋದಾಗ ಸರ್ವರ್ ಸ್ಲೋ ಇರುವುದೇ ಮತ್ತೆ ಸಮಸ್ಯೆ ಎದುರಾಗುತ್ತದೆ. ಪಡಿತರ ತರುವುದಕ್ಕಾಗಿಯೇ ಎರಡು ದಿನ ರಜೆ ಮಾಡುವುದರಿಂದ ಎರಡು ದಿನದ ಕೂಲಿಯೂ ನಷ್ಟವಾಗುತ್ತದೆ. ಹೀಗಿರುವಾಗ ಸರಕಾರದ ಉಚಿತ ಅಕ್ಕಿಯೂ ದುಬಾರಿಯಾಗಿ ಪರಿಣಮಿಸಿದೆ ಎನ್ನುತ್ತಾರೆ ಪಡಿತರ ಚೀಟಿದಾರರು.

ಸರ್ವರ್ ಸಮಸ್ಯೆಗಳ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಮಾಡಲಾಗಿದೆ
ಅಕ್ಟೋಬರ್ 2024 ರ ಮಾಹೆಯಲ್ಲಿ ಬೆಂಗಳೂರು ಎನ್ ಐ ಸಿ ಸರ್ವರ್ ನಿಂದ ಕೆ ಎಸ್ ಡಿ ಸಿ ಹೊಸ ಸರ್ವರ್ ಗೆ ಪಡಿತರ ಡಾಟಾ ಶಿಪ್ಟ್ ಆಗಿದ್ದು ಹೊಸ ಸರ್ವರ್ ನಲ್ಲಿ ತಾಂತ್ರಿಕ ದೋಷ ದಿಂದ ಸಮಸ್ಯೆ ಎದುರಾಗಿರುತ್ತದೆ. ಸರ್ವರ್ ಸಮಸ್ಯೆಗಳ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಮಾಡಿದೆ.
ಎಂ.ಎಲ್ ಶಂಕರ
ಆಹಾರ ನಿರೀಕ್ಷರು, ಆಹಾರ ಶಾಖೆ ತಾಲೂಕು ಕಚೇರಿ ಕಡಬ

ಪಡಿತರ ವ್ಯವಸ್ಥೆಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕು
ಪಡಿತರ ವಿತರಣೆಗಾಗಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದರಿಂದ ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ಇದರಿಂದಾಗಿ ಪಡಿತರದಾರರಿಗೆ ಕ್ಲಪ್ತ ಸಮಯಕ್ಕೆ ಸಮರ್ಪಕವಾಗಿ ಪಡಿತರ ವಿತರಣೆಯಾಗಲು ಅಸಾಧ್ಯವಾಗಿದೆ. ಶೇ.80ರಷ್ಟು ಇದರಿಂದ ವಂಚಿತರಾಗಿದ್ದಾರೆ. ಸಂಬಂಧಪಟ್ಟ ಇಲಾಖೆ ಆದಷ್ಟು ಬೇಗ ತಂತ್ರಾಂಶದಲ್ಲಿನ ಲೋಪವನ್ನು ಸರಿಪಡಿಸಬೇಕು ಇಲ್ಲವೇ ಪಡಿತರ ವ್ಯವಸ್ಥೆಗೆ ಪರ್ಯಾಯ ಮಾರ್ಗವಾಗಿ ಈ ಹಿಂದಿನ ಮೊಬೈಲ್ ಒಟಿಪಿ ವ್ಯವಸ್ಥೆಯನ್ನು ಕಲ್ಪಿಸಬೇಕು.
ಗಣೇಶ್ ಉದನಡ್ಕ, ಅಧ್ಯಕ್ಷರು, ಚಾರ್ವಾಕ ಪ್ರಾ.ಕೃ.ಪ. ಸ. ಸಂಘ

LEAVE A REPLY

Please enter your comment!
Please enter your name here