ಪುತ್ತೂರು: ರಾತ್ರಿ ಸುಮಾರು 8.30ರ ಸಮಯಕ್ಕೆ ನನ್ನ ಮನೆಗೆ ಚಡ್ಡಿ ಗ್ಯಾಂಗ್ ದರೋಡೆಕೋರರು ಬಂದಿದ್ದಾರೆ. ತಲವಾರು ತೋರಿಸಿ ಬೆದರಿಸಿ, ಹಣ, ಒಡವೆ ಕೇಳಿದ್ದಾರೆ. ಗ್ಯಾಂಗ್ನಲ್ಲಿ ನಾಲ್ವರು ಇದ್ದರು ನಾನು ಕಿಟಕಿಯ ಮೂಲಕ ಅವರ ಫೋಟೋ ತೆಗೆದಿದ್ದೇನೆ ಎಂದೇಳಿಕೊಂಡು ಮಹಿಳೆಯೋರ್ವರು ಆ ಫೋಟೋವನ್ನು ವೈರಲ್ ಮಾಡುವ ಕುತ್ಯಾತ ಚಡ್ಡಿ ಗ್ಯಾಂಗ್ ದರೋಡೆಕೋರರೇ ಬಂದಿದ್ದಾರೆ ಎನ್ನುವ ಹಾಗೆ ಕಥೆ ಕಟ್ಟಿ ಜನರಲ್ಲಿ ಭಯ ಹುಟ್ಟಿಸಿದ ಘಟನೆ ಕೆಯ್ಯೂರಿನಲ್ಲಿ ನ.6 ರಂದು ನಡೆದಿದೆ.
ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್ಪೆಕ್ಟರ್ ರವಿ.ಬಿ.ಎಸ್.ರವರು ಮಹಿಳೆಯ ಮೊಬೈಲ್ ಫೋನ್ ಪರಿಶೀಲಿಸಿದಾಗ ಇದೊಂದು ಕಟ್ಟು ಕಥೆ ಆಗಿದ್ದು ಮಹಿಳೆ ಕಳಿಸಿದ ಫೋಟೋಗಳು 2 ವರ್ಷಗಳ ಹಿಂದೆ ಮಳೆಯಾಲಂನ ಮನೋರಮಾ ನ್ಯೂಸ್ನಲ್ಲಿ ಪ್ರಸಾರಗೊಂಡ ಕೊಟ್ಟಾಯಂನಲ್ಲಿ ನಡೆದ ಒಂದು ಸ್ಟೋರಿಯಲ್ಲಿ ಬರುವ ಫೋಟೋಗಳಾಗಿವೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.
ಡಿವೈಎಸ್ಪಿ ಅರುಣ್ ನಾಗೇಗೌಡ, ಸಂಪ್ಯ ಠಾಣಾ ತನಿಖಾ ವಿಭಾಗದ ಎಎಸ್ಐ ಸುಷ್ಮಾ ಭಂಡಾರಿ ಹಾಗೂ ಸಿಬ್ಬಂದಿಗಳು, ಕೆಯ್ಯೂರು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರುಗಳು ಬಂದು ಪರಿಶೀಲನೆ ನಡೆಸಿದ್ದಾರೆ.
ಕೇರಳದಿಂದ ಬಂದ ಕುಟುಂಬ
ಚಡ್ಡಿ ಗ್ಯಾಂಗ್ನ ಕಥೆ ಕಟ್ಟಿದ ಮಾರ್ಗರೇಟ್ ಎಂಬವರು ಮೂಲತಃ ಕೇರಳ ಮೂಲದವರಾಗಿದ್ದಾರೆ. ಇವರು ತನ್ನ ಗಂಡ ಸೈಂಟ್ ಜಾರ್ಜ್ ಹಾಗೂ ಮಗುವಿನೊಂದಿಗೆ ಕೆಯ್ಯೂರು ಗ್ರಾಮದ ಸಣಂಗಳದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಸಣಂಗಳದ ಬಾತೀಷ ಎಂಬವರಿಗೆ ಸೇರಿದ ಮನೆಯಲ್ಲಿ ಬಾಡಿಗೆಗೆ ಪಡೆದುಕೊಂಡು ಕಳೆದ 40 ದಿನಗಳಿಂದ ವಾಸವಿದ್ದಾರೆ. ಜಾರ್ಜ್ರವರು ರಬ್ಬರ್ ಟ್ಯಾಪಿಂಗ್ ಹಾಗೂ ರಬ್ಬರ್ ಹಾಲು ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ.
