ವಾಟ್ಸಪ್ ಟಾಸ್ಕ್ ಕಂಪ್ಲೀಟ್ ಮಾಡಿ ಲಕ್ಷಾಂತರ ರೂ.ಕಳೆದುಕೊಂಡ ಪುತ್ತೂರಿನ ಪುಸ್ತಕ ವ್ಯಾಪಾರಿ

0

ಪುತ್ತೂರು: ವಾಟ್ಸಪ್ ಟಾಸ್ಕ್ ಕಂಪ್ಲೀಟ್ ಮಾಡಿ ಹಣಗಳಿಸುವ ಆಸೆಯಿಂದ ಪುತ್ತೂರಿನ ಪತ್ರಿಕೆ ಮತ್ತು ಪುಸ್ತಕ ವ್ಯಾಪಾರಿಯೊಬ್ಬರು ಲಕ್ಷಾಂತರ ರೂ.ಕಳೆದುಕೊಂಡಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಪುತ್ತೂರಿನ ಮುಖ್ಯರಸ್ತೆ ಪೊಲೀಸ್ ಠಾಣೆಯ ಬಳಿ ಪುಸ್ತಕ ಮತ್ತು ಪತ್ರಿಕೆ ವ್ಯಾಪಾರ ನಡೆಸುತ್ತಿರುವ ವ್ಯಕ್ತಿ ವಂಚನೆಗೊಳಗಾದವರು. ಅ.10ರಂದು ಅವರ ವಾಟ್ಸಪ್‌ಗೆ ಟಾಸ್ಕ್ ಬಗ್ಗೆ ಮೆಸೇಜ್ ಬಂದಿತ್ತು. ಇದಕ್ಕೆ ಮೆಸೇಜ್ ಮಾಡಿ ಟಾಸ್ಕ್ ಬಗ್ಗೆ ಕೇಳಿದ್ದಕ್ಕೆ ಯುಟ್ಯೂಬ್ ಲಿಂಕ್ ಕಳುಹಿಸಿ ಸದ್ರಿ ವೀಡಿಯೋ ಲಿಂಕ್ ಓಪನ್ ಮಾಡಿ ಸಬ್‌ಸ್ಕ್ರೈಬ್ ಮಾಡಿ ಅದರ ಸ್ಕ್ರೀನ್‌ಶಾಟ್‌ನ್ನು ವಾಟ್ಸಪ್‌ನಲ್ಲಿ ಕಳುಹಿಸಿದರೆ ಹಣ ಸಿಗುವುದಾಗಿ ತಿಳಿಸಿದ್ದರು.

ದೂರುದಾರರು ಎರಡು ಟಾಸ್ಕ್ ಕಂಪ್ಲೀಟ್ ಮಾಡಿ ಸ್ಕ್ರೀನ್ ಶಾಟ್ ಕಳುಹಿಸಿದಾಗ ಟೆಲಿಗ್ರಾಂಗೆ ಜಾಯಿನ್ ಆಗಲು ಲಿಂಕ್ ಬಂದಿತ್ತು. ದೂರುದಾರರು ಟಾಸ್ಕ್‌ಗಾಗಿ ಟೆಲಿಗ್ರಾಂ ಖಾತೆಗೆ ಪ್ರೊಪೈಲ್ ಹಾಗೂ ಯುಪಿಐ ಲಿಂಕನ್ನು ನೀಡಿದ್ದರು. ಆ ಸಂದರ್ಭ ಟಾಸ್ಕ್ ಕಂಪ್ಲೀಟ್ ಮಾಡಿದ್ದಕ್ಕೆ ತಲಾ ರೂ.123 ರಂತೆ ಒಟ್ಟು ರೂ 492 ಹಣ ಬಂದಿತ್ತು. ನಂತರ ಅವರು ಹಣ ಡಿಪಾಸಿಟ್ ಮಾಡಿದರೆ ಕಮೀಷನ್ ಸಿಗುವ ಟಾಸ್ಕ್‌ನ್ನು ನೀಡಿದ್ದಕ್ಕೆ ದೂರುದಾರರು ತನ್ನ ಹಾಗೂ ತನ್ನ ಗೆಳೆಯರ ಬ್ಯಾಂಕ್ ಖಾತೆಯಿಂದ ಅಪರಿಚಿತ ವ್ಯಕ್ತಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತಹಂತವಾಗಿ ಹಣ ವರ್ಗಾಯಿಸಿರುತ್ತಾರೆ.

ಇದರಲ್ಲಿ ದೂರುದಾರರಿಗೆ ಸುಮಾರು ರೂ.52,000 ಬಂದಿದ್ದು, ಬೇರೆ ಯಾವುದೇ ಹಣ ವಾಪಾಸ್ ಬಂದಿರುವುದಿಲ್ಲ. ಒಟ್ಟಿನಲ್ಲಿ ಆನ್‌ಲೈನ್ ನಲ್ಲಿ ಟಾಸ್ಕ್ ಮಾಡಲು ಹೋಗಿ ರೂ.56,71,910 ಹಣ ಕಳೆದುಕೊಂಡಿದ್ದಾರೆ. ಈ ಕುರಿತು ದೂರುದಾರರು ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here