ತ್ಯಾಗರಾಜ ನಗರ: ಹೆದ್ದಾರಿ ಗುಂಡಿಗೆ ಬಿದ್ದು ಬೈಕ್ -ಕಾರು ಡಿಕ್ಕಿ,ಗಾಯ

0

ಪುತ್ತೂರು: ಹೆದ್ದಾರಿ ಬದಿಯಲ್ಲಿ ನಿರ್ಮಾಣಗೊಂಡ ಗುಂಡಿಗೆ ಬೈಕೊಂದು ಇಳಿದು ಸವಾರನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡ ಘಟನೆ ತಿಂಗಳಾಡಿ ಸಮೀಪದ ತ್ಯಾಗರಾಜ ನಗರದಲ್ಲಿ ಅ.27ರಂದು ರಾತ್ರಿ ನಡೆದಿದೆ. ಕುಂಬ್ರದಿಂದ ತಿಂಗಳಾಡಿ ಕಡೆಗೆ ಬರುತ್ತಿದ್ದ ಬೈಕ್ ಸವಾರ ಅಮೈ ತಿರುವಿನಲ್ಲಿ ರಸ್ತೆ ಬದಿಯಲ್ಲಿದ್ದ ಗುಂಡಿಗೆ ಬೈಕ್ ಇಳಿದು ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡಿದ್ದಾರೆ. ಕಾರಿನ ಬಂಪರ್ ಜಖಂಗೊಂಡಿದೆ ಎಂದು ತಿಳಿದು ಬಂದಿದೆ. 

ಅಪಘಾತಕ್ಕೆ ಕಾರಣವಾಗುತ್ತಿದೆ ರಸ್ತೆ ಬದಿಯ ಗುಂಡಿ
ಕುಂಬ್ರ – ಬೆಳ್ಳಾರೆ ರಾಜ್ಯ ಹೆದ್ದಾರಿಯಲ್ಲಿ ಕುಂಬ್ರದಿಂದ 2.5 ಕಿ.ಮೀ ದೂರದ ಅಮೈ ತಿರುವಿನಿಂದ ಸ್ವಲ್ಪ ಮುಂದಕ್ಕೆ ರಸ್ತೆಯಲ್ಲೇ ಗುಂಡಿ ನಿರ್ಮಾಣಗೊಂಡಿದೆ.ಇದು ಅತ್ಯಂತ ಅಪಾಯಕಾರಿ ಗುಂಡಿ ಯಾಗಿದ್ದು ಈಗಾಗಲೇ ಹಲವು ಅಪಘಾತಗಳು ಇಲ್ಲಿ ಸಂಭವಿಸಿದೆ. ಈ ಗುಂಡಿಯನ್ನು ಮುಚ್ಚಿಸದೇ ಇರುವ ಬಗ್ಗೆ ಸಾರ್ವಜನಿಕರು ಹೆದ್ದಾರಿ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪಿಡಬ್ಲ್ಯೂಡಿ ಇಲಾಖೆಗೆ ಮಾಹಿತಿ 
ಇಲ್ಲಿ ಉಂಟಾಗಿರುವ ಗುಂಡಿಯ ಬಗ್ಗೆ ಈಗಾಗಲೇ ಕೆದಂಬಾಡಿ ಗ್ರಾಮ ಪಂಚಾಯತ್ ಸದಸ್ಯ ರತನ್ ರೈ ಕುಂಬ್ರರವರು ಪಿಡಬ್ಲ್ಯೂಡಿ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಈ ರಸ್ತೆ ಗುಂಡಿಯನ್ನು ಮುಚ್ಚಿಸಿ ಮುಂದೆ ನಡೆಯುವ ಅನಾಹುತಗಳನ್ನು ತಪ್ಪಿಸುವಂತೆ ಅವರು ವಿನಂತಿಸಿಕೊಂಡಿದ್ದಾರೆ. ಇನ್ನಾದರೂ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಗುಂಡಿಯನ್ನು ಮುಚ್ಚಿಸುತ್ತಾರೋ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here