ಯೂಟ್ಯೂಬ್ನಲ್ಲಿ ಬಂದಿದ್ದ ವಿಡಿಯೋದಿಂದ ಫೋಟೋ ತೆಗಿದಿದ್ದರು!
ಮಾರ್ಗರೇಟ್ರವರ ಮೊಬೈಲ್ ಫೋನ್ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಅವರು ಯೂಟ್ಯೂಬ್ ಹೆಚ್ಚಾಗಿ ನೋಡುತ್ತಿರುವುದು ಅದರಲ್ಲೂ ಕ್ರೈಂಗೆ ಸಂಬಂಧಿಸಿದ ವಿಡಿಯೋಗಳನ್ನೆ ಹೆಚ್ಚಾಗಿ ನೋಡುತ್ತಿರುವುದು ತಿಳಿದುಬಂದಿದೆ. ಚಡ್ಡಿ ಗ್ಯಾಂಗ್ನ ಕಥೆಯೂ ಇದೇ ರೀತಿ ಆಗಿದ್ದು ಮಳೆಯಾಲಂನ ಮನೋರಮಾ ನ್ಯೂಸ್ನಲ್ಲಿ 2 ವರ್ಷಗಳ ಹಿಂದೆ ಪ್ರಸಾರಗೊಂಡ ವೀಡಿಯೋ ಸ್ಟೋರಿಯೊಂದರಲ್ಲಿ ಬರುವ ದೃಶ್ಯಗಳಿಂದ ಈ ಫೋಟೋಗಳನ್ನು ಸ್ಕ್ರೀನ್ ಶಾಟ್ ಮೂಲಕ ತೆಗೆದಿದ್ದಾರೆ. ಆ ಫೋಟೋವನ್ನು ಮೊದಲಿಗೆ ಮನೆಯ ಓನರ್ಗೆ ಕಳುಹಿಸಿ ಮನೆಗೆ ದರೋಡೆಕೋರರು ಬಂದಿದ್ದಾರೆ ಎಂದು ತಿಳಿಸಿದ್ದಾರೆ. ತಕ್ಷಣವೇ ಮನೆಯ ಓನರ್ ಬಾತೀಷರವರು ಮನೆಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾರ್ಗರೇಟ್ರವರು ತೋರಿಸಿದ ಫೋಟೋದ ಮೇಲೆ ಬಾತೀಷರವರಿಗೂ ಸಂಶಯ ಮೂಡಿದ್ದು ಇದರಿಂದಾಗಿ ನಾನು ಪೊಲೀಸರಿಗೆ ವಿಷಯ ತಿಳಿಸಲಿಲ್ಲ, ಏಕೆಂದರೆ ಈ ಹಿಂದೆಯೂ ಮಾರ್ಗರೇಟ್ರವರು ಹಾವು ಕಚ್ಚಿದೆ ಎಂದು ಹೇಳಿಕೊಂಡಿದ್ದರು ಆಗ ನನ್ನ ಮನೆಯವರು ಹೋಗಿ ನೋಡಿದಾಗ ಹಾವು ಕಚ್ಚಿದ ಬಗ್ಗೆ ಯಾವುದೇ ಗಾಯ ಕಾಣಲಿಲ್ಲ ಇದರಿಂದ ನಾನು ಚಡ್ಡಿ ಗ್ಯಾಂಗ್ ಬಗ್ಗೆಯೂ ಪೊಲೀಸರಿಗೆ ಮಾಹಿತಿ ನೀಡಲು ಹೋಗಿಲ್ಲ ಎಂದು ಬಾತೀಷರವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಪೊಲೀಸ್, ಮಾಧ್ಯಮದವರ ಮೇಲೂ ರೇಗಾಡಿದ ಮಹಿಳೆ…!?
