ಪುತ್ತೂರು: ವಕ್ಫ್ ಭೂಮಿ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಂದಿಸಿದ ಸಂದೇಶವನ್ನು ಕಂದಾಯ ಇಲಾಖೆಯ ಉಪ್ಪಿನಂಗಡಿ ಗ್ರಾಮ ಮಟ್ಟದ ಅಧಿಕಾರಿಯೋರ್ವರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಇದರ ಬಗ್ಗೆ ಮಾಹಿತಿ ಪಡೆದ ಶಾಸಕರು ಈ ಅಧಿಕಾರಿಯನ್ನು ಪ್ರಶ್ನಿಸಿದ್ದು, ಆಗ ಆತ ಕ್ಷಮೆಯಾಚಿಸಿದ್ದಾನೆ ಎಂದು ತಿಳಿದು ಬಂದಿದೆ.
‘ಐ ಎಮ್ ಹಿಂದೂ’ ಎಂಬ ವಾಟ್ಸಪ್ ಗ್ರೂಪ್ ನಲ್ಲಿ ಕೆಲ ದಿನಗಳ ಹಿಂದೆ 9740842083 ಎಂಬ ಮೊಬೈಲ್ ನಂಬರಿನಿಂದ ಸಂದೇಶವೊಂದು ಬಂದಿದ್ದು, ಅದರಲ್ಲಿ ‘ತಾವು ಕುರುಬ, ಹಿಂದುಳಿದ, ತುಳಿತಕ್ಕೊಳಗಾದ ಸಮುದಾಯ, ಅಹಿಂದ ರಕ್ಷಕ ಎಂಬ ಕಾರಣಕ್ಕಾಗಿ ಸಿದ್ದರಾಮಯ್ಯನವರನ್ನು ಕುರುಡಾಗಿ ಬೆಂಬಲಿಸುವ ಅವರ ಅಭಿಮಾನಿಗಳೇ, ಈಗ ಕುರುಬರ ಕುಲದೈವ ಬೀರೇಗುಡಿಯೂ ವಕ್ಫ್ ಆಸ್ತಿಯಂತೆ!’ ಎಂದು ಬರೆದು ಅದರ ಕೆಳಗಡೆ ಆರ್‌ಟಿಸಿಯೊಂದರ ಪ್ರತಿಯನ್ನಿಟ್ಟು, ಅದರ ಕೆಳಗಡೆ ‘ಈಗಲಾದರೂ ವಕ್ಫ್ ತಿದ್ದುಪಡಿ ಮಾಡಬೇಕೆಂದು ಆಗ್ರಹಿಸುತ್ತೀರೋ? ಅಥವಾ ಇನ್ನೂ ಅವರನ್ನೇ ಬೆಂಬಲಿಸುವಿರೋ? ಆಯ್ಕೆ ನಿಮ್ಮದು’ ಎಂದು ಬರೆದಿತ್ತು. ಈ ಸಂದೇಶ ವಾಟ್ಸಪ್ ಗ್ರೂಪಿನಲ್ಲಿ ಹಂಚಿಕೊಂಡ ಕೆಲ ಹೊತ್ತಿನ ಬಳಿಕ ಅದನ್ನು ಡಿಲೀಟ್ ಮಾಡಲಾಗಿತ್ತು.
ಆ ಬಳಿಕ ಇದು ಉಪ್ಪಿನಂಗಡಿ ಗ್ರಾಮಾಧಿಕಾರಿ ಜಯಚಂದ್ರ ಎಂಬವರು ವಾಟ್ಸಪ್ ನಲ್ಲಿ ಹಂಚಿಕೊಂಡ ಸಂದೇಶ. ಸರಕಾರಿ ಅಧಿಕಾರಿಗಳಿಂದಾಗಿಯೇ ಇಂದು ಹಿಂದು ಮುಸ್ಲಿಮರ ನಡುವೆ ವೈ ಮನಸ್ಸು ಉಂಟಾಗಿ ವಿಕೋಪಕ್ಕೆ ಹೋಗುತ್ತಿದೆ. ಸಂಬಂಧಪಟ್ಟ ಸರಕಾರಿ ಅಧಿಕಾರಿಗಳು ಉಪ್ಪಿನಂಗಡಿ ವಿಎ ಜಯಚಂದ್ರನ ಮೇಲೆ ಕ್ರಮ ಕೈಗೊಳ್ಳವರೇ ಕಾದು ನೋಡೋಣ ಎಂಬ ಸಂದೇಶವೂ ವಾಟ್ಸಪ್ ಗ್ರೂಪ್‌ಗಳಲ್ಲಿ ಹರಿದಾಡತೊಡಗಿತ್ತು.
ಇದು ಶಾಸಕರ ಗಮನಕ್ಕೂ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸರಕಾರದ ವಿರುದ್ಧ ಸರಕಾರಿ ನೌಕರ ಸಂದೇಶ ಕಳುಹಿಸಿರುವುದನ್ನು ಪ್ರಶ್ನಿಸಿದ್ದರು. ಈ ವೇಳೆ ಬೇರೆಯವರು ಕಳುಹಿಸಿರುವ ಸಂದೇಶ ಫಾರ್ವಡ್ ಆಗಿದೆ ಎಂದು ತಿಳಿಸಿ, ಕ್ಷಮೆಯಾಚಿಸಿದ್ದಾರೆ ಎಂದು ತಿಳಿದು ಬಂದಿದೆ.