ಮಂಗಳೂರು: ಮೂರು ವರ್ಷಗಳ ಹಿಂದೆ ಮಂಗಳೂರುನಲ್ಲಿ ಜಾರ್ಖಂಡ್ ಮೂಲದ ಎಂಟು ವರ್ಷ ಪ್ರಾಯದ ಬಾಲಕಿಯ ಅತ್ಯಾಚಾರಗೈದು ಕೊಲೆ ಮಾಡಿದ್ದ ಪ್ರಕರಣದ ವಿಚಾರಣೆ ನಡೆಸಿದ ದ.ಕ.ಜಿಲ್ಲಾ ಪೊಕ್ಸೋ ವಿಶೇಷ ನ್ಯಾಯಾಲಯ, ಪುತ್ತೂರಿನ ವಿವಿಧೆಡೆ ಕೂಲಿಕಾರ್ಮಿಕನಾಗಿಯೂ ಕೆಲಸ ಮಾಡಿಕೊಂಡಿದ್ದ ಮಧ್ಯಪ್ರದೇಶ ಮೂಲದ ವ್ಯಕ್ತಿ ಸಹಿತ ಮೂವರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮಂಗಳೂರು ನಗರ ಹೊರವಲಯದ ತಿರುವೈಲು, ಉಳಾಯಿಬೆಟ್ಟು ಬಳಿಯ ರಾಜ್‌ಟೈಲ್ಸ್ ಫ್ಯಾಕ್ಟರಿಯಲ್ಲಿ 2021ರ ನ.20ರಂದು ಕೃತ್ಯ ನಡೆದಿತ್ತು.ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈದು ಮೃತದೇಹವನ್ನು ಚರಂಡಿಗೆಸೆಯಲಾಗಿತ್ತು.ರಾಜ್‌ಟೈಲ್ಸ್ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿದ್ದ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಪನಾಯಿ ತೆಹ್ಸಿಲ್ ನಿವಾಸಿ ಜಯಸಿಂಗ್ ಆದಿವಾಸಿ (21ವ.),ಅದೇ ಜಿಲ್ಲೆಯ ಮುಕೇಶ್ ಸಿಂಗ್ (20ವ) ಹಾಗೂ ಜಾರ್ಖಂಡ್ ರಾಜ್ಯದ ರಾಂಚಿ ಜಿಲ್ಲೆಯ ಮನೀಶ್ ತಿರ್ಕಿ(33ವ)ಮರಣದಂಡನೆ ಶಿಕ್ಷೆಗೆ ಒಳಗಾದ ಅಪರಾಧಿಗಳು.
ಘಟನೆ ವಿವರ:
ರಾಜ್ ಟೈಲ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್‌ನ ಸಿಂಡೇಗಾ ಜಿಲ್ಲೆಯ ದಂಪತಿಯ ಎಂಟು ವರ್ಷ ಪ್ರಾಯದ ಬಾಲಕಿಯು 2021ರ ನ.20ರಂದು ಸಂಜೆಯ ವೇಳೆಗೆ ಕಾಣೆಯಾಗಿದ್ದರು.ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.ಸಾರ್ವಜನಿಕರ ಸಹಿತ ಬಾಲಕಿಯ ಹೆತ್ತವರು ಹುಡುಕಾಟ ನಡೆಸಿದಾಗ ರಾತ್ರಿ ವೇಳೆ ಫ್ಯಾಕ್ಟರಿ ಹಿಂಭಾಗದ ಚರಂಡಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿತ್ತು.ಬಾಲಕಿಯನ್ನು ಫ್ಯಾಕ್ಟರಿಯಲ್ಲಿದ್ದವರೇ ಅತ್ಯಾಚಾರಗೈದು ಕೊಲೆಗೈದಿದ್ದ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದರು.ಈ ಸಂದರ್ಭ ಶಂಕಿತ ಆರೋಪಿಗಳು ನಾಪತ್ತೆಯಾಗಿದ್ದರು.ನಂತರ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.ಜಯ್ ಸಿಂಗ್ ಆದಿವಾಸಿ, ಮುಕೇಶ್ ಸಿಂಗ್, ಮನೀಶ್ ತಿರ್ಕೆ ಕೃತ್ಯ ಎಸಗಿದ್ದರೆ, ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಮುನೀಮ್ ಸಿಂಗ್ ಇವರಿಗೆ ಸಹಕಾರ ನೀಡಿದ್ದ.