ಮಾರ್ಗರೇಟ್ರವರು ಹೀಗ್ಯಾಕೆ ಮಾಡಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದ ವೇಳೆಯೂ ಮಾರ್ಗರೇಟ್ರವರು ಇದೊಂದು ಕಟ್ಟು ಕಥೆ ಎಂಬುದನ್ನು ಹೇಳಲು ಹಿಂದೇಟು ಹಾಕುತ್ತಿದ್ದು ನನ್ನ ಮನೆಗೆ ದರೋಡೆಕೋರರು ಬಂದಿದ್ದಾರೆ ಎಂದೇ ರಾದ್ಧಾಂತ ಎಬ್ಬಿಸಿದ್ದಾರೆ. ಸುದ್ದಿ ಪ್ರಸಾರ ಮಾಡಲು ಸ್ಥಳಕ್ಕೆ ತೆರಳಿದ ಮಾಧ್ಯಮದವರ ಮೇಲೂ ರಾದ್ಧಾಂತ ಮಾಡಿದ ಮಹಿಳೆ ನನ್ನ ಅನುಮತಿ ಇಲ್ಲದೆ ವೀಡಿಯೋ ಮಾಡಬಾರದು ಎಂದು ಕ್ಯಾಮರಾ ಎಳೆಯಲು ಮುಂದಾದ ಘಟನೆಯೂ ನಡೆದಿದೆ. ಮಹಿಳೆಯ ಮೊಬೈಲ್ ವಶಕ್ಕೆ ಪಡೆದುಕೊಂಡ ಪೊಲೀಸರ ಮೇಲೂ ರೇಗಾಡಿದ ಮಹಿಳೆ ನನ್ನ ಮೊಬೈಲ್ ಕೊಡಿ,ನಾನು ಕೇರಳ ಪೊಲೀಸರನ್ನು ಇಲ್ಲಿಗೆ ಕರೆಸುತ್ತೇನೆ ಎಂಬಿತ್ಯಾದಿ ಮಾತುಗಳೊಂದಿಗೆ ರೇಗಾಡಿದ ಘಟನೆಯೂ ನಡೆಯಿತು.
ಇದೊಂದು ಕಟ್ಟು ಕಥೆ: ರವಿ.ಬಿ.ಎಸ್, ಸರ್ಕಲ್ ಇನ್ಸ್ಪೆಕ್ಟರ್
ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್ಪೆಕ್ಟರ್ ರವಿ.ಬಿ.ಎಸ್.ರವರು ಮೊದಲಿಗೆ ಮಹಿಳೆಯ ಮೊಬೈಲ್ ಪಡೆದುಕೊಂಡು ಪರಿಶೀಲನೆ ನಡೆಸಿದರು. ಈ ವೇಳೆ ಮಹಿಳೆ ಶೇರ್ ಮಾಡಿಕೊಂಡ ಫೋಟೋಗಳು ಅಸಲಿ ಅಲ್ಲ ಎಂಬುದು ತಿಳಿದು ಬಂದಿದೆ. ಇದೊಂದು ಸಂಪೂರ್ಣ ಕಟ್ಟು ಕಥೆ ಆಗಿದ್ದು, ಮಹಿಳೆ ಹಂಚಿಕೊಂಡ ಫೋಟೋಗಳು ಕೊಟ್ಟಾಯಂನಲ್ಲಿ ನಡೆದ ಒಂದು ವಿಡಿಯೋ ಸ್ಟೋರಿಯ ಫೋಟೋಗಳಾಗಿವೆ. ಕೆಯ್ಯೂರು ಸಣಂಗಳಕ್ಕೆ ಚಡ್ಡಿ ಗ್ಯಾಂಗ್ನ ದರೋಡೆಕೋರರು ಬಂದಿಲ್ಲ. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಸರ್ಕಲ್ ಇನ್ಸ್ಪೆಕ್ಟರ್ ರವಿ.ಬಿ.ಎಸ್.ರವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಚಡ್ಡಿ ಗ್ಯಾಂಗ್ ದರೋಡೆಕೋರರು ಗ್ರಾಮಕ್ಕೆ ಬಂದಿಲ್ಲ- ಶರತ್ ಕುಮಾರ್ ಮಾಡಾವು, ಗ್ರಾಪಂ ಅಧ್ಯಕ್ಷರು
