ತೆರೆದ ವಾಹನದಲ್ಲಿ ಸ್ವಾಗತ, ಮೆರವಣಿಗೆ
ಎಸ್.ಐ ಆಂಜನೇಯ ರೆಡ್ಡಿಯವರಿಂದ ಚಿನ್ನದ ಪದಕ, ನಗದು ಪುರಸ್ಕಾರ
ಮೋಹನದಾಸ್ ರೈ, ರಝಾಕ್ ಬಪ್ಪಳಿಗೆಯವರಿಂದ ನಗದು ಪುರಸ್ಕಾರ
ಪುತ್ತೂರು: 14ರ ವಯೋಮಾನದ ಬಾಲಕಿಯರ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಸತತ ಎರಡನೇ ಬಾರಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಪುತ್ತೂರಿನಲ್ಲಿ ಇತಿಹಾಸ ನಿರ್ಮಿಸಿದ ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಿಗೆ ಶಾಲೆಯ ವತಿಯಿಂದ ಅದ್ದೂರಿ ಸ್ವಾಗತ ಹಾಗೂ ಅಭಿನಂದನಾ ಸಮಾರಂಭ ಅ.25ರಂದು ಶಾಲಾ ಸಭಾಂಗಣದಲ್ಲಿ ನೆರವೇರಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ವಿದ್ಯಾರ್ಥಿಗಳನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಮಾಯಿದೇ ದೇವುಸ್ ಚರ್ಚ್ ಬಳಿಯಿಂದ ಪ್ರಾರಂಭಗೊಂಡ ಮೆರವಣಿಗೆಗೆ ಚರ್ಚ್‌ನ ಧರ್ಮಗುರು ಲಾರೆನ್ಸ್ ಮಸ್ಕರೇನಸ್ ಪ್ರಾರ್ಥನೆ ಸಲ್ಲಿಸಿ, ವಿದ್ಯಾರ್ಥಿಗಳಿಗೆ ಚಿನ್ನದ ಪದಕ ತೊಡಿಸಿ ಅಭಿನಂದಿಸಿದರು. ನಂತರ ತೆರೆದ ಎರಡು ವಾಹನದನಲ್ಲಿ ವಿದ್ಯಾರ್ಥಿಗಳ ಮೆರವಣಿಗೆಯಲ್ಲಿ ಸ್ವಾಗತ ಮೆರವಣಿಗೆ ನಡೆಯಿತು. ಚರ್ಚ್ ಬಳಿಯಿಂದ ಹೊರಟ ಮೆರವಣಿಗೆಯು ಮುಖ್ಯ ರಸ್ತೆಯ ಮೂಲಕ ದರ್ಬೆ ಕುಡ್ಗಿ ಎಂಟರ್ ಪ್ರೈಸಸ್ ಬಳಿ ಸಾಗಿ ಅಲ್ಲಿಂದ ಬ್ಯಾಂಡ್ ವಾಲಗದೊಂದಿಗೆ ಆಕರ್ಷಕ ಮೆರವಣಿಗೆಯ ಮೂಲಕ ಶಾಲೆ ತನಕ ಸಾಗಿಬಂದಿದೆ.
