ಪುತ್ತೂರು: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಜಿಲ್ಲೆಯ ಸಾಧಕರಿಗೆ ನೀಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲೆಯ ಹೆಸರಾಂತ ಸ್ಯಾಕ್ಸೋಫೋನ್ ಕಲಾವಿದರಲ್ಲಿ ಒಬ್ಬರಾಗಿರುವ ಎಂ.ವೇಣುಗೋಪಾಲ್ ಪುತ್ತೂರು ಸ್ವೀಕರಿಸಿದರು.
7ನೇ ತರಗತಿಯಲ್ಲಿರುವಾಗಲೇ ಸ್ಯಾಕ್ಸೋಫೋನ್ ಕಛೇರಿ ನೀಡಲು ಪ್ರಾರಂಭಿಸಿದ ಇವರು ತಾಲೂಕಿನ ಹಲವಾರು ದೇವಸ್ಥಾನ ಮತ್ತು ದೈವಸ್ಥಾನಗಳಲ್ಲಿ ಕಲಾ ಸೇವೆ ಮಾಡುತ್ತಿದ್ದಾರೆ. ಆರಂಭದಲ್ಲಿ ಸ್ಯಾಕ್ಸೋಫೋನ್ ವಾದನವನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಪಿ.ಕೆ ಗಣೇಶ್ ಇವರಿಂದ ಅಭ್ಯಸಿಸಿರುತ್ತಾರೆ. ನಂತರ ವಿದ್ವಾನ್ ಕಾಂಚನ ಈಶ್ವರ ಭಟ್ (ಸುನಾದ ಸಂಗೀತ ಕಲಾಶಾಲೆಯ ಗುರುಗಳು) ಇವರ ಬಳಿ ಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾರೆ.
ದಕ್ಷಿಣ ಕನ್ನಡದ ಗಂಡುಕಲೆ ಯಕ್ಷಗಾನದಲ್ಲಿ ಆಸಕ್ತಿ ಇದ್ದ ಇವರು ದಿ. ಶ್ರೀಧರ ಭಂಡಾರಿ ಪುತ್ತೂರು ಇವರ ಶಿಷ್ಯರೂ ಹೌದು. ಕೊರೋನಾ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್‌ಗಳಿಗೆ ಕೃತಜ್ಞತೆ ಸಲ್ಲುವ ವಂದೇಮಾತರಂ ಎಂಬ ಕವರ್ ಸಾಂಗ್ ಮಾಡಿದ್ದಾರೆ. ಹಾಗೂ ಇನ್ನೂ ಕೆಲವಾರು ಕವರ್ ಸಾಂಗ್‌ಗಳಿಗೆ ಸ್ಯಾಕ್ಸೋಫೋನ್ ನುಡಿಸಿದ್ದಾರೆ.
ಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತ ಸೀನಿಯರ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೃಷ್ಣನಗರ ಶಾಲೆ ಪುತ್ತೂರು, ಪ್ರೌಢಶಾಲಾ ಶಿಕ್ಷಣವನ್ನು ಸರಕಾರಿ ಜೂನಿಯರ್ ಕಾಲೇಜು ಕೊಂಬೆಟ್ಟು, ಪುತ್ತೂರು ಮತ್ತು ಪದವಿಯನ್ನು ವಿವೇಕಾನಂದ ಮಹಾವಿದ್ಯಾಲಯ ನೆಹರುನಗರ ಪುತ್ತೂರು ಇಲ್ಲಿ ಮಾಡಿರುತ್ತಾರೆ.
ಇವರ ತಂದೆ ಉಮೇಶ್ ದೇವಾಡಿಗ(ಸ್ಯಾಕ್ಸೋಫೋನ್ ಮತ್ತು ಜಾನಪದ ನಾಗಸ್ವರ ಕಲಾವಿದರು) ತಾಯಿ ಸರಸ್ವತಿ, ಪತ್ನಿ ಹರ್ಷಿತ ದೇವಾಡಿಗ ಮತ್ತು ಮಗಳು ತಿಯಾಂಶಿ. ವಿ. ದೇವಾಡಿಗ ಇವರೊಂದಿಗೆ ಬನ್ನೂರು ಮೇಲ್ಮಜಲಿನಲ್ಲಿರುವ ಶ್ರೀಮಹಾ ನಿಲಯದಲ್ಲಿ ವಾಸವಾಗಿದ್ದಾರೆ.
ಹಲವಾರು ಕಡೆ ಸ್ಯಾಕ್ಸೋಫೋನ್ ಕಛೇರಿ ನಡೆಸಿ ಸನ್ಮಾನಗಳನ್ನು ಪಡೆದಿರುತ್ತಾರೆ.