ಗ್ರಾಮದ ಸಣಂಗಳದ ಮಾರ್ಗರೇಟ್ ಎಂಬವರ ಮನೆಗೆ ಚಡ್ಡಿ ಗ್ಯಾಂಗ್ ದರೋಡೆಕೋರರು ಬಂದಿದ್ದಾರೆ ಎಂದು ಅವರು ಫೋಟೋ ಹಂಚಿಕೊಂಡಿದ್ದು ಈ ಬಗ್ಗೆ ಪೊಲೀಸ್ ತನಿಖೆ ವೇಳೆ ಇದೊಂದು ಕಟ್ಟು ಕಥೆ ಎಂದು ತಿಳಿದು ಬಂದಿದೆ. ಕೆಯ್ಯೂರು ಗ್ರಾಮಕ್ಕೆ ಯಾವುದೇ ಚಡ್ಡಿ ಗ್ಯಾಂಗ್ನ ದರೋಡೆಕೋರರು ಬಂದಿಲ್ಲ. ಯಾರೂ ಕೂಡ ಭಯಪಡುವ ಅಗತ್ಯವಿಲ್ಲ. ಮಹಿಳೆಯೋರ್ವರು ಕಟ್ಟಿದ ಕಟ್ಟು ಕಥೆಯನ್ನು ಬಯಲು ಮಾಡಿದ ಪೊಲೀಸ್ ಇಲಾಖೆಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಯಾರೂ ಕೂಡ ಈ ರೀತಿಯಾಗಿ ಜನರನ್ನು ಭಯಭೀತರನ್ನಾಗಿಸುವ ಕಟ್ಟು ಕಥೆಗಳನ್ನು ಕಟ್ಟಬಾರದು ಎಂದು ಕೆಯ್ಯೂರು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರು ಮನವಿ ಮಾಡಿಕೊಂಡಿದ್ದಾರೆ.
ಎಂಚಿನ ಪೂರಾ ಮನ್ಪುವೆರ್ ಮಾರ್ರೆ…!
ಇಡೀ ಕಥೆಯನ್ನು ಗಮನಿಸಿದಾಗ ಹೀಗೂ ಕಥೆ ಕಟ್ಟಬಹುದೇ? ಅದೂ ಕೂಡ ಖತರ್ನಕ್ ಚಡ್ಡಿ ಗ್ಯಾಂಗ್ನ ದರೋಡೆಕೋರರೇ ಮನೆಗೆ ಬಂದು ತಲವಾರು ತೋರಿಸಿ ಬೆದರಿಸಿದ್ದಾರೆ ಎಂಬಿತ್ಯಾದಿ ಕಥೆ ಯಾಕಾಗಿ ಕಟ್ಟಿರಬಹುದು? ಇದರಿಂದ ಆ ಮಹಿಳೆಗೆ ಏನು ಲಾಭ ಇದೆ? ಎಂಬಿತ್ಯಾದಿ ಹಲವು ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತದೆ. ಸೇರಿರುವ ಜನರು ಮಾತ್ರ ಎಂಚಿನ ಪೂರಾ ಮನ್ಪುವೆರ್ ಮಾರ್ರೆ.. ಎಂದೇಳುತ್ತಿದ್ದದ್ದು ಕೇಳಿ ಬಂತು.