ನಂತರ ನಡೆದ ಕಾರ್ಯಕ್ರಮದಲ್ಲಿ ಕಬಡ್ಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳ ಪೋಷಕರನ್ನು ಗೌರವಿಸಲಾಯಿತು. ನಂತರ 14ರ ವಯೋಮಾನದ ಕಬಡ್ಡಿ ಪಂದ್ಯಾಟದಲ್ಲಿ ತಾಲೂಕು, ಜಿಲ್ಲೆ, ವಲಯ ಹಾಗೂ ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿದ ವಿದ್ಯಾರ್ಥಿಗಳಾದ ಜು ಏನಾ ಡ್ಯಾಝಲ್ ಕುಟಿನ್ಹಾ, ಜೆನಿಟ ಸಿಂಧು ಪಸನ್ನ, ಸನ್ನಿಧಿ, ಸುಶ್ರಾವ್ಯ, ಹಾರ್ದಿಕ ಪಿ., ಜಶ್ಮಿತಾ, ಫಾತಿಮಾತ್ ಅಫ್ರ, ಫಾತಿಮಾತ್ ಶೈಮ, ಸಾಕ್ಷಿ, ನಮೃತಾ ಶೆಟ್ಟಿ , ಪೂರ್ವಿ ಕೆ., ಕೃತಿಕಾ, ಘನಶ್ರೀ., ಸಾಕ್ಷಿ ಹರೀಶ್ ಕಲ್ಲರ್ಪೆಯವರನ್ನು ಅಭಿನಂದಿಸಲಾಯಿತು.
ಎಸ್.ಐ ಆಂಜನೇಯ ರೆಡ್ಡಿ, ಮೋಹನದಾಸ್ ರೈ, ರಝಾಕ್ ಬಪ್ಪಳಿಗೆಯವರಿಂದ ನಗದು ಪುರಸ್ಕಾರ:
ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿನಿಯರಿಗೆ ನಗರ ಠಾಣಾ ಎಸ್.ಐ ಆಂಜನೇಯ ರೆಡ್ಡಿಯವರು ಸ್ವಾಗತ ಮೆರವಣಿಗೆಯ ಸಂದರ್ಭದಲ್ಲಿ ಚಿನ್ನದ ಪದಕ ನೀಡಿದರು. ನಂತರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ನಗದು ಪುರಸ್ಕಾರ ನೀಡಿದರು. ದಾನಿಗಳಾದ ಮೋಹನದಾಸ ರೈ ಹಾಗೂ ರಝಾಕ್ ಬಪ್ಪಳಿಗೆಯವರು ವಿದ್ಯಾರ್ಥಿನಿಯರಿಗೆ ನಗದು ಪುರಸ್ಕಾರ ನೀಡಿ ಗೌರವಿಸಿದರು.
ಸನ್ಮಾನ:
ಎರಡನೇ ಬಾರಿಗೆ ರಾಷ್ಟ್ರ ಮಟ್ಟದ ತರಬೇತುದಾರರಾಗಿ ಆಯ್ಕೆಯಾಗಿರುವ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್, ಟೀಮ್ ಮ್ಯಾನೇಜರ್ ಶಿಕ್ಷಕಿ ವಿಲ್ಮಾ ಫೆರ್ನಾಂಡೀಸ್‌ರವರನ್ನು ಶಾಲಾ ಆಡಳಿತ ಮಂಡಳಿ ಹಾಗೂ ಎಸ್.ಐ ಆಂಜನೇಯ ರೆಡ್ಡಿ, ಮೋಹನದಾಸ್ ರೈ, ಮತ್ತು ರಝಾಕ್ ಬಪ್ಪಳಿಗೆಯವರು ಸನ್ಮಾನಿಸಿದರು. ಮಂಗಳೂರು ಪ್ರಾಂತ್ಯದ ಬೆಥನಿ ಶಿಕ್ಷಣ ಮಂಡಳಿಯ ಕಾರ್ಪೋರೇಟ್ ಮ್ಯಾನೇಜರ್ ಲಿಲ್ಲಿ ಪಿರೇರಾ ಬಿ.ಎಸ್., ಶಿಕ್ಷಣ ಸಂಯೋಜಕಕ ಭಗಿನಿ ಮಾರಿಯೋಲಾ ಬಿ. ಎಸ್.ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮಾತನಾಡಿ,ಸಾಧನೆ ಯಾರ ಸೊತ್ತು ಅಲ್ಲ. ಪ್ರತಿಭೆ ಎಲ್ಲರಲ್ಲಿಯೂ ಇರುತ್ತದೆ. ಆದರೆ ಪರಿಶ್ರಮಕ್ಕೆ ತಕ್ಕ ಪ್ರತಿಫಲವಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಶ್ರಮದ ಫಲವಾಗಿ ಇಂದು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದೆ. ರಾಜ್ಯದ 63,000 ಶಾಲೆಗಳ ಪೈಕಿ ಲಿಟ್ಲ್ ಫ್ಲವರ್ ರಾಜ್ಯದಲ್ಲಿ ನಂಬರ್ ವನ್ ಆಗಿದೆ. ವಿದ್ಯಾರ್ಥಿಗಳ ಪರಿಶ್ರಮಕ್ಕೆ ಇಲಾಖೆ ಹಾಗೂ ದಾನಿಗಳ ಸಹಕಾರ ದೊರೆತಿದೆ. ವಿದ್ಯಾರ್ಥಿಗಳ ಪ್ರತಿಭೆ ರಾಷ್ಟ್ರಮಟ್ಟದಲ್ಲಿ ಬೆಳಗಿಬರಲಿ ಎಂದು ಶುಭಹಾರೈಸಿದರು.
