ವಿಧಾನ ಪರಿಷತ್ ಉಪಚುನಾವಣೆ – ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಬೊಟ್ಯಾಡಿ ಗೆಲುವು

0

ಪುತ್ತೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಬೊಟ್ಯಾಡಿ 1,697 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಅವರು 3,654 ಮತ ಪಡೆದು ಗೆಲುವಿನ ನಗೆ ಬೀರಿದ್ದಾರೆ.

1,957 ಮತ ಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಅವರು ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಎಸ್‌ಡಿಪಿಐನ ಅನ್ವರ್ ಸಾದತ್ 195 ಮತ ಪಡೆದಿದ್ದು, ಪಕ್ಷೇತರ ಅಭ್ಯರ್ಥಿ ದಿನಕರ ಉಳ್ಳಾಲ್ 9 ಮತ ಗಳಿಸಿದ್ದಾರೆ. ಒಟ್ಟು 87 ಮತಗಳು ತಿರಸ್ಕೃತವಾಗಿದೆ. ಕ್ಷೇತ್ರದಲ್ಲಿ ಒಟ್ಟು 5,906 ಮತಗಳು ಚಲಾವಣೆಯಾಗಿದೆ. ಇಲ್ಲಿನ ಕೊಡಿಯಾಲ್ ಬೈಲಿನ ಸೆಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆದಿದೆ. ಕೇಂದ್ರ ಚುನಾವಣಾ ವೀಕ್ಷಕ ಪಂಕಜ್ ಕುಮಾರ್ ಪಾಂಡೆ, ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರ ಸಮ್ಮುಖದಲ್ಲಿ ಮತ ಎಣಿಕೆ ನಡೆಯಿತು.

ಕಿಶೋರ್ ಗೆಲುವು ಸಾಧಿಸುತ್ತಿದ್ದಂತೆಯೇ ಪಿವಿಎಸ್ ವೃತ್ತದ ಬಳಿ ಇರುವ ಬಿಜೆಪಿ ಕಚೇರಿ ಎದುರು ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ಅವರು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅ.21 ಮತದಾನ ನಡೆದಿತ್ತು.

ಕಳೆದ (2021ರ ಡಿಸೆಂಬರ್ 10 ರಂದು) ಚುನಾವಣೆಯಲ್ಲಿ 6,012 ಮತ ಚಲಾವಣೆಯಾಗಿದ್ದು, 5,955 ಮತಗಳು ಸಿಂಧುವಾಗಿದ್ದವು. ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, 3672, ಮಂಜುನಾಥ ಭಂಡಾರಿ 2079, ಎಸ್ಪಿಪಿಐ ಅಭ್ಯರ್ಥಿ 204 ಮತ ಪಡೆದಿದ್ದರು. ಕೋಟ ಶ್ರೀನಿವಾಸ ಪೂಜಾರಿ 1593 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

LEAVE A REPLY

Please enter your comment!
Please enter your name here