puttur:ಪ್ರಚಲಿತ ವಿದ್ಯಾಮಾನಗಳ ಕುರಿತಾದ ವಿಚಾರಗಳನ್ನು ಹಂಚುವ ಉದ್ದೇಶದಿಂದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗಾಗಿ ನಡೆಸಲ್ಪಡುವ ಈ ‘ಭಿತ್ತಿಪತ್ರಿಕೆ’ಯಂತಹ ಮಾಧ್ಯಮದ ಮೂಲಕ ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸುವ ಎಲ್ಲಾ ಅವಕಾಶಗಳು ಇದೆ. ಪ್ರತಿಕ್ಷಣ ಬದಲಾಗುತ್ತಿರುವ ಈ ಜಗತ್ತಿನಲ್ಲಿ ಕಾನೂನು ವಿಚಾರಗಳ ಕುರಿತು ಮಾಹಿತಿಯನ್ನು ನೀಡಿ, ಆ ಮೂಲಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಸಕ್ತಿ ಮೂಡಿಸುವ ಕೆಲಸವನ್ನು ಈ ಭಿತ್ತಿಪತ್ರಿಕೆಗಳ ಮೂಲಕ ಆಗಬೇಕು ಎಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿ.ಕೆ. ರವೀಂದ್ರ ಆಶಯ ವ್ಯಕ್ತಪಡಿಸಿದರು.
ಅವರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಿಂದ ಪ್ರತಿ ವಾರ ಹೊರ ತರುವ ‘ಜ್ಞಾನಬಿಂಬ’ ಭಿತ್ತಿಪತ್ರಿಕೆಯ 2024-25ರ ಪ್ರಥಮ ಸಂಚಿಕೆಯನ್ನು ಅನಾವರಣಗೊಳಿಸಿ ಮಾತನಾಡಿದರು. ಭಿತ್ತಿಪತ್ರಿಕೆಯಲ್ಲಿರುವ ಮಾಹಿತಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಸ್ಪಷ್ಟವಾಗಿರಬೇಕು. ನೋಡಿದ ಕೂಡಲೇ ಅದು ಏನನ್ನು ಸೂಚಿಸುತ್ತದೆ ಎಂಬುದನ್ನು ಹೇಳುವಂತಿರಬೇಕು. ಪ್ರತಿ ವಾರ ವಿಶೇಷ ಮಾಹಿತಿಗಳ ಮೂಲಕ ಪ್ರಕಟಗೊಳ್ಳುವ ಈ ಜ್ಞಾನಬಿಂಬ ಭಿತ್ತಿಪತ್ರಿಕೆಯಿಂದಾಗಿ ನಮ್ಮ ಮಹಾವಿದ್ಯಾಲಯದ ಕಾನೂನು ವಿದ್ಯಾರ್ಥಿಗಳ ಜ್ಞಾನವು ಮತ್ತಷ್ಟು ಪ್ರಖರಗೊಳ್ಳಲಿ ಎಂದು ಅವರು ತಿಳಿಸಿದ್ದಾರೆ.
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಅಕ್ಷತಾ ಎ. ಪಿ. ಮಾತನಾಡಿ ಶುಭಹಾರೈಸಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಪ್ರೀತಿ ಸ್ವಾಗತಿಸಿ, ಧನ್ಯಶ್ರೀ ಪಿ. ಎಸ್ ವಂದಿಸಿದರು.