ಫಿಲೋಮಿನಾ ಪ ಪೂ ಕಾಲೇಜಿನಲ್ಲಿ ‘ಸೈನ್ಸಿಯಾ’ ಉದ್ಘಾಟನೆ

0

ಪುತ್ತೂರು: ಸಂತ ಫಿಲೋಮಿನಾ ಪದವಿ  ಪೂರ್ವ ಕಾಲೇಜು, ವಿಜ್ಞಾನ ವಿಭಾಗ ಹಾಗೂ ವಿಜ್ಞಾನ ವೇದಿಕೆ ಇದರ ಸಹಯೋಗದೊಂದಿಗೆ ನ.4 ರಂದು ಕಾಲೇಜು ಸಭಾಂಗಣದಲ್ಲಿ ‘ಸೈನ್ಸಿಯಾ’  ಇದರ ಉದ್ಘಾಟನೆ ನಡೆಯಿತು.


        ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಪುತ್ತೂರಿನ ಪ್ರಸಿದ್ಧ ದಂತ ವೈದ್ಯರು ಹಾಗೂ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರು ಆಗಿರುವ ಡಾ. ಶ್ರೀ ಪ್ರಕಾಶ್ ಬಿ ಮಾತನಾಡಿ,  ವಿಜ್ಞಾನವು ನಮ್ಮ ದೈನಂದಿನ ದಿನಚರಿಯಲ್ಲಿ ಹಾಸು ಹೊಕ್ಕಾಗಿದೆ. ಈ ವಿಜ್ಞಾನವನ್ನು ನಾವು ಅರ್ಥಮಾಡಿಕೊಂಡಾಗ ನಮ್ಮ ಆರೋಗ್ಯ ಕೂಡಾ ಸಮ ಸ್ಥಿತಿಯಲ್ಲಿ ಇರುತ್ತದೆ. ಜೀವನದಲ್ಲಿ ಆರೋಗ್ಯಕ್ಕಿಂತ ಮುಖ್ಯವಾದುದು ಬೇರೆ ಯಾವುದೂ  ಇಲ್ಲವಾಗಿದ್ದು, ಇಂದು ನಮ್ಮ ಆರೋಗ್ಯ ಸಂಪೂರ್ಣ ವಿಜ್ಞಾನವನ್ನು ಅವಲಂಬಿಸಿದೆ. ವಿದ್ಯಾರ್ಥಿಗಳು ವಿಜ್ಞಾನವನ್ನು ಮುಕ್ತ ಮನಸ್ಸಿನಿಂದ ಆಸ್ವಾದಿಸಬೇಕೆಂದು ಎಂದು ಹೇಳಿದರು.


      ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಜೀವನದಲ್ಲಿ ಐದು ವಿಷಯಗಳು ಅತ್ಯಂತ ಮುಖ್ಯವಾದುದು. ಬೌದ್ಧಿಕ ವಿಕಸನ, ಭಾವನಾತ್ಮಕ ಸಂಬಂಧ, ಸಾಮಾಜಿಕ, ದೈಹಿಕ ಮತ್ತು ಆಧ್ಯಾತ್ಮಿಕ ಜೀವನ ಇವು ಜೀವನದ ಅವಿಭಾಜ್ಯ ಅಂಗಗಳು. ಇವುಗಳಲ್ಲಿ ಪ್ರತಿಯೊಂದರಲ್ಲೂ ವಿಜ್ಞಾನ ಹಾಸುಹೊಕ್ಕಾಗಿದ್ದು, ಇವುಗಳನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ.  ಮುಖ್ಯವಾಗಿ ವಿದ್ಯಾರ್ಥಿ ಜೀವನದಲ್ಲಿ ನಾವು ವೈಜ್ಞಾನಿಕ ಮನೋಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.


 ವೇದಿಕೆಯಲ್ಲಿ ವಿಜ್ಞಾನ ವಿಭಾಗದ ಡೀನ್ ಯಶ್ವಂತ್ ಎಂ ಡಿ, ಹಾಗೂ ವಿಜ್ಞಾನ ವೇದಿಕೆಯ ನಿರ್ದೇಶಕರಾದ ರೋಹಿತ್ ಕುಮಾರ್ ಟಿ ಹಾಗೂ ಆಶಾಲತಾ ಕೆ ಉಪಸ್ಥಿತರಿದ್ದರು.
  ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿಗಳಾದ ಆಯಿಷಾ ಸಲ್ಮೀ ಸ್ವಾಗತಿಸಿ, ಹಲ ಫಾತಿಮಾ ವಂದಿಸಿ, ತಂಬ್ರೀನ್ ದಿಶಾನ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here