ಉಪ್ಪಿನಂಗಡಿ: ಆಟೋ ಚಾಲಕರಿಗೆ ಕುಟುಂಬವಿದೆ. ಅವರ ಮನೆಯಲ್ಲಿಯೂ ಮಡದಿ ಮಕ್ಕಳಿದ್ದಾರೆ. ಎಲ್ಲರಂತೆ ಅವರಿಗೂ ಹಸಿವಿದೆ. ಆತ್ಮಗೌರವವಿದೆ. ಕರ್ತವ್ಯ ನಿಮಿತ್ತ ಪ್ರಯಾಣಿಕರನ್ನು ಅವರು ಬಯಸಿದ ಊರಿಗೆ ಕರೆದೊಯ್ಯಲು ಮುಂದಾದರೆ, ಕರ್ತವ್ಯ ವ್ಯಾಪ್ತಿಯನ್ನು ಮೀರಿದ ಆಪಾದನೆಯಡಿ ದಂಡವಿಧಿಸುವ ಮೂಲಕ ಆಟೋ ಚಾಲಕರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಆದ್ದರಿಂದ ಆಟೋ ಚಾಲಕರ ಈಗಿರುವ ತಾಲೂಕು ವ್ಯಾಪ್ತಿಯನ್ನು ಸಡಿಲಿಸಿ ಜಿಲ್ಲಾ ವ್ಯಾಪ್ತಿಗೆ ವಿಸ್ತರಿಸಬೇಕೆಂದು ಉಪ್ಪಿನಂಗಡಿಯ ನೇತ್ರಾವತಿ ಆಟೋ ಚಾಲಕ ಮಾಲಕ ಸಂಘವು ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಈ ಸಂಬಂಧ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಫಾರೂಕ್ ಜಿಂದಗಿ, ನೆರೆಯ ಕೇರಳದಲ್ಲಿ ರಾಜ್ಯವ್ಯಾಪಿ ಸೇವೆ ಸಲ್ಲಿಸಲು ಆಟೋ ಚಾಲಕರಿಗೆ ಅನುಮತಿ ಕಲ್ಪಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ಚಾಲಿತ ಆಟೋ ಚಾಲಕರಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಲು ಅವಕಾಶವಿದೆ. ಆದರೆ ಪೆಟ್ರೋಲಿಯಂ ಹಾಗೂ ಗ್ಯಾಸ್ ಉತ್ಪನ್ನವನ್ನಾಧರಿಸಿದ ಆಟೋ ಚಾಲಕರಿಗೆ ಕೇವಲ ತಾಲೂಕು ವ್ಯಾಪ್ತಿಯಡಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿರುವುದು ತಾರತಮ್ಯದ ಪರಮಾವಧಿಯಾಗಿದೆ. ಉಪ್ಪಿನಂಗಡಿಯಂತಹ ಪ್ರದೇಶದ ನಾಲ್ಕೈದು ಕಿ.ಮೀ. ವ್ಯಾಪ್ತಿಂಯೊಳಗೆ ಮೂರು ತಾಲೂಕು ಲಭಿಸುತ್ತದೆ. ಉಪ್ಪಿನಂಗಡಿಗೆ ಬಂದ ವ್ಯಕ್ತಿಯೋರ್ವ ಬದಲಿ ವಾಹನ ವ್ಯವಸ್ಥೆ ಲಭಿಸದೆ ಹೋದಾಗ ಆಟೋ ಸೇವೆಯನ್ನು ಬಯಸುತ್ತಾನೆ. ಆತನನ್ನು ಆತನ ಮನೆಗೆ ತಲುಪಿಸಲು ಮುಂದಾದಾಗಲೆಲ್ಲಾ ತಾಲೂಕು ಗಡಿ ವ್ಯಾಪ್ತಿ ಉಲ್ಲಂಘನೆಯಾಗುತ್ತಿರುತ್ತದೆ. ಈ ತಪ್ಪಲ್ಲದ ತಪ್ಪಿಗೆ ದಿನ ನಿತ್ಯ ನೂರಾರು ರೂಪಾಯಿ ದಂಡ ಪಾವತಿಸಿದರೆ ಬಡಪಾಯಿ ಆಟೋ ಚಾಲಕರು ಬದುಕುವುದು ಸಾಧ್ಯವೇ? ಸಂಪಾದಿಸಿದ ಹಣವನ್ನೆಲ್ಲಾ ದಂಡವಾಗಿ ಪಾವತಿಸುವಂತಾದರೆ ಮಡದಿ ಮಕ್ಕಳ ಹಸಿವು ನೀಗಿಸುವುದಾದರೂ ಹೇಗೆ? ಸ್ವಾಭಿಮಾನದ ಸ್ವಾವಲಂಬಿ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು? ಎಂದು ಅಳಲು ತೋಡಿಕೊಂಡರಲ್ಲದೆ, ನಮ್ಮ ನಮ್ಮ ಕಾರ್ಯವ್ಯಾಪ್ತಿಯನ್ನು ಕೇಂದ್ರೀಕರಿಸಿ ಅನ್ಯ ತಾಲೂಕಿನ ಪ್ರಯಾಣಿಕರಿಗೆ ಸೇವೆ ಒದಗಿಸುವ ಅವಕಾಶವನ್ನು ಆಟೋ ಚಾಲಕರಿಗೆ ಕಾನೂನು ಬದ್ದವಾಗಿ ನೀಡಬೇಕು. ಅದಕ್ಕಾಗಿ ಈಗ ಇರುವ ತಾಲೂಕು ವ್ಯಾಪ್ತಿಯನ್ನು ಸಡಿಲಿಸಿ ಜಿಲ್ಲಾ ವ್ಯಾಪ್ತಿಗೆ ವಿಸ್ತರಿಸಬೇಕು ಆಗ್ರಹಿಸಿದರು ಹಾಗೂ ಈ ಸಂಬಂಧ ರಾಜ್ಯದ ಮುಖ್ಯಮಂತ್ರಿಗಳು, ಸಾರಿಗೆ ಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಎಲ್ಲಾ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಮಾನವೀಯ ನೆಲೆಯಲ್ಲಿ ನಮ್ಮ ಮನವಿಯನ್ನು ಪರಿಗಣಿಸಬೇಕೆಂದು ವಿನಂತಿಸಲಾಗಿದೆ ಎಂದು ವಿವರಿಸಿದರು.
ಪ್ರಸಕ್ತ ಇರುವ ನಿಯಮದಿಂದಾಗಿ ಉಪ್ಪಿನಂಗಡಿಯಿಂದ 300 ಮೀ. ತೂರದಲ್ಲಿ ಬೆಳ್ತಂಗಡಿ ತಾಲೂಕಿನ ಗಡಿ ಇದೆ. ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ನಿವಾಸಿಗೆ ನಾವು ಸೇವೆ ಸಲ್ಲಿಸಿದ ಸಮಯದಲ್ಲಿ ಯಾವುದೇ ಅವಘಡ ಸಂಭವಿಸಿದರೆ ನಾವು ತಾಲೂಕು ವ್ಯಾಪ್ತಿ ಉಲ್ಲಂಘಿಸಿದ ಅಪರಾಧವೆಸಗಿದ ಕಾರಣಕ್ಕೆ ವಿಮಾ ಸೌಲಭ್ಯದಿಂದ ವಂಚಿತರಾಗಬೇಕಾಗಿದೆ. ಮಾತ್ರವಲ್ಲದೆ ಸೇವೆ ಸಲ್ಲಿಸುವ ಸಮಯದಲ್ಲಿ ಇದೇ ನೆಪದಲ್ಲಿ ದಂಡವನ್ನು ಪಾವತಿಸಬೇಕಾಗಿ ಬರುತ್ತಿದ್ದು, ಆಟೋ ಚಾಲಕರ ಬದುಕು ತಲ್ಲಣಗೊಂಡಿದೆ ಎಂದ ಅವರು, ನಮಗೆ ಜಿಲ್ಲಾ ವ್ಯಾಪ್ತಿಯಲ್ಲಿ ಬಾಡಿಗೆ ನಡೆಸಬೇಕೆಂಬ ಇರಾದೆ ಇಲ್ಲ. ಆದರೆ ಇಲ್ಲಿಂದ ಅಲ್ಲಿಗೆ ನಮ್ಮ ಆಟೋ ರಿಕ್ಷಾಗಳು ತೆರಳಲು ಅವಕಾಶ ಕೊಡಿ. ಸರಕಾರ ಈ ತಾರತಮ್ಯ ನೀತಿಯನ್ನು ಸರಿಪಡಿಸದಿದ್ದಲ್ಲಿ ಇಡೀ ಜಿಲ್ಲೆಯ ಆಟೋ ಚಾಲಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟದ ಹಾದಿಯತ್ತ ಗಮನಹರಿಸಬೇಕಾಗಿದೆ ಎಂದು ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಶಬೀರ್ ಕೆಂಪಿ, ಉಪಾಧ್ಯಕ್ಷ ಅಣ್ಣಿಗೌಡ ಮಲ್ಲಕಲ್ಲು, ಕೋಶಾಧಿಕಾರಿ ಕಲಂದರ್ ಶಾಫಿ, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಮಜೀದ್, ಜೊತೆ ಕಾರ್ಯದರ್ಶಿಗಳಾದ ಸೇಸಪ್ಪ ನೆಕ್ಕಿಲು, ಅನ್ಸಾರ್ ಮಠ ಭಾಗವಹಿಸಿದ್ದರು.