ರವಿವಾರ ಶಾಲೆಗೆ ರಜೆಯಿದ್ದ ಕಾರಣ ಟೈಲ್ಸ್ ಫ್ಯಾಕ್ಟರಿಯ ಹೊರಗಡೆ ಆಟವಾಡುತ್ತಿದ್ದ ಬಾಲಕಿಯನ್ನು ಚಾಕ್ಲೆಟ್ ಕೊಡಿಸುವ ಆಮಿಷವೊಡ್ಡಿದ ಆರೋಪಿಗಳು ಕಟ್ಟಿಗೆಯನ್ನು ರಾಶಿ ಹಾಕಿದ್ದ ಕೊಠಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದರು.ಅಲ್ಲಿ ಸಿಸಿ ಟಿವಿ ಇಲ್ಲದೇ ಇದ್ದ ಕಾರಣಕ್ಕಾಗಿ ಆರೋಪಿಗಳು ದುಷ್ಕೃತ್ಯವೆಸಗಲು ಅದೇ ಜಾಗವನ್ನು ಆಯ್ದುಕೊಂಡಿದ್ದರು.ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದು ನೋವಿನಿಂದ ಬಾಲಕಿ ಚೀರಾಡುತ್ತಿದ್ದರೂ ಬಿಡದೆ ಕೃತ್ಯ ಮುಂದುವರಿಸಿದ್ದರು.ಬಾಲಕಿಯ ಬೊಬ್ಬೆ ಹೊರಗಿನವರಿಗೆ ಕೇಳಿಸದಂತೆ ಆಕೆಯ ಬಾಯನ್ನು ಕೈಯಿಂದ ಮುಚ್ಚಿದ್ದರು.ಈ ವೇಳೆ ನಾಲ್ಕನೇ ಆರೋಪಿ ಮುನೀಮ್ ಸಿಂಗ್ ಹೊರಗಡೆಯಿಂದ ಯಾರಾದರೂ ಬರುತ್ತಾರೆಯೇ ಎಂದು ಬಾಗಿಲಿನಲ್ಲಿ ಕಾವಲು ಕಾಯುತ್ತಿದ್ದ.ಬಾಲಕಿಯು ಕೃತ್ಯದ ಬಗ್ಗೆ ಹೊರಗಡೆ ಬಂದು ಬಾಯಿಬಿಡಬಹುದು ಎಂದು ಹೆದರಿದ ಆರೋಪಿಗಳು ಕೃತ್ಯದ ಬಳಿಕ ಆಕೆಯ ಕುತ್ತಿಗೆ ಹಿಚುಕಿ ಕೊಲೆ ಮಾಡಿದ್ದ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿತ್ತು.ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಟೈಲ್ಸ್ ಫ್ಯಾಕ್ಟರಿಯಲ್ಲಿ ಉತ್ತರ ಭಾರತೀಯರೇ ಹೆಚ್ಚಾಗಿ ಕಾರ್ಮಿಕರಾಗಿದ್ದು ಫ್ಯಾಕ್ಟರಿ ಬಳಿಯೇ ಅವರಿಗೆ ಉಳಿದುಕೊಳ್ಳಲು ಕೊಠಡಿ ವ್ಯವಸ್ಥೆ ಮಾಡಿಕೊಡಲಾಗಿತ್ತು.ಅಕ್ಕಪಕ್ಕದಲ್ಲೇ ಕಾರ್ಮಿಕರೆಲ್ಲರ ಕೊಠಡಿಗಳು ಇರುತ್ತಿದ್ದುದರಿಂದ ಸಂತ್ರಸ್ತೆ ಎಲ್ಲರಿಗೂ ಪರಿಚಿತರಾಗಿದ್ದರು.ಬಾಲಕಿಯ ಹೆತ್ತವರು ಕೆಲಸಕ್ಕೆ ಹೋಗಿದ್ದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಆರೋಪಿಗಳು ಅದೇ ದಿನ ಕೆಲಸಕ್ಕೆ ರಜೆ ಹಾಕಿ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು ಅಮಾನುಷ ಕೃತ್ಯವೆಸಗಿದ್ದರು.
