ಹಿರೇಬಂಡಾಡಿ: ಸರಕಾರಿ ಪ್ರೌಢಶಾಲೆ ಹಿರೆಬಂಡಾಡಿ ಇಲ್ಲಿನ ಕುವೆಂಪು ಸಾಹಿತ್ಯ ಸಂಘದ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವವನ್ನು ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಆಚರಿಸಲಾಯಿತು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ರವೀಂದ್ರ ಪಟಾರ್ತಿಯವರು ರಾಷ್ಟ್ರಧ್ವಜಾರೋಹಣಗೈದರು. ಮುಖ್ಯ ಅತಿಥಿಯಾಗಿದ್ದ ಉದಯೋನ್ಮುಖ ಸಾಹಿತಿ, ಸುದಾನ ಶಿಕ್ಷಣ ಸಂಸ್ಥೆಯಲ್ಲಿ ಕೀ ಬೋರ್ಡ್ ತರಬೇತಿ ನೀಡುತ್ತಿರುವ ಅಶ್ವೀಜಶ್ರೀಧರ್‌ರವರು ಕನ್ನಡ ಬಾವುಟ ಅರಳಿಸಿದರು. ಬಳಿಕ ಮಾತನಾಡಿದ ಅವರು, ಭಾಷೆ ಉಳಿಯಬೇಕಾದರೆ ಅದರೊಂದಿಗೆ ಬೆರೆಯಬೇಕು ಎಂದು ಹೇಳಿ ಕವಿಯಾಗುವ ಬಗೆಯನ್ನು ಮಕ್ಕಳಿಗೆ ಮನಮುಟ್ಟುವಂತೆ ವಿವರಿಸಿ ಪ್ರೇರೇಪಿಸಿದರು. ನಂತರ ಕವಿತಾ ಅಡೂರವರ ಕವನವನ್ನು ಸುಶ್ರಾವ್ಯವಾಗಿ ಹಾಡಿ ಮನರಂಜಿಸಿದರು. ಇವರಿಗೆ ಮುಖ್ಯಗುರು ಶ್ರೀಧರ್ ಭಟ್‌ರವರು ಹಾರ್ಮೋನಿಯಂನಲ್ಲಿ ಸಹಕಾರ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕುವೆಂಪು ಸಾಹಿತ್ಯ ಸಂಘದ ಅಧ್ಯಕ್ಷೆ ಆಯಿಷತ್ ಮಸ್ರೀಫಾ ಕನ್ನಡವನ್ನು ನಾವು ಬಳಸಿದರೆ, ಹೊಸಬರಿಗೆ ಕಲಿಸಿದರೆ ಉಳಿಸಬಹುದು ಎಂದರು.
ವಿವಿಧ ಸ್ಪರ್ಧೆ/ಬಹುಮಾನ ವಿತರಣೆ:
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಭಾಷಣ, ಗೀತ ಗಾಯನ, ಭಿತ್ತಿಪತ್ರಿಕೆ ತಯಾರಿಯ ಸ್ಪರ್ಧೆಯನ್ನು ನಡೆಸಲಾಯಿತು. ಗಣಿತ ಶಿಕ್ಷಕಿ ಉಷಾಕಿರಣರವರು ಕನ್ನಡ ನಾಡುನುಡಿ ಕುರಿತಾದ ರಸಪ್ರಶ್ನೆಗಳನ್ನು ಕೇಳಿದರು. ವಿಜೇತರಿಗೆ ಕನ್ನಡ ಶಿಕ್ಷಕಿಯವರು ಬಹುಮಾನ ನೀಡಿದರು. ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ವಿದ್ಯಾರ್ಥಿಗಳಿಗೂ ಶಾಲಾ ವತಿಯಿಂದ ಬಹುಮಾನ ನೀಡಿ ಅಭಿನಂದಿಸಲಾಯಿತು. ಅಂಜಲಿ ಮತ್ತು ಲಿಖಿತಾ ಸ್ಪರ್ಧಾ ವಿಜೇತರ ಹೆಸರು ವಾಚಿಸಿದರು.
ಕನ್ನಡ ಶಿಕ್ಷಕಿ ಮಲ್ಲಿಕಾ ಐ ರವರು ಅತಿಥಿ ಅಶ್ವೀಜ ಅವರನ್ನು ಪರಿಚಯಿಸಿ ಕನ್ನಡದ ಶ್ರೇಷ್ಠತೆಯನ್ನು ಬಣ್ಣಿಸಿದರು. ಶಾಲಾ ಮುಖ್ಯಗುರು ಶ್ರೀಧರ ಭಟ್ ಸ್ವಾಗತಿಸಿ ಮಾತನಾಡಿ, ಕನ್ನಡ ಸಾಹಿತ್ಯವನ್ನು ಓದಿ, ಬರೆದು ಕನ್ನಡ ಭಾಷೆಯನ್ನು ಉಳಿಸೋಣ ಎಂದು ಹೇಳಿದರು. ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕಿ ಲಲಿತಾ ಕೆ., ವಂದಿಸಿದರು. ಶಿಕ್ಷಕರಾದ ವಸಂತ್ ಕುಮಾರ್, ಮನೋಹರ ಎಂ., ಆರತಿ ವೈ.ಡಿ., ಶ್ರೀರಕ್ಷಾ ಸಹಕರಿಸಿದರು. ತದನಂತರ ಕುವೆಂಪು ಸಾಹಿತ್ಯ ಸಂಘದ ಅಧ್ಯಕ್ಷೆ ಆಯಿಷತ್ ಮಸ್ರೀಫಾರವರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಚಂದ್ರಿಕಾ ಕಾರ್ಯಕ್ರಮ ನಿರೂಪಿಸಿದರು. ಸಿಹಿತಿಂಡಿ, ಲಘು ಉಪಾಹಾರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.