ನಗರ ಠಾಣಾ ಉಪ ನಿರೀಕ್ಷಕ ಆಂಜನೇಯ ರೆಡ್ಡಿ ಮಾತನಾಡಿ, ಶಾಲೆಯ ಹೆಸರು ಲಿಟ್ಲ್ ಆದರೆ ಸಾಧನೆಯಲ್ಲಿ ಮಾತ್ರ ಬಿಗ್ಗರ್ ಆಗಿದೆ. ಅನುದಾನಿತ ಶಾಲೆಯಾಗಿ ಇದೇ ಮೊದಲ ಬಾರಿ ಸತತ ಎರಡನೇ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು ಇತಿಹಾಸದ ಸುವರ್ಣಾಕ್ಷದಲ್ಲಿ ಬರೆದಿಡಬೇಕಾದ ದಿನವಾಗಿದೆ. ಪೊಲೀಸ್ ಇಲಾಖೆಯಾಗಿ ನಾವು ಕಾನೂನು ಪಾಲನೆಯ ಜೊತೆಗೆ ಸಾಧಕರಿಗೆ ಸಹಕಾರವೂ ನೀಡುತ್ತಿದ್ದೇವೆ. ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಪುತ್ತೂರಿನಲ್ಲಿ ಬೆಳಗುವ ಚಿನ್ನವಾಗಿ ರಾಷ್ಟ್ರಕ್ಕೆ ಮುಕುಟವಾಗಿರುವ ಇಂತಹ ಸಾಧಕರನ್ನು ಕೇವಲ ಶಾಲೆಯ ವತಿಯಿಂದ ಅಭಿನಂದಿಸುವುದಲ್ಲ. ಇಡೀ ಪುತ್ತೂರಿನ ಜನತೆ, ರಾಜಕಾರಣಿಗಳು, ಅಧಿಕಾರಿಗಳು ಸೇರಿಕೊಂಡು ಮಾದಬೇಕಿತ್ತು. ಇಲ್ಲಿನ ಪ್ರತಿಭೆಗಳು ಪ್ರೋ.ಕಬಡ್ಡಿಯಲ್ಲಿ ಸಾಧನೆ ಮಾಡಬೇಕು. ಇಲ್ಲಿನ ಕ್ರೀಡಾಪಟುಗಳನ್ನು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಣುವ ಪ್ರತಿಜ್ಞೆ ಮಾಡಬೇಕು. ಇವರ ಸಾಧನೆಯ ಹಿಂದೆ ಶಿಕ್ಷಕರಾದ ಬಾಲಕೃಷ್ಣ ರೈ ಹಾಗೂ ವಿಲ್ಮಾ ಫೆರ್ನಾಂಡೀಸ್‌ರವರ ಪ್ರಯತ್ನವೂ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಪ್ರಾಂತ್ಯದ ಬೆಥನಿ ಶಿಕ್ಷಣ ಮಂಡಳಿಯ ಕಾರ್ಪೋರೇಟ್ ಮ್ಯಾನೇಜರ್ ಲಿಲ್ಲಿ ಪಿರೇರಾ ಬಿ.ಎಸ್. ಮಾತನಾಡಿ, ಹೆಣ್ಣು ಮಕ್ಕಳ ವಿಕಸನದ ಧ್ಯೇಯವಾಗಿಸಿಕೊಂಡು ಸಂಸ್ಥಾಪಕರು ವಿದ್ಯಾ ಸಂಸ್ಥೆಯನ್ನು ಪ್ರಾರಂಭಿಸಿದ್ದರು. ಸಂಸ್ಥೆಯ ವಿದ್ಯಾರ್ಥಿನಿಯವರು ರಾಷ್ಟ್ರಮಟ್ಟಕೆ ಆಯ್ಕೆಯಾಗುವ ಮುಖಾಂತರ ಸಂಸ್ಥಾಪಕರ ಅಂದಿನ ಅವರ ಕನಸನ್ನು ಇಂದಿನ ವಿದ್ಯಾರ್ಥಿನಿಯರ ಸಾಧನೆಯ ಮೂಲಕ ನನಸಾಗಿದೆ. ಇಂದು ಅವರು ತೃಪ್ತಿ ಬಂದಿರಬಹುದು. ಕ್ರೀಡಾಪಟುಗಳು ಹಾಗೂ ಶಿಕ್ಷಕರ ಕಠಿಣ ಪರಿಶ್ರಮದಿಂದ ಸಾಧನೆ ಮಾಡಿರುವುದು ಶ್ಲಾಘನೀಯ. ನಿಮ್ಮ ಧೈರ್ಯ, ಸಾಧನೆ ಇದೇ ರೀತಿ ಮುಂದುವರಿಯಲಿ. ಸಾಧನೆಯ ಹೆಜ್ಜೆ ಉತ್ತುಂಗಕ್ಕೆ ಏರಲಿ ಎಂದು ಆಶಿಸಿದರು.
ಮಂಗಳೂರು ಪ್ರಾಂತ್ಯದ ಬೆಥನಿ ಶಿಕ್ಷಣ ಮಂಡಳಿಯ ಶಿಕ್ಷಣ ಸಂಯೋಜಕಕ ಭಗಿನಿ ಮಾರಿಯೋಲಾ ಬಿ. ಎಸ್., ಶಾಲಾ ಸಂಚಾಲಕಿ ಪ್ರಶಾಂತಿ ಬಿ.ಎಸ್., ಉದ್ಯಮಿಗಳು ದಾನಿಯೂ ಆಗಿರುವ ಮೋಹನದಾಸ್ ರೈ ಕುಂಬ್ರ, ದಾನಿಗಳಾದ ಸಂತೋಷ್ ಡಿ ಅಲ್ಮೆಡಾ, ಸುನಿತಾ ಡಿ ಅಲ್ಮೇಡಾ, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್, ಹಿರಿಯ ಶಿಕ್ಷಕ ಜೊಸೆಫ್, ನಗರ ಠಾಣೆಯ ಸ್ಕರಿಯ, ಪ್ರವೀಣ್, ಶಾಲಾ ರಕ್ಷಕ ಶಿಕ್ಷಕ ಸಂಘದ ಮಾಜಿ ಉಪಾಧ್ಯಕ್ಷ ರಘುನಾಥ ರೈ, ಅಮೆಚೂರು ಕಬಡ್ಡಿ ಅಸೋಸಿಯೇಶನ್ ಕೋಶಾಧಿಕಾರಿ ರಝಾಕ್ ಬಪ್ಪಳಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಷಾ ಬಿ.ಎಸ್ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ರೈ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಜಾಸ್ಲಿನ್ ಪಾಯಸ್ ವಂದಿಸಿದರು. ಶಿಕ್ಷಕರು ಸಹಕರಿಸಿದರು.