ಸಲುಗೆಯಿಂದಿದ್ದರು:
ಆರೋಪಿಗಳ ಪೈಕಿ ಮೂರನೇಯವನಾದ ಮನೀಶ್ ತಿರ್ಕಿ ರಾಜ್‌ಟೈಲ್ಸ್ ಫ್ಯಾಕ್ಟರಿಯಲ್ಲಿ 11 ತಿಂಗಳಿನಿಂದ ಕೂಲಿ ಕಾರ್ಮಿಕನಾಗಿದ್ದರೆ, 1ನೇ ಆರೋಪಿ ಜಯಸಿಂಗ್ ಮತ್ತು 2ನೇ ಆರೋಪಿ ಮುನೀಮ್ ಸಿಂಗ್ 3 ತಿಂಗಳಿನಿಂದ ಕೂಲಿ ಕಾರ್ಮಿಕರಾಗಿದ್ದರು.4ನೇ ಆರೋಪಿ ಮುಖೇಶ್ ಸಿಂಗ್ ಪೂತ್ತೂರಿನಲ್ಲಿ ಕೂಲಿ ಕಾರ್ಮಿಕನಾಗಿಯೂ ಕೆಲಸ ಮಾಡಿದ್ದ.ಕೃತ್ಯ ನಡೆದ ಹಿಂದಿನ ದಿನ ಈತ ಆರೋಪಿ ಮನೀಶ್ ತಿರ್ಕಿಯನ್ನು ಭೇಟಿಯಾಗಲೆಂದು ಮಂಗಳೂರಿಗೆ ಬಂದಿದ್ದ. ಆರೋಪಿಗಳಾದ ಜಯಸಿಂಗ್ ಮತ್ತು ಮನೀಶ್ ತಿರ್ಕಿ ಹೆಚ್ಚಾಗಿ ಒಂದೇ ರೂಮಿನಲ್ಲಿ ವಾಸ ಮಾಡುತ್ತಿದ್ದು, ಮೃತ ಬಾಲಕಿಯನ್ನು ಈ ಹಿಂದೆ ಅನೇಕ ಬಾರಿ ರೂಮಿಗೆ ಬರಮಾಡಿಕೊಂಡು ಹೆಚ್ಚಿಗೆ ಸಲುಗೆಯಿಂದ ಇದ್ದುದಲ್ಲದೇ ಬಾಲಕಿಗೆ ಚಾಕಲೇಟ್, ಚಿಕ್ಕಿ ನೀಡಿ ಈ ಹಿಂದೆಯೂ ಆಕೆಯ ಮೈಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿದ್ದ ಶಶಿಕುಮಾರ್ ಮಾಹಿತಿ ನೀಡಿದ್ದರು.
ನಾಲ್ಕೈದು ದಿನಗಳ ಹಿಂದೆ ಪ್ಲಾನಿಂಗ್:
ಕೃತ್ಯ ನಡೆಯುವ ನಾಲ್ಕೈದು ದಿನಗಳ ಹಿಂದೆ ಆರೋಪಿಗಳಾದ ಜಯಸಿಂಗ್, ಮುನೀಮ್ ಸಿಂಗ್ ಹಾಗೂ ಮನೀಶ್ ತಿರ್ಕಿ ಸಂಜೆ ವೇಳೆಗೆ ಜಯಸಿಂಗ್ ಮತ್ತು ಮನೀಶ್ ತಿರ್ಕಿ ರೂಮಿನಲ್ಲಿ ಮದ್ಯಪಾನ ಮಾಡುತ್ತಾ ಕೃತ್ಯದ ಕುರಿತು ಮಾತುಕತೆ ಮಾಡಿದ್ದರು.ಜಯಸಿಂಗ್ ಮತ್ತು ಮನೀಶ್ ತಿರ್ಕಿ ಬಾಲಕಿಯ ಬಗ್ಗೆ ಪ್ರಸ್ತಾಪಿಸಿದಾಗ ಮುನೀಮ್ ಸಿಂಗ್, ಸಿಕ್ಕಿದರೆ ನನಗೂ ಒಂದು ಚಾನ್ಸ್ ನೀಡಿ ಎಂದು ಮಾತನಾಡಿಕೊಂಡಿದ್ದ.ರವಿವಾರ ದಿನ ಸಿಬ್ಬಂದಿಗಳು ಹಾಗೂ ಕಾರ್ಮಿಕರು ಯಾರೂ ಇರುವುದಿಲ್ಲ.ಬಾಲಕಿಯ ತಂದೆ-ತಾಯಿ ಕೂಡಾ ಮದ್ಯದ ನಶೆಯಲ್ಲಿರುತ್ತಾರೆ.ರವಿವಾರ ನೋಡುವಾ ಎಂದು ಮಾತನಾಡಿಕೊಂಡಿದ್ದರು.ನ.20ರಂದು 4ನೇ ಆರೋಪಿ ಮುಖೇಶ್ ಸಿಂಗ್ 3ನೇ ಆರೋಪಿ ಮುನೀಮ್ ಸಿಂಗ್‌ನ ಮನೆಗೆ ಬಂದಾಗ ಈ ವಿಚಾರದ ಬಗ್ಗೆ ಚರ್ಚೆ ಮಾಡಿದ್ದು ಮುಖೇಶ್ ಸಿಂಗ್ ಕೂಡ ಸೇರಿಕೊಂಡಿದ್ದ ಎಂದೂ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದರು.
ಘಟನೆಯ ದಿನ:
ಘಟನೆ ನಡೆದ ನ.21ರಂದು ಮಧ್ಯಾಹ್ನ ಒಂದು ಗಂಟೆ ವೇಳೆಗೆ ಬಾಲಕಿಯು ತನ್ನ ಸಹೋದರ, ಸಹೋದರಿಯರೊಂದಿಗೆ ಫ್ಯಾಕ್ಟರಿಯ ಕಂಪೌಂಡಿನ ಒಳಗಡೆ ಇರುವ ನೀರಿನ ಟ್ಯಾಂಕ್ ಬಳಿ ಆಟವಾಡುತ್ತಿದ್ದ ಸಂದರ್ಭದಲ್ಲಿ ನಾಲ್ವರು ಆರೋಪಿಗಳು ಸೇರಿಕೊಂಡು ಬಾಲಕಿಯ ಬಾಯಿಯನ್ನು ಕೈಯಿಂದ ಮುಚ್ಚಿ, ಅಪಹರಿಸಿ ರೂಮಿನೊಳಗೆ ಕೊಂಡೊಯ್ದು ಕೃತ್ಯ ಎಸಗಿ ಬಳಿಕ ಕತ್ತು ಹಿಸುಕಿ ಕೊಲೆಗೈದು ತೋಡಿನ ಒಳಗಡೆ ಬಿಸಾಡಿದ್ದರು.ಮೂವರು ಆರೋಪಿಗಳು ಅತ್ಯಾಚಾರ ನಡೆಸಿದ ಬಳಿಕ ಬಾಲಕಿಯು ಮೃತ ಹೊಂದಿದ್ದರಿಂದ 4ನೇ ಆರೋಪಿ ಮುಖೇಶ್ ಸಿಂಗ್‌ಗೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಲು ಅವಕಾಶ ಸಿಕ್ಕಿರುವುದಿಲ್ಲ.ನಂತರ ಆರೋಪಿಗಳು ಘಟನೆಯ ವಿಷಯವನ್ನು ಯಾರಿಗೂ ಹೇಳಬೇಡಿ ಯಾರೂ ನೋಡಿರುವುದಿಲ್ಲ.ಅದೂ ಅಲ್ಲದೆ ನಾವು ಕೃತ್ಯ ನಡೆಸಿರುವ ಜಾಗದಲ್ಲಿ ಯಾವುದೇ ಸಿಸಿ ಕ್ಯಾಮರಾ ಇರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡಿರುವ ಕುರಿತು ಪರಸ್ಪರ ಮಾತನಾಡಿಕೊಂಡಿದ್ದರು.ನಂತರ ಮುನೀಮ್ ಸಿಂಗ್ ಹಾಗೂ ಮುಕೇಶ್ ಸಿಂಗ್ ಪುತ್ತೂರಿಗೆ ಹೋಗುವುದಾಗಿಯೂ, ಜಯಸಿಂಗ್ ಮತ್ತು ಮನೀಶ್ ತಿರ್ಕಿ ಫ್ಯಾಕ್ಟರಿಯಲ್ಲಿಯೇ ಇದ್ದು, ಯಾರಿಗೂ ಸಂಶಯ ಬಾರದ ರೀತಿಯಲ್ಲಿ ನಡೆದುಕೊಳ್ಳುವ ಕುರಿತೂ ಮಾತನಾಡಿಕೊಂಡು ಅಲ್ಲಿಂದ ಹೊರಟಿದ್ದರು ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಅಂದು ಮಾಹಿತಿ ನೀಡಿದ್ದರು.
ಅಂದು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ, ಪ್ರಸ್ತುತ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಆಗಿರುವ ಜಾನ್ಸನ್ ಡಿ’ಸೋಜ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದಲ್ಲಿ 30 ಸಾಕ್ಷಿಗಳು, 75 ದಾಖಲೆಗಳನ್ನು ಪರಿಗಣಿಸಿ ಮೂವರು ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ.ಅಲ್ಲದೆ ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ 1.20 ಲಕ್ಷ ರೂಪಾಯಿ ದಂಡ ತೆರುವಂತೆ ನ್ಯಾಯಾಧಿಶ ಮಾನು ಕೆ.ಎಸ್. ತೀರ್ಪು ನೀಡಿದ್ದಾರೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮೃತ ಬಾಲಕಿಯ ಕುಟುಂಬಕ್ಕೆ 3.8ಲಕ್ಷ ರೂ ಪರಿಹಾರ ನೀಡುವಂತೆಯು ನ್ಯಾಯಾಲಯ ಆದೇಶ ನೀಡಿದೆ. ನಾಲ್ಕನೇ ಆರೋಪಿ ಮುನೀಮ್ ಸಿಂಗ್ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗ ಜಾಮೀನಿನಲ್ಲಿ ಹೊರಬಂದು ತಲೆಮರೆಸಿ ಕೊಂಡಿದ್ದಾನೆ.ಹಾಗಾಗಿ ಆತನಿಗೆ ಶಿಕ್ಷೆ ಸದ್ಯ ವಿಧಿಸಲಾಗಿಲ್ಲ.
ದಂಡ ಪ್ರಕ್ರಿಯೆ ಸಂಹಿತೆ ಕಲಂ 357(ಎ) ಪ್ರಕಾರ ಮತ್ತು ಸಂಸ್ತಸ್ತರ ಪರಿಹಾರ ಯೋಜನೆಯಡಿ ಮೃತ ಬಾಲಕಿಯ ತಾಯಿಗೆ ಹೆಚ್ಚುವರಿಯಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 3.80 ಲಕ್ಷ ರೂ. ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.ಆರಂಭದಲ್ಲಿ ಸರಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ಸಂತ್ರಸ್ತರ ಪರವಾಗಿ ವಾದ ಮಂಡಿಸಿದ್ದರು. ಬಳಿಕ ವಿಶೇಷ ಸರಕಾರಿ ಅಭಿಯೋಜಕ ಕೆ.ಬದರಿನಾಥ ನಾಯರಿ ವಾದ ಮಂಡಿಸಿದ್ದರು.
ಮರಣ ದಂಡನೆಯ ಪ್ರಥಮ ಪೊಕ್ಸೋ ಪ್ರಕರಣ
ಉಳಾಯಿಬೆಟ್ಟುವಿನಲ್ಲಿ ಎಂಟರ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದ ಮೂವರು ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. ಮಂಗಳೂರಿನಲ್ಲಿ ಪೋಕ್ಸೋ ವಿಶೇಷ ನ್ಯಾಯಾಲಯ ಸ್ಥಾಪನೆಯಾದ ಬಳಿಕ ಮರಣ ದಂಡನೆ ವಿಧಿಸಲ್ಪಟ್ಟ ಪ್ರಥಮ ಪ್ರಕರಣ ಇದಾಗಿದೆ.
ಮೃತ ಬಾಲಕಿಯ ಕುಟುಂಬಕ್ಕೆ ನ್ಯಾಯ ಸಿಕ್ಕಿದೆ
ಎಂಟು ವರ್ಷದ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರಗೈದು ಹತ್ಯೆಗೈದ ಅಮಾನುಷ ಕೃತ್ಯಕ್ಕೆ ಸಂಬಂಧಿಸಿ ನ್ಯಾಯಾಲಯ ಉತ್ತಮ ತೀರ್ಪು ನೀಡಿದೆ.ಈ ಮೂಲಕ ಮೃತ ಬಾಲಕಿಯ ಕುಟುಂಬಕ್ಕೆ ನ್ಯಾಯ ಸಿಕ್ಕಿದಂತಾಗಿದೆ ಎಂದು, ಪ್ರಕರಣದ ತನಿಖಾಧಿಕಾರಿಯಾಗಿದ್ದು ಪ್ರಸ್ತುತ ಪುತ್ತೂರು ನಗರ ಪೊಲೀಸ್ ಠಾಣೆಯ ನಿರೀಕ್ಷಕರಾಗಿರುವ ಜಾನ್ಸನ್ ಡಿ’ಸೋಜ ಅವರು ಪ್ರತಿಕ್ರಿಯಿಸಿದ್ದಾರೆ.