ಮಂಗಳೂರು: 8 ವರ್ಷದ ಹಿಂದೆ 23 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ ಮಂಗಳೂರಿನ ನ್ಯಾಯಾಲಯ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ಆರೋಪಿಯನ್ನು ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಜಗನ್ನಾಥ ಕೆ ಮೊಗೇರ (38 ವ.) ಎಂದು ಗುರುತಿಸಲಾಗಿದೆ. ಈತ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದ ಬಗ್ಗೆ 2016ರ ಫೆ.25ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧಿಶ ಎಸ್. ವಿ. ಕಾಂತರಾಜು, ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಅ.25ರಂದು ಆದೇಶ ನೀಡಿದ್ದಾರೆ.
ಯುವತಿ ಮನೆಯಲ್ಲಿ ಒಬ್ಬಳೇ ಇದ್ದುದನ್ನು ತಿಳಿದ ಆರೋಪಿ ನೀರು ಕೇಳುವ ನೆಪದಲ್ಲಿ ಯುವತಿಯ ಮನೆಗೆ ತೆರಳಿ ಅತ್ಯಾಚಾರವೆಸಗಿದ್ದ ಮತ್ತು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿಯೂ ಬೆದರಿಸಿದ್ದ. ಆ ನಂತರವೂ ಬೆದರಿಕೆ ಹಾಕಿ ಹಲವು ಬಾರಿ ಅತ್ಯಾಚಾರವೆಸಗಿದ್ದ. ತಾನು ಗರ್ಭಿಣಿಯಾದ ವಿಷಯ ತಿಳಿದ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು ಯುವತಿ ಪೊಲೀಸರಿಗೆ ಹೇಳಿಕೆ ನೀಡಿದ್ದಳು. ಅದರಂತೆ ಪ್ರಕರಣ ದಾಖಲಿಸಿದ್ದ ಅಂದಿನ ಇನ್ಸ್ಪೆಕ್ಟರ್ ಅನಿಲ್ ಎಸ್ ಕುಲಕರ್ಣಿ ತನಿಖೆ ನಡೆಸಿ ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ವಿಚಾರಣೆಯ ವೇಳೆ 9 ಮಂದಿ ಸಾಕ್ಷಿದಾರರನ್ನು ವಿಚಾರಿಸಿ 20 ದಾಖಲೆಗಳನ್ನು ಗುರುತಿಸಲಾಗಿತ್ತು. ಆರೋಪಿಯ ಕೃತ್ಯ ಸಾಬೀತಾಗಿರುವುದನ್ನು ತೀರ್ಮಾನಿಸಿದ ನ್ಯಾಯಾಧಿಶರು ಭಾರತೀಯ ದಂಡ ಸಂಹಿತೆಯ ಕಲಂ 376ರಡಿ 10 ವರ್ಷಗಳ ಕಠಿಣ ಕಾರಾಗೃಹ ವಾಸದ ಶಿಕ್ಷೆ ಮತ್ತು 5,000 ರೂ. ದಂಡ, ಕಲಂ 506ರಡಿ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 2 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ಅ.25ರಂದು ತೀರ್ಪು ನೀಡಿದ್ದಾರೆ. ಸಂತ್ರಸ್ತೆಗೆ ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸರಕಾರಿ ಅಭಿಯೋಜಕ ಚೌಧರಿ ಮೋತಿಲಾಲ್ ಅವರು ವಾದಿಸಿದ